ADVERTISEMENT

ಕೇಂದ್ರ ಸರ್ಕಾರದಿಂದ ಅನುದಾನ ವಿತರಣೆಯಲ್ಲಿ ತಾರತಮ್ಯ: ಆಯನೂರು ಮಂಜುನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:53 IST
Last Updated 6 ಫೆಬ್ರುವರಿ 2024, 15:53 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಸಾಗರ: ‘ರಾಜ್ಯ ಸರ್ಕಾರಗಳು ಪಾವತಿಸುವ ತೆರಿಗೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗಿದೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ದೂರಿದ್ದಾರೆ.

‘ರಾಜ್ಯವು ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ನೀಡಬೇಕಾದ ₹ 18,000 ಕೋಟಿ ಅನುದಾನವನ್ನು ಬಿಡುಗಡೆ ಮಾಡದೆ ವಂಚಿಸುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ 26 ಸಂಸದರು ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ, ಅವರು ರಾಜ್ಯಕ್ಕೆ ಆಗುತ್ತಿರುವ ವಂಚನೆಯ ಬಗ್ಗೆ ಚಕಾರವೆತ್ತದೆ ಇರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಒಂದು ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಆಡಳಿತ ಪಕ್ಷದ ಶಾಸಕರು ಅನುದಾನ ಬಿಡುಗಡೆಯಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ರಾಜ್ಯ ಬಿಜೆಪಿ ನಾಯಕರು ಅನುದಾನ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ತರುವ ಬದಲು ವಿಕೃತ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ಮೋದಿಯವರು ವಂಶಪಾರಂಪರ್ಯ ರಾಜಕಾರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಆದರೆ ಕರ್ನಾಟಕದ ಬಿಜೆಪಿಯಲ್ಲಿ ವಂಶಪಾರಂಪರ್ಯದ ರಾಜಕಾರಣವೇ ವಿಜೃಂಭಿಸುತ್ತಿದೆ. ಮೋದಿಯವರು ಹೇಳುತ್ತಿರುವ ದೇಶದ ಪರಿಕಲ್ಪನೆಯಲ್ಲಿ ಕರ್ನಾಟಕ ಕೂಡ ಇದೆ ಎಂಬುದನ್ನು ಅವರು ಮರೆತಂತಿದೆ’ ಎಂದು ದೂರಿದರು.

ತೆರಿಗೆ ಸಂಗ್ರಹಣೆಯ ಆದಾಯದ ಬಾಬ್ತನ್ನು ಸಂಗ್ರಹಿಸುವಲ್ಲಿ ಕರ್ನಾಟಕ ಹಿಂದೆ ಬಿದ್ದಿದ್ದು ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆಗೆ ಉತ್ತರಿಸಿದ ಅವರು, ವಿಜಯೇಂದ್ರ ಅವರು ಶಾಸಕರು ಕೂಡ ಆಗಿದ್ದಾರೆ. ರಾಜ್ಯ ಸರ್ಕಾರ ಯಾವ ವಿಭಾಗದಲ್ಲಿ ಎಡವಿದೆ ಎಂಬುದನ್ನು ವಿಧಾನಸಭೆಯ ಅಧಿವೇಶನದಲ್ಲಿ ಹೇಳಬೇಕೆ ಹೊರತು ಪತ್ರಿಕಾ ಹೇಳಿಕೆ ಮೂಲಕವಲ್ಲ ಎಂದರು.

ಕಾಂಗ್ರೆಸ್ ನ ಪ್ರಮುಖರಾದ ಬಿ.ಆರ್.ಜಯಂತ್, ಐ.ಎನ್.ಸುರೇಶ್ ಬಾಬು, ಮಲ್ಲಿಕಾರ್ಜುನ ಹಕ್ರೆ, ವೈ.ಎಚ್.ನಾಗರಾಜ್, ಸುರೇಶ್, ಕೆ.ಎಂ.ಸೂರ್ಯನಾರಾಯಣ, ಮಹಾಬಲ ಕೌತಿ, ಗಣಪತಿ ಮಂಡಗಳಲೆ, ಡಿ.ದಿನೇಶ್, ತಾರಾಮೂರ್ತಿ, ಗಿರೀಶ್ ಕೋವಿ ಇದ್ದರು.

‘ಹಾದಿ ತಪ್ಪಿ ಬಂದವರು ಮರಳಿ ಬಿಜೆಪಿಗೆ ಹೋಗುತ್ತಿದ್ದಾರೆ’ ‘
ಬಿಜೆಪಿಯಿಂದ ಬೇರೆ ಪಕ್ಷಗಳಿಗೆ ಹೋದ ಕೆಲವರು ಮರಳಿ ಅಲ್ಲಿಗೆ ಹೋಗುತ್ತಿದ್ದಾರೆ. ನೀವು ಕೂಡ ಘರ್ ವಾಪಸಿ ಕರೆಗೆ ಓಗೊಡುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ ‘ಹಾದಿ ತಪ್ಪಿ ಬಂದವರು ಮಾತ್ರ ಮರಳಿ ಬಿಜೆಪಿಗೆ ಹೋಗುತ್ತಿದ್ದಾರೆ. ಕೆಲವರಿಗೆ ಸಿಬಿಐ ಇಡಿ ಐಟಿ ಇಲಾಖೆಯ ಬೆದರಿಕೆ ತೋರಿಸಿ ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಆ ರೀತಿ ಇಕ್ಕಳಕ್ಕೆ ಸಿಲುಕುವ ವ್ಯಕ್ತಿ ನಾನಲ್ಲ’ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.