ADVERTISEMENT

ಡಾ. ಎಚ್.ಎಸ್. ನಾಗಭೂಷಣರ ‘ಚಾಂಡಾಳನೊಬ್ಬನ ಆತ್ಮವಿಮರ್ಶೆ’ ಪುಸ್ತಕ ಬಿಡುಗಡೆ

ಡಾ. ಎಚ್.ಎಸ್. ನಾಗಭೂಷಣ ಅನುವಾದಿಸಿದ ‘ಚಾಂಡಾಳನೊಬ್ಬನ ಆತ್ಮವಿಮರ್ಶೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 6:58 IST
Last Updated 11 ಏಪ್ರಿಲ್ 2023, 6:58 IST
ಶಿವಮೊಗ್ಗದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಡಾ. ಎಚ್.ಎಸ್. ನಾಗಭೂಷಣ ಅವರು ಅನುವಾದಿಸಿದ 'ಚಾಂಡಾಳನೊಬ್ಬನ ಆತ್ಮ ವಿಮರ್ಶೆ' ಪುಸ್ತಕವನ್ನು ಗಾಂಧಿವಾದಿ, ಮುಂಬೈನ ಲಕ್ಷ್ಮಣ್ ತುಕಾರಾಂ ಗೋಲೆ ಬಿಡುಗಡೆ ಮಾಡಿದರು.
ಶಿವಮೊಗ್ಗದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಡಾ. ಎಚ್.ಎಸ್. ನಾಗಭೂಷಣ ಅವರು ಅನುವಾದಿಸಿದ 'ಚಾಂಡಾಳನೊಬ್ಬನ ಆತ್ಮ ವಿಮರ್ಶೆ' ಪುಸ್ತಕವನ್ನು ಗಾಂಧಿವಾದಿ, ಮುಂಬೈನ ಲಕ್ಷ್ಮಣ್ ತುಕಾರಾಂ ಗೋಲೆ ಬಿಡುಗಡೆ ಮಾಡಿದರು.   

ಶಿವಮೊಗ್ಗ: ‘ಪ್ರತಿ ನಿತ್ಯ ಶಾಂತಿ ಮತ್ತು ಅಹಿಂಸೆಯ ಕುರಿತು ಓದುತ್ತೇವೆ ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದೇವೆ’ ಎಂದು ಗಾಂಧಿವಾದಿ, ಮುಂಬೈನ ಲಕ್ಷ್ಮಣ್ ತುಕಾರಾಂ ಗೋಲೆ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕಮಲಾ ನೆಹರೂ ಕಾಲೇಜಿನಲ್ಲಿ ಸೋಮವಾರ ಸೃಷ್ಟಿ ಪಬ್ಲಿಕೇಷನ್ ಹಾಗೂ ಬಹುಮುಖಿ ವತಿಯಿಂದ ಆಯೋಜಿಸಿದ್ದ ಡಾ. ಎಚ್.ಎಸ್. ನಾಗಭೂಷಣ ಅವರು ಅನುವಾದಿಸಿದ ಬ್ಯಾಪಾರಿ ಮನೋರಂಜನ್ ಅವರ ‘ಚಾಂಡಾಳನೊಬ್ಬನ ಆತ್ಮ ವಿಮರ್ಶೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಬದುಕಿನಲ್ಲಿ ದೃಢ ಸಂಕಲ್ಪದಿಂದ ಸತ್ಯ ಹಾಗೂ ನ್ಯಾಯದ ಪಥದತ್ತ ಹೆಜ್ಜೆ ಇಟ್ಟರೆ, ಯಾವುದೇ ಪಾಪ ಪ್ರಜ್ಞೆ ಹಾಗೂ ಅದರಿಂದ ಶಿಕ್ಷೆಗೆ ಒಳಪಡುವ ಸಂಗತಿ ನಮ್ಮಿಂದ ನೂರು ಅಡಿ ಹಿಂದೆ ಸರಿಯುತ್ತದೆ ಎಂದ ಅವರು, ನಶಿಸಿ ಹೋಗುವ ದೇಹದ ಹೊರಗಿನ ಬದಲಾವಣೆಗಿಂತ ಆಂತರ್ಯದ ಬದಲಾವಣೆ ಮನುಷ್ಯನ ಬದುಕಿನಲ್ಲಿ ಅತ್ಯಗತ್ಯ ಎಂದರು.

ADVERTISEMENT

ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಒಂದು ಹೆಜ್ಜೆ ಮುಂದೆ ಇಟ್ಟವರು ಮಹಾತ್ಮ ಗಾಂಧೀಜಿ. ಪ್ರತಿಯೊಬ್ಬರೂ ಅವರನ್ನು ಓದಲೇಬೇಕು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ಪುಸ್ತಕಗಳು ನನ್ನ ಕೈ ಸೇರಿದ ನಂತರವೇ ನನ್ನ ಬದುಕು ಬದಲಾಯಿತು ಎಂದರು.

‘ನಾನು ಹೆಚ್ಚು ಶಿಕ್ಷಣ ಪಡೆದವನಲ್ಲ. ಆದರೆ ನನ್ನ ಜೀವನದ ಅನುಭವ ನನ್ನ ಬದುಕನ್ನು ಬದಲಿಸಿತು. ನಾವು ಬೇರೆಯವರ ತಪ್ಪುಗಳನ್ನು ಮಾತ್ರ ಎತ್ತಿ ಹಿಡಿಯುತ್ತೇವೆ. ಆದರೆ ನಮ್ಮೊಳಗಿನ ತಪ್ಪುಗಳನ್ನು ಮರೆಮಾಚುತ್ತೇವೆ. ಆದ್ದರಿಂದ ಜೀವನ ಕೊನೆಘಟ್ಟದಲ್ಲಿಯೂ ಸಹ ಆತ್ಮವಂಚನೆ ಮಾಡಿಕೊಳ್ಳಬೇಡಿ. ಧೈರ್ಯದಿಂದ ಪ್ರತಿಯೊಂದನ್ನು ಹಿಮ್ಮೆಟ್ಟುವ ಶಕ್ತಿ ಬೆಳೆಸಿಕೊಳ್ಳಿ’ ಎಂದರು.

ಹಿರಿಯ ವಿಮರ್ಶಕ ಡಾ. ರಾಜಪ್ಪ ದಳವಾಯಿ ಮಾತನಾಡಿ, ‘ಬದುಕಿಗೆ ಬದಲಾವಣೆ ತರುವಂತಹ ಸಂಗತಿಯ ಕಣಜವೇ ಈ ಪುಸ್ತಕ. ಲೇಖಕನಿಗೆ ನೈತಿಕ ಪ್ರಜ್ಞೆ ಇರಬೇಕು. ಅದನ್ನು ಈ ಆತ್ಮಕಥೆಯ ಮೂಲಕ ಸಮಾಜಕ್ಕೆ ಪರಿಚಯಿಸಲಾಗಿದೆ. ಪುಸ್ತಕ ಪತ್ತೇದಾರಿ ಕಾದಂಬರಿ ಓದಿದಷ್ಟೇ ಕುತೂಹಲವಾಗಿದೆ. ಕನ್ನಡದ್ದೇ ಪುಸ್ತಕ ಅನ್ನುವಂತೆ, ಅನುವಾದ ಮಾಡಲಾಗಿದೆ’ ಎಂದು ಹೇಳಿದರು.

ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ‘ಉತ್ತಮ ಪುಸ್ತಕವಿದು. ದಲಿತ ಬರಹಗಳಲ್ಲಿ ವೈಯಕ್ತಿಕ ಅನುಭವ ಹಾಗೂ ಚಿಂತನೆಗಳ ನಿರೂಪಣೆ ಈ ಆತ್ಮಕಥೆಯಲ್ಲಿದೆ. ಬ್ಯಾಪಾರಿ ಅವರ ಅನುಭವ ಜಾತಿ ಕೇಂದ್ರಿತವಲ್ಲದ ಸಮಕಾಲೀನ ಅಂಶಗಳನ್ನು ಆತ್ಮಕತೆಯಲ್ಲಿ ಪೋಣಿಸಲಾಗಿದೆ’ ಎಂದರು.

ಅನುವಾದಕ ಡಾ.ಎಚ್.ಎಸ್. ನಾಗಭೂಷಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಡಾ.ಎಚ್.ಎಸ್. ಸುರೇಶ್, ಸೃಷ್ಟಿ ನಾಗೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.