ADVERTISEMENT

ಶಿಕಾರಿಪುರ: ಮತ್ತೆ ಬಂತು ಹೋರಿ ಹಬ್ಬ

ಸಾವು ನೋವು ಸಂಭವಿಸದಂತೆ ಕ್ರಮಕ್ಕೆ ಆಯೋಜಕರ ವ್ಯವಸ್ಥೆ

ಎಚ್.ಎಸ್.ರಘು
Published 1 ನವೆಂಬರ್ 2024, 6:19 IST
Last Updated 1 ನವೆಂಬರ್ 2024, 6:19 IST
ಶಿಕಾರಿಪುರ ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬದ ದೃಶ್ಯ (ಸಂಗ್ರಹ ಚಿತ್ರ)
ಶಿಕಾರಿಪುರ ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬದ ದೃಶ್ಯ (ಸಂಗ್ರಹ ಚಿತ್ರ)   

ಶಿಕಾರಿಪುರ: ದೀಪಾವಳಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುವ ಹೋರಿ ಹಬ್ಬ ಮತ್ತೆ ಬಂದಿದೆ. ಅಂತೆಯೇ ಸಿದ್ಧತೆ ಗರಿಗೆದರಿದೆ. ಈ ಬಾರಿ ಹೋರಿಗಳ ಓಟ ನೋಡಲು ಬರುವ ಯಾರಿಗೂ ಅಪಾಯ ಆಗದಂತೆ, ಸಾವು–ನೋವು ಸಂಭವಿಸದಂತೆ ಸ್ಪರ್ಧೆ ಆಚರಿಸಲು ಸಂಘಟಕರು ಸಿದ್ಧತೆ ಕೈಗೊಂಡಿದ್ದಾರೆ.

ದೀಪಾವಳಿ ಬಂದರೆ ಹೋರಿ ಬೆದರಿಸುವ ರೋಮಾಂಚನಕಾರಿ ಸ್ಪರ್ಧೆ ವೀಕ್ಷಿಸಲು ಸುತ್ತಮುತ್ತಲಿನ ಜಿಲ್ಲೆಯವರೂ ಕಾತರದಿಂದ ಕಾಯುತ್ತಾರೆ. ಹಬ್ಬ ಆರಂಭದ ದಿನದಿಂದ ಮುಂದಿನ ಎರಡು ತಿಂಗಳವರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋರಿಗಳನ್ನು ಬೆದರಿಸುವ ಸ್ಪರ್ಧೆಗಳು ನಡೆಯುತ್ತವೆ.

ಹೋರಿಗಳ ಮಾಲೀಕರು ರಾಜ್ಯದ ಇತರೆ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡಿನಿಂದ ಸ್ಪರ್ಧೆಗೆ ಕರೆತರುತ್ತಾರೆ. ಉತ್ತಮ ಪ್ರದರ್ಶನ ತೋರುವ ಹೋರಿಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಈ ವರ್ಷವೂ ತಾಲ್ಲೂಕಿನಲ್ಲಿ ಹೋರಿ ಪ್ರಿಯರು ಲಕ್ಷಾಂತರ ರೂಪಾಯಿ ನೀಡಿ ಹೋರಿಗಳನ್ನು ಖರೀದಿಸಿ ತಂದಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ನೀಡಿ ಪೋಷಣೆಯಲ್ಲಿ ನಿರತರಾಗಿದ್ದಾರೆ.

ADVERTISEMENT

ಸ್ಪರ್ಧೆಯಲ್ಲಿ ಭಾಗಿಯಾಗುವ ಹೋರಿಗಳನ್ನು ಕೊಬ್ಬರಿ ಮಾಲೆ, ಬಲೂನ್‌, ಕಾಲ್ಗೆಜ್ಜೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿರುತ್ತಾರೆ. ಹೋರಿ ಹಬ್ಬದ ಸಂದರ್ಭದಲ್ಲಿ ಹೋರಿ ಮಾಲೀಕರು ‘ಹಾಕೋ ಕೈಯ್ಯಾ ಮುಟ್ಟೋ ಮೈಯ್ಯಾ’ ಎಂದು ಭಾವೋದ್ವೇಗದಿಂದ ಘೋಷಣೆ ಹಾಕುತ್ತಾ ಹೋರಿ ಹಿಂದೆ ಓಡುತ್ತಾರೆ.

ಹೋರಿಗಳಿಗೆ ತಮಗೆ ಇಷ್ಟವಾದ ದೇವರು ಹಾಗೂ ಸಿನಿಮಾದ ಹೆಸರುಗಳನ್ನು ಇಟ್ಟಿದ್ದು, ಹೋರಿಯ ಚಿತ್ರಗಳನ್ನು ಹಾಗೂ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ.

ಹೋರಿ ಹಬ್ಬ ನಡೆಯುವ ಸ್ಥಳದಲ್ಲಿ ವೀಕ್ಷಕರ ಸುರಕ್ಷತೆಗಾಗಿ ಸುತ್ತಲೂ ಮರದ ದಿಮ್ಮಿಗಳಿಂದ ಬೇಲಿ ನಿರ್ಮಿಸಬೇಕು.  ಗಾಯಗೊಂಡವರನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಬೇಕು. ತಿವಿಯುವ ಹೋರಿ ಬದಲು ಓಡುವ ಹೋರಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.

ಹಬ್ಬಕ್ಕೆ ಹೋರಿ ಮಾಲೀಕರ ಸಕಲ ಸಿದ್ಧತೆ ಹೊಸ ಹೋರಿಗಳ ಖರೀದಿಯೂ ಜೋರು ಸಾವು–ನೋವು ಸಂಭವಿಸದಂತೆ ಮುನ್ನೆಚ್ಚರಿಕೆ
ಹೋರಿ ಬೆದರಿಸುವುದು ರೈತರ ಹಬ್ಬವಾಗಿದೆ .ಇದು ಜಾನಪದ ಸಂಸ್ಕೃತಿಯ ಪ್ರತೀಕ. ರೈತರು ಈ ಸಂಸ್ಕೃತಿಯನ್ನು ಹೋರಿ ಹಬ್ಬದ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ
ಶಿವರಾಜ್ ಹೋರಿ ಹಬ್ಬದ ಅಭಿಮಾನಿ
- ‘ಜೀವ ಹಾನಿ; ಅಯೋಜಕರ ವಿರುದ್ಧ ಕ್ರಮ‘
‘ಕಳೆದ ವರ್ಷ ಕೆಲವು ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಹಬ್ಬದಲ್ಲಿ ಸಾವು ನೋವು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಹೋರಿ ಮಾಲೀಕರು ಹಾಗೂ ಆಯೋಜಕರ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದೆವು. ಈ ಬಾರಿಯೂ ಅಷ್ಟೇ ಬಿಗಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಶಿವಮೊಗ್ಗ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಆರ್.ಆರ್. ಪಾಟೀಲ ತಿಳಿಸಿದರು. ‘ಕಳೆದ ಬಾರಿ ಸಾಂಪ್ರದಾಯಿಕವಾಗಿ ಹೋರಿ ಓಡಿಸುವ ಸ್ಪರ್ಧೆಗೆ ಮಾತ್ರ ಅವಕಾಶ ನೀಡಿದ್ದೆವು. ಆದರೆ ಹೋರಿ ಬೆದರಿಸುವ ಸ್ಪರ್ಧೆಗೆ ಅವಕಾಶವಿರಲಿಲ್ಲ. ಹೋರಿ ಬೆದರಿಸುವ ಸ್ಪರ್ಧೆ ನಡೆಸಬೇಕಾದರೆ ಆಯೋಜಕರು ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.