ADVERTISEMENT

ಪೌರಾಣಿಕ ನಾಟಕ ಪ್ರದರ್ಶನ: ‘ರಕ್ತರಾತ್ರಿ’ಯಲ್ಲಿ ವಿಜೃಂಭಿಸಿದ ಮಹಿಳಾ ಶಕ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 16:00 IST
Last Updated 18 ಅಕ್ಟೋಬರ್ 2023, 16:00 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ದಸರಾ ಉತ್ಸವದ ಪ್ರಯುಕ್ತ ರೇಣುಕಾಂಬಾ ಮಹಿಳಾ ನಾಟಕ ಮಂಡಳಿಯ ಮಹಿಳಾ ಕಲಾವಿದರು ಪ್ರಸ್ತುತಪಡಿಸಿದ ‘ರಕ್ತರಾತ್ರಿ’ ಪೌರಾಣಿಕ ನಾಟಕ ಗಮನ ಸೆಳೆಯಿತು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ದಸರಾ ಉತ್ಸವದ ಪ್ರಯುಕ್ತ ರೇಣುಕಾಂಬಾ ಮಹಿಳಾ ನಾಟಕ ಮಂಡಳಿಯ ಮಹಿಳಾ ಕಲಾವಿದರು ಪ್ರಸ್ತುತಪಡಿಸಿದ ‘ರಕ್ತರಾತ್ರಿ’ ಪೌರಾಣಿಕ ನಾಟಕ ಗಮನ ಸೆಳೆಯಿತು   

ಸೊರಬ: ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನದಲ್ಲಿ ಮಹಿಳಾ ಶಕ್ತಿ ಮೋಡಿ ಮಾಡಿತು. ಚಂದ್ರಗುತ್ತಿ ರೇಣುಕಾಂಬಾ ಮಹಿಳಾ ನಾಟಕ ಮಂಡಳಿ ಪ್ರಸ್ತುತಪಡಿಸಿದ ಪೌರಾಣಿಕ ನಾಟಕ ಗಮನ ಸೆಳೆಯಿತು. ನಾಟಕದಲ್ಲಿ ಅಭಿನಯಿಸಿದ್ದ ಎಲ್ಲ ಕಲಾವಿದರು ಮಹಿಳೆಯರೇ ಎಂಬುದು ವಿಶೇಷ.

ರೇಣುಕಾಂಬಾ ದೇವಿ ದಸರಾ ಆಚರಣಾ ಸಮಿತಿ, ರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ, ಗ್ರಾಮ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರೇಣುಕಾಂಬಾ ಸಭಾಭವನದಲ್ಲಿ ಏರ್ಪಡಿಸಿದ್ದ 8ನೇ ವರ್ಷದ ಎರಡನೇ ದಿನದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ರೇಣುಕಾಂಬಾ ಮಹಿಳಾ ನಾಟಕ ಮಂಡಳಿಯ ಮಹಿಳೆಯರು ವಿವಿಧ ಪಾತ್ರಧಾರಿಗಳ ವೇಷ ಧರಿಸಿ ಪೌರಾಣಿಕ ನಾಟಕ ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ನಿರ್ದೇಶಕ ಗಣಪತಿ ಹೆಗಡೆ ಮಾರ್ಗದರ್ಶನದಲ್ಲಿ, ರಂಗಸೌರಭ ಹಿಮ್ಮೇಳದಲ್ಲಿ ಮೂಡಿ ಬಂದ ರಕ್ತರಾತ್ರಿ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರದಲ್ಲಿ ರೇಣುಕಾ ಶ್ರೀಧರ್ ಮಿಂಚಿದರು. ಶಕುನಿ ಪಾತ್ರದಲ್ಲಿ ದಿಶಾ ವಿ, ಧರ್ಮರಾಜನ ಪಾತ್ರದಲ್ಲಿ ರಕ್ಷಾ, ದ್ರೌಪದಿ ಪಾತ್ರದಲ್ಲಿ ಭವ್ಯ, ಶಂಕದತ್ತ ಹಾಸ್ಯ ಪಾತ್ರದಲ್ಲಿ ಸ್ವಾತಿ ಎ., ನವಲಿಪಕ್ಕ ಹಾಸ್ಯ ಪಾತ್ರದಲ್ಲಿ ಇಂಪನಾ ರತ್ನಾಕರ್ ಎಂ.ಪಿ., ಕರ್ಣನ ಪಾತ್ರದಲ್ಲಿ ಅಕ್ಷತಾ ಎಚ್., ಉತ್ತರೆ ಪಾತ್ರದಲ್ಲಿ ಅನುಷಾ ವಿ. ಶೇಟ್, ದುರ್ಯೋಧನ ಪಾತ್ರದಲ್ಲಿ ಆಶಾ ಪ್ರಕಾಶ್ ಮಿರ್ಜಿ, ಚಿತ್ರಸೇನ ಪಾತ್ರದಲ್ಲಿ ಪ್ರಿಯಾಂಕಾ ಪಿ. ಶೇಟ್, ಭೀಮನ ಪಾತ್ರದಲ್ಲಿ ಶಕುಂತಲಾ ಪಿ. ಶೇಟ್, ಅಶ್ವತ್ಥಾಮ ಪಾತ್ರದಲ್ಲಿ ಗಿರಿಜಾ ವಾಸುದೇವ್, ಭಾನುಮತಿ ಪಾತ್ರದಲ್ಲಿ ಜ್ಯೋತಿ ನಾಗರಾಜ್ ಎನ್.ಜಿ, ಮದಹಂಸಿ ಹಾಸ್ಯ ಪಾತ್ರದಲ್ಲಿ ಚೈತ್ರ ಕೃಷ್ಣಮೂರ್ತಿ ಓಲೇಕಾರ, ಕಲಿ ಪಾತ್ರದಲ್ಲಿ ಸಿಂಧು ಸುರೇಶ್ ನ್ಯಾರ್ಶಿರ್, ಅರ್ಜುನನ ಪಾತ್ರದಲ್ಲಿ ವಿನಯಾ ಶಿವರಾಜ್ ಗದ್ದೇಮನೆ ಅವರು ರಂಗಾಸಕ್ತರ ಮನಸೂರೆಗೊಂಡರು. 

ADVERTISEMENT

ವಿಶಿಷ್ಟ ಶೈಲಿಯ ವೇಷ ಭೂಷಣಗಳೊಂದಿಗೆ ರಂಗಕ್ಕೆ ಇಳಿದ ಮಹಿಳೆಯರು, ಪೌರಾಣಿಕ ನಾಟಕವನ್ನು ಪ್ರಸ್ತುಪಡಿಸಿ, ಮನರಂಜಿಸಿದರು. ನಾಟಕ ವೀಕ್ಷಿಸಲು ಸುತ್ತಮುತ್ತ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.

ಎರಡನೇ ದಿನದ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಾಲೂಕು ಎಪಿಎಂಸಿ ಸದಸ್ಯ ಜಯಶೀಲಗೌಡ ಅಂಕರವಳ್ಳಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಆರ್ ಶ್ರೀಧರ್ ಹುಲ್ತಿಕೊಪ್ಪ ವಹಿಸಿದ್ದರು. ಗ್ರಾಮದ ಪ್ರಮುಖರಾದ ಕೃಷ್ಣ ಕಾಮತ್, ಬೆನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜು ಮಾವಿನಬಳ್ಳಿಕೊಪ್ಪ, ಲಕ್ಷ್ಮಿ ಚಂದ್ರಪ್ಪ, ಶ್ರೀಮತಿ ಚಂದ್ರಕಾಂತ್, ಲಕ್ಷ್ಮಿರವಿ ಸೇರಿದಂತೆ ರೇಣುಕಾಂಬ ದಸರಾ ಉತ್ಸವ ಆಚರಣೆ ಸಮಿತಿಯ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.