ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಳೆದ ಜನವರಿಯಲ್ಲಿ ಸ್ಥಗಿತಗೊಂಡಿದ್ದ ವಿಮಾನಗಳು ರಾತ್ರಿ ಇಳಿಯುವ (ಲ್ಯಾಂಡಿಂಗ್) ವ್ಯವಸ್ಥೆಯ ಅಳವಡಿಕೆ ಕೆಲಸವನ್ನು ಪುನರ್ ಆರಂಭಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಅನುಮೋದನೆ ನೀಡಿದ್ದಾರೆ. ಕರ್ನಾಟಕ ಲೋಕೋಪಯೋಗಿ ಇಲಾಖೆ ಈ ಕೆಲಸದ ಅನುಷ್ಠಾನದ ಕಾರ್ಯವಾಹ ಸಂಸ್ಥೆಯಾಗಿದೆ.
ಕೆಲಸಕ್ಕೆ ಸಂಬಂಧಿಸಿದ ರೇಖಾಚಿತ್ರಗಳು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಪರಿಕಲ್ಪನೆ/ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯ ಮಟ್ಟದ ಅನುಮೋದನೆಯನ್ನು ಡಿಜಿಸಿಎ ನೀಡಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಜಿಸಿಎ ಅನುಮತಿ ಪತ್ರವನ್ನು ಲಗತ್ತಿಸಿದ್ದಾರೆ.
ಕಳೆದ ಜನವರಿ ಹೊತ್ತಿಗೆ ರಾತ್ರಿ ವಿಮಾನ ಇಳಿಯುವಿಕೆ ವ್ಯವಸ್ಥೆಯ ಶೇ 65ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸ ಪೂರ್ಣಗೊಳ್ಳಲು ಕನಿಷ್ಟ ಎರಡು ತಿಂಗಳು ಬೇಕಾಗುತ್ತದೆ ಮತ್ತು ಎಲ್ಲಾ ಹವಾಮಾನ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ ಮೊದಲು ಪೂರ್ಣಗೊಂಡ ಯೋಜನೆಯನ್ನು ಡಿಜಿಸಿಎ ಮರುಪರಿಶೀಲಿಸುತ್ತದೆ.
ಈ ಎಲ್ಲಾ ಪ್ರಕ್ರಿಯೆಗೆ 3ರಿಂದ 4 ತಿಂಗಳು ತೆಗೆದುಕೊಳ್ಳಬಹುದು. ಈ ಚಳಿಗಾಲದ ಋತುವಿನ ಆಗಮನದ ಮೊದಲು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ ಕಾರ್ಯಾಚರಣೆಗೆ ನವೀಕರಿಸಲಾಗುತ್ತದೆ. ಪ್ರಯಾಣಿಕರ ಅನಾನುಕೂಲತೆಗಳನ್ನು ನಿವಾರಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿಐಎಸ್‌ಎಲ್ ಪುನರುಜ್ಜೀವನ; ಎಚ್‌ಡಿಕೆಗೆ ಮನವಿ
ದೆಹಲಿಯಲ್ಲಿ ಮಂಗಳವಾರ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪಟ್ಟಿಯಿಂದ ಕೈಬಿಟ್ಟು ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯ ಬಂಡವಾಳ ಹೂಡುವಂತೆ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (ಎಸ್‌ಎಐಎಲ್) ನಿರ್ದೇಶನ ನೀಡುವಂತೆ ಕೋರಿದರು. ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನಗೊಳಿಸಿದರೆ ಕರ್ನಾಟಕದಲ್ಲಿ ಕೈಗಾರಿಕೆ ಅಭಿವೃದ್ಧಿ ಅಷ್ಟೇ ಅಲ್ಲದೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಜೊತೆಗೆ ಈ ಭಾಗದ ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುತ್ತದೆ ಎಂಬ ಅಂಶವನ್ನು ಮನವರಿಕೆ ಮಾಡಿ ಕೊಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭದ್ರಾವತಿ ವಿಐಎಸ್ಎಲ್ ನೌಕರರ ಸಂಘದ ಪದಾಧಿಕಾರಿಗಳಾದ ಜೆ.ಜಗದೀಶ ಕೆ.ಬಿ.ಮಲ್ಲಿಕಾರ್ಜುನ ಅಮೃತ್ ಕುಮಾರ್ ಕೆ.ಆರ್.ಮನು ಎಸ್.ಮೋಹನ್ ಹಾಗೂ ಗುತ್ತಿಗೆ ಕಾರ್ಮಿಕ ನೌಕರರ ಪರವಾಗಿ ಎಸ್.ವಿನೋದ್ ಕುಮಾರ್ ಜೆ. ಕಿರಣ್ ಮತ್ತು ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.