ADVERTISEMENT

ಆನವಟ್ಟಿ: ಪತಿಯ ಮರಣ ಪ್ರಮಾಣಪತ್ರಕ್ಕೆ ಅಲೆದಾಡುತ್ತಿರುವ ಅಂಗವಿಕಲೆ

ರವಿ ಆರ್.ತಿಮ್ಮಾಪುರ
Published 9 ಮಾರ್ಚ್ 2024, 5:17 IST
Last Updated 9 ಮಾರ್ಚ್ 2024, 5:17 IST
ಕಮಲಮ್ಮ
ಕಮಲಮ್ಮ   

ಆನವಟ್ಟಿ: ಇವರ ಪತಿ ರಸ್ತೆ ಅಪಘಾತ ವೊಂದರಲ್ಲಿ ಸಾವಿಗೀಡಾಗಿ ಆರು ವರ್ಷಗಳು ಕಳೆದರೂ ಈವರೆಗೆ ಮರಣ ಪ್ರಮಾಣಪತ್ರ ದೊರೆತಿಲ್ಲ. ಪೋಲಿಯೊದಿಂದ ಅಂಗವಿಕಲೆಯಾಗಿರುವ ಮಹಿಳೆ ಸ್ಥಳೀಯ ಸಂಸ್ಥೆ ಹಾಗೂ ತಹಶೀಲ್ದಾರ್‌ ಕಚೇರಿಗೆ ಎಷ್ಟೇ ಅಲೆದಾಡಿದರೂಪ್ರಯೋಜನ ಆಗುತ್ತಿಲ್ಲ. ಮರಣ ಪ್ರಮಾಣಪತ್ರ ಸಿಗುವವರೆಗೆ ಸರ್ಕಾರದ ಸೌಲಭ್ಯಗಳೂ ಸಿಗುತ್ತಿಲ್ಲ.

ಈ ಕಾರಣದಿಂದಲೇ ಬಡತನದ ಹಿನ್ನೆಲೆಯ ಈ ಮಹಿಳೆ ‘ಜೀವನವೇ ಸಾಕು’ ಎನ್ನುವಷ್ಟರ ಮಟ್ಟಿಗೆ ಹೈರಾಣಾಗಿದ್ದಾರೆ.

ಸೊರಬ ತಾಲ್ಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿಮ್ಮಾಪುರ ಗ್ರಾಮದ ನಿವಾಸಿ ಕಮಲಮ್ಮ ಅವರೇ ಸಂಕಷ್ಟಕ್ಕೆ ಈಡಾದವರು.

ADVERTISEMENT

ಇವರ ಪತಿ ತಿರುಕಪ್ಪ 2018ರ ಡಿಸೆಂಬರ್‌ 7ರಂದು ಆನವಟ್ಟಿಯ ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಬೈಕ್ ಒಮದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಾಗಿರುವ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯ ಮೃತಪಟ್ಟಿದ್ದರು.

ಆದರೆ, ಈವರೆಗೂ ಅವರ ಮರಣ ಪ್ರಮಾಣಪತ್ರ ಸಿಕ್ಕಿಲ್ಲ. ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿರಿಸಿ ಪ್ರಮಾಣಪತ್ರ ನೀಡಲು ಸಂಬಂಧಿಸಿದ ಇಲಾಖೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಮೃತಪಟ್ಟ ನಂತರ ತಿರುಕಪ್ಪ ಅವರ ಪತ್ನಿ ಕಮಲಮ್ಮ ಅವರು ಮರಣ ಪ್ರಮಾಣಪತ್ರ ನೀಡುವಂತೆ ಮೆಗ್ಗಾನ್ ಆಸ್ಪತ್ರೆ ವೈದ್ಯರನ್ನು ಕೇಳಿದ್ದರು. ಆದರೆ, ಆಸ್ಪತ್ರೆ ಒಳರೋಗಿಯಾಗಿ ದಾಖಲಾಗುವ ಮೊದಲೇ ಮಾರ್ಗಮಧ್ಯೆ ಸಾವಿಗೀಡಾಗಿದ್ದರಿಂದ ಮೊದಲು ದಾಖಲಾದ ಆಸ್ಪತ್ರೆಗೆ ಒಳಪಡುವ ಸ್ಥಳೀಯ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯುವಂತೆ ಸೂಚಿಸಿ ಪತ್ರ ನೀಡಲಾಗಿದೆ.

2018ರಲ್ಲಿ ಆನವಟ್ಟಿ ಇನ್ನೂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರಲಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಇತ್ತು. ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿಗೆ ಹೋಗಿ ಜಿಲ್ಲಾ ಆಸ್ಪತ್ರೆಯಿಂದ ನೀಡಲಾದ ಪತ್ರ ಹಾಗೂ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ತೋರಿಸಿದ್ದರು. ಆದರೂ ಅಧಿಕಾರಿಗಳು ‘ಇಲ್ಲಿ ಮರಣ ಪ್ರಮಾಣಪತ್ರ ನೀಡಲು ಬರುವುದಿಲ್ಲ. ಶಿವಮೊಗ್ಗದಲ್ಲೇ ಪಡೆದುಕೊಳ್ಳಬೇಕು’ ಎಂದು ಹೇಳಿ ಸಾಗಹಾಕಿದ್ದರು.

‘ಅವರ ಸೂಚನೆಯಂತೆ ಶಿವಮೊಗ್ಗದ ಸಂಬಂಧಪಟ್ಟ ಕಚೇರಿಗೆ ಹೋಗಿ ಕೇಳಿದಾಗ, ಆನವಟ್ಟಿಯಲ್ಲಿ ಮರಣ ದಾಖಲೆ ಪಡದುಕೊಳ್ಳಬೇಕು ಎಂದು ತಿಳಿಸಿದ್ದರು. ಆಗಿಂದಲೂ ಸರ್ಕಾರಿ ಕಚೇರಿಗೆ ಅಲೆದಾಡಿ ಸುಸ್ತಾಗಿದೆ’ ಎಂದು ಕಮಲಮ್ಮ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಆರ್ಥಿಕವಾಗಿ ಬಹಳ ತೊಂದರೆ ಇದ್ದರೂ ಇಬ್ಬರು ಪುತ್ರಿಯರನ್ನು ಮದುವೆ ಮಾಡಿಕೊಟ್ಟಿದ್ದು, ಪತಿಯನ್ನು ಕಳೆದುಕೊಂಡಿರುವ ಈ ಮಹಿಳೆ ಬಳಿ ಈಗ ಯಾರೂ ಇಲ್ಲ. ಅಂಗವೈಕಲ್ಯ ಹೊಂದಿರುವುದಕ್ಕೂ ಇವರಿಗೆ ಸರ್ಕಾರದಿಂದ ಮಾಸಾಶನ ಸಿಗುತ್ತಿಲ್ಲ. ಪತಿಯ ಮರಣ ಪ್ರಮಾಣಪತ್ರ ಇಲ್ಲದ್ದರಿಂದ ವಿಧವಾ ವೇತನವೂ ಸಿಗುತ್ತಿಲ್ಲ. ಪತಿ ಅಪಘಾತದಲ್ಲಿ ಮೃತರಾಗಿದ್ದರಿಂದ ವಿಮೆ ಹಣ ಪಡೆದುಕೊಳ್ಳಲೂ ಮರಣ ಪ್ರಮಾಣಪತ್ರದ ಅಗತ್ಯವಿದೆ. ಆದರೆ, ಅದು ಸಿಗದ್ದರಿಂದ ಇವರ ಬವಣೆ ಮುಗಿಯುತ್ತಿಲ್ಲ.

‘‌ತಾಯಿಗೆ ಪಡಿತರ ಅಕ್ಕಿ ಮಾತ್ರ ಬರುತ್ತಿದೆ. ನಾನೇ ಸ್ವಲ್ಪ ಹಣವನ್ನು ಅವರಿಗೆ ಕೊಡುತ್ತಿದ್ದೇನೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ತಂದೆಯ ಮರಣ ಪ್ರಮಾಣಪತ್ರ ಕೊಡಿಸಲು ಸಂಬಂಧಪಟ್ಟ ಅಧಿಕಾರಿಗಳು ನೆರವಾಗಬೇಕು ಎಂದು ಕಮಲಮ್ಮ ಅವರ ಹಿರಿಯ ಪುತ್ರಿ ಅಶ್ವಿನಿ ಕೋರುತ್ತಾರೆ.

ಈಗ ಪ್ರಮಾಣಪತ್ರ ನೀಡಲು ಬರಲ್ಲ

ವ್ಯಕ್ತಿಯೊಬ್ಬರ ಮರಣ ಸಂಭವಿಸಿ 21 ದಿವಸ ಅಥವಾ 30 ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಮಾಣಪತ್ರ ತೆಗೆದುಕೊಳ್ಳಬೇಕು. ಆದರೆ ಘಟನೆ ನಡೆದು ವರ್ಷಗಳೇ ಕಳೆದಿವೆ. ಈಗ ಮರಣ ದಾಖಲೆ ಬರೆದುಕೊಡಲು ಬರುವುದಿಲ್ಲ. ಅಲಭ್ಯ ಪ್ರಮಾಣಪತ್ರ ನೀಡಲಾಗುವುದು. ಅದನ್ನು ಕೋರ್ಟ್‌ಗೆ ನೀಡಬೇಕು. ಕೋರ್ಟ್‌ ಆದೇಶದ ನಂತರದಲ್ಲಿ ಸಂಬಂಧಪಟ್ಟವರು ಮರಣ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳುವರು ಎಂದು ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ್ ಎ. ಹಾಳಕಲ್ಲಾಪುರ ತಿಳಿಸಿದ್ದಾರೆ.

ಅಧಿಕಾರಿಗಳು ಕರುಣೆ ತೋರಲಿ

‘ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇರುವಾಗ ಕೋರ್ಟ್‌ಗೆ ಹೋಗಲು ಕಷ್ಟವಾಗುತ್ತದೆ. ವಕೀಲರ ಶುಲ್ಕ ಕೋರ್ಟ್‌ ಶುಲ್ಕ ಸೇರಿ ವಿವಿಧ ಖರ್ಚುಗಳನ್ನು ನಿಭಾಯಿಸುವ ಶಕ್ತಿ ನನಗೆ ಇಲ್ಲ. ಪೋಲಿಯೊದಿಂದ ಬಲಗಾಲು ಸ್ವಾಧೀನ ಇಲ್ಲದ ಕಾರಣ ಓಡಾಡುವುದೂ ಕಷ್ಟವಾಗಿದೆ. ಕರೆದುಕೊಂಡು ಹೋಗಲೂ ಯಾರು ಇಲ್ಲ. ಪತಿಯ ಮರಣ ಪ್ರಮಾಣಪತ್ರ ಸಿಕ್ಕರೆ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕರುಣೆ ತೋರಿ ಪ್ರಮಾಣಪತ್ರ ಕೊಡಿಸಬೇಕು’ ಎಂದು ಕಮಲಮ್ಮ ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.