ADVERTISEMENT

ತೀರ್ಥಹಳ್ಳಿ: ಅಡಿಕೆಗೆ ವ್ಯಾಪಕ ಕೊಳೆ ರೋಗ

4,000 ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿದ ನೀರುಕೊಳೆ, ಔಷಧ ಸಿಂಪಡಣೆಗೆ ಮಳೆ ಅಡ್ಡಿ, ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ನಿರಂಜನ ವಿ.
Published 7 ಆಗಸ್ಟ್ 2024, 6:31 IST
Last Updated 7 ಆಗಸ್ಟ್ 2024, 6:31 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬೀಸಿದ ಬಾರಿ ಗಾಳಿಗೆ ಉದುರಿದ ತೆನೆಹೊತ್ತ ಅಡಿಕೆ ಮರ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬೀಸಿದ ಬಾರಿ ಗಾಳಿಗೆ ಉದುರಿದ ತೆನೆಹೊತ್ತ ಅಡಿಕೆ ಮರ   

ತೀರ್ಥಹಳ್ಳಿ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ಬೆಳೆಗೆ ವ್ಯಾಪಕವಾಗಿ ನೀರುಕೊಳೆ, ಬೂದುಕೊಳೆ ರೋಗ ಬಾಧಿಸಿದೆ. ಕೊಳೆರೋಗ ತಾಲ್ಲೂಕು ವ್ಯಾಪಿಸಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವಾಗದೆ ಬೆಳೆಗಾರರು ಕೈಚೆಲ್ಲಿದ್ದಾರೆ.

ಸುತ್ತಮುತ್ತಲ ಒಟ್ಟು 16,447 ಹೆಕ್ಟೇರ್‌ ಸಾಗುವಳಿ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಮಳೆಯಿಂದಾಗಿ 4,000 ಹೆಕ್ಟೇರ್‌ ಪ್ರದೇಶಕ್ಕೆ ಈಗಾಗಲೇ ಕೊಳೆರೋಗ ಬಾಧಿಸಿದೆ. ಒಟ್ಟು ಬೆಳೆಯ ಶೇ 25ರಷ್ಟು ಪ್ರದೇಶದಲ್ಲಿರುವ ಕೊಳೆರೋಗ ಮಳೆ ಹೀಗೇ ಮುಂದುವರಿದರೆ ದ್ವಿಗುಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪಹಣಿ ಹೊಂದಿರುವ ಪ್ರದೇಶವಲ್ಲದೇ ಬಗರ್‌ಹುಕುಂ, ಅರಣ್ಯ ಸಾಗುವಳಿ ಪ್ರದೇಶದಲ್ಲೂ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಅಂದಾಜು 2,000 ಹೆಕ್ಟೇರ್‌ ಬಗರ್‌ಹುಕುಂ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ಈಚೆಗೆ ಭತ್ತದ ಬದಲಿಗೆ ತರಿ ಜಮೀನಿನಲ್ಲೂ ಅಡಿಕೆ ಬೆಳೆ ಹೆಚ್ಚುತ್ತಿದೆ.

ADVERTISEMENT

ಮೇ ತಿಂಗಳಲ್ಲಿ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿದೆ. ಮಳೆಯ ರೌದ್ರಾವತಾರಕ್ಕೆ ನದಿ, ಹಳ್ಳಕ್ಕೆ ಹೊಂದಿಕೊಂಡ ಬಹುತೇಕ ತೋಟಗಳಲ್ಲಿ ವಾರಗಟ್ಟಲೆ ನೆರೆ ನಿಂತಿದೆ. ಶೀತ, ಥಂಡಿ ವಾತಾವರಣದಿಂದ ಕೊಳೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿಯಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ 24 ಸೆಂ.ಮೀ, ಜೂನ್‌ನಲ್ಲಿ 37.78 ಸೆಂ.ಮೀ, ಜುಲೈನಲ್ಲಿ 177.82 ಸೆಂ.ಮೀ. ಮಳೆಯಾಗಿದೆ. ಒಟ್ಟಾರೆ ಜನವರಿ ತಿಂಗಳಿನಿಂದ 242.46 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 42ರಷ್ಟು ಹೆಚ್ಚು ಮಳೆ ಸುರಿದಿದೆ. ಆಗುಂಬೆ ಹೋಬಳಿಯಲ್ಲಿ ಶೇ 22ರಷ್ಟು ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದಿದೆ.

ಔಷಧ ಸಿಂಪಡಣೆ ಸವಾಲು

ಅಡಿಕೆ ಫಸಲನ್ನು ಸಂರಕ್ಷಿಸಿಕೊಳ್ಳಲು ಒಂದೆರಡು ಸುತ್ತಿನ ಕೊಳೆರೋಗ ನಿಯಂತ್ರಣದ ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗಿದೆ. ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕೊಳೆ ರೋಗದ ಔಷಧ ಸಿಂಪಡಣೆ ಸವಾಲಿನ ಕೆಲಸವಾಗಿದೆ. ಒಂದು ಎಕರೆ ಅಡಿಕೆ ತೋಟದ ಪ್ರದೇಶಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲು ಅಂದಾಜು ₹ 10,000ದಿಂದ ₹ 12,000 ವೆಚ್ಚವಾಗಲಿದೆ. ಮಳೆ ಇದ್ದಾಗಲೇ ಔಷಧಿ ಸಿಂಪಡಿಸಿದರೆ ಮಳೆಯಲ್ಲಿ ತೊಳೆದು ಹೋಗುತ್ತದೆ. ಬೆಳೆ ರಕ್ಷಿಸಿಕೊಳ್ಳಲು 4ರಿಂದ 5 ಬಾರಿ ಔಷಧ ಸಂಪಡಿಸಬೇಕು.

ಗಾಳಿಗೆ ಉದುರಿದ ಅಡಿಕೆ

‘ಇನ್ನೇನು ಅಡಿಕೆ ಕೊಯ್ಲು ಸಮೀಪಿಸುತ್ತಿದೆ. ರೋಗಗಳ ನಡುವೆಯೂ ಅಡಿಕೆ ಗೊನೆ ರಕ್ಷಿಸುತ್ತೇವೆ’ ಎಂದುಕೊಳ್ಳುತ್ತಿದ್ದ ರೈತಾಪಿ ವರ್ಗದಲ್ಲಿ ಇದೀಗ ಆತಂಕದ ಗೆರೆಗಳು ಮೂಡುತ್ತಿದೆ. ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಗೆ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ಗಾಳಿ ಹೆಚ್ಚಾಗಿ ಬೀಸಿದ್ದರಿಂದ ಒಂದು ಮರ ಮತ್ತೊಂದು ಮರಕ್ಕೆ ತಾಗಿ ಉಜ್ಜಿಕೊಂಡಿದ್ದು, ಕಾಯಿಗಳು ಬರಬರನೆ ನೆಲಕ್ಕುರುಳಿವೆ. ಕೊಳೆರೋಗದ ಪ್ರಮಾಣಕ್ಕಿಂತಲೂ ಗಾಳಿಯಿಂದ ಅರ್ಧಕ್ಕರ್ಧ ಬೆಳೆ ಹಾನಿಯಾಗಿದೆ.

ಶೇ 90ರಷ್ಟು ಅಡಿಕೆ ತೋಟ ಕೊಳೆಗೆ ಹಾಳಾಗಿದೆ. ಒಂದು ಎಕರೆ ಔಷಧ ಸಿಂಪಡಣೆಗೆ ಕನಿಷ್ಠ ₹ 10000 ಖರ್ಚಾಗುತ್ತದೆ. ಸರ್ಕಾರ ಕೊಡುವ ₹ 470 ಸಬ್ಸಿಡಿ ಯಾವುದಕ್ಕೂ ಸಾಲುವುದಿಲ್ಲ.
ಪವನ್‌ ಎಚ್.ಎಸ್, ಅಡಿಕೆ ಬೆಳೆಗಾರ, ಗುಂಡಗದ್ದೆ
ನಿರಂತರ ಮಳೆಗೆ ಕೊಳೆರೋಗ ಹೆಚ್ಚಿದೆ. ಫಸಲು ಕೈಸೇರುವ ಭರವಸೆ ಇಲ್ಲ. ಬೆಳೆ ಹಾನಿಗೆ ಸರ್ಕಾರ ತುರ್ತು ಪರಿಹಾರ ಘೋಷಿಸಬೇಕು. ಮೈಲುತುತ್ತ ಸಬ್ಸಿಡಿ ಅನುದಾನ ಹೆಚ್ಚಿಸಬೇಕು.
ರಾಮಚಂದ್ರ, ಅಡಿಕೆ ಬೆಳೆಗಾರ, ಕೊಪ್ಪಲು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೊಳೆರೋಗದ ಕಾರಣ ಅಡಿಕೆ ಕಾಯಿ ಉದುರುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೊಳೆರೋಗದಕಾರಣ ಅಡಿಕೆ ಕಾಯಿ ಉದುರುತ್ತಿರುವುದು
ಅಡಿಕೆ ಮರ ತಾಗಿ ಕಾಯಿ ಉದುರಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.