ಆನಂದಪುರ: ಕಲ್ಯಾಣಿ ಹಾಗೂ ಕೆರೆಗಳ ಅಭಿವೃದ್ಧಿಗೆ ‘ಯಶೋಮಾರ್ಗ’ ನಿರಂತರವಾಗಿ ಕೈಜೋಡಿಸಲಿದೆ ಎಂದು ಜಲತಜ್ಞ ಶಿವಾನಂದ ಕಳವೆ ಹೇಳಿದರು.
ಸಮೀಪದ ಮಹಂತಿನ ಮಠದ ಚಂಪಕ ಸರಸು ಆವರಣದಲ್ಲಿ ಭಾನುವಾರ ನಡೆದ ‘ಯಶೋಮಾರ್ಗ’ ಫ್ರೀಡಂ ಆಯಿಲ್ ಹೈದರಾಬಾದ್ ಅಸೋಸಿಯೇಷನ್ ಮತ್ತು ಸ್ಥಳೀಯ ಸಂಘ–ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪಾರಂಪರಿಕ ಕಲ್ಯಾಣಿ ಪುನರುಜ್ಜೀವನ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು.
ರಾಣಿ ಚಂಪಕ ಸರಸು ನೆನಪಿಗಾಗಿ ಆನಂದಪುರದ ಮಹಂತಿನ ಮಠದಲ್ಲಿ ಚಂಪಕ ಸರಸು ಸುಂದರ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು. ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಿದ್ದ ಕಲ್ಯಾಣಿ ಬೇರೆ ಬೇರೆ ಕಾರಣಗಳಿಂದ ನೇಪಥ್ಯಕ್ಕೆ ಸರಿಯುವ ಸ್ಥಿತಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಸ್ಥಳೀಯ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಕಲ್ಯಾಣಿ ಪುನರುಜ್ಜೀವನಕ್ಕೆ ಮುಂದಾಗಿದ್ದು ಸ್ವಾಗತಾರ್ಹ. ಕೆರೆಯ ಸ್ಥಿತಿ ಕುರಿತು ಚಿತ್ರನಟ ಯಶ್ ಅವರಿಗೆ ಮಾಹಿತಿ ಕೊಟ್ಟಾಗ ಅವರು ಸಂತೋಷದಿಂದ ಕಲ್ಯಾಣಿ ಪುನರುಜ್ಜೀವನಕ್ಕೆ ಮನಸ್ಸು ಮಾಡಿದ್ದಾರೆ ಎಂದರು.
2016 ಕರ್ನಾಟಕ ಅತ್ಯಂತ ಕಡು ಬರಗಾಲ ಕಂಡ ಸಂದರ್ಭವಾಗಿತ್ತು. ನಾಡಿನ ಬೇರೆ ಬೇರೆ ಭಾಗದಲ್ಲಿ ಆಸಕ್ತರು ಇಂತಹ ಕೆಲಸಕ್ಕೆ ಕೈಜೋಡಿಸಿದ್ದರು. ಇಂತಹ ಸಂದರ್ಭದಲ್ಲಿ ಚಿತ್ರನಟ ಯಶ್ ಅವರು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಟ್ಯಾಂಕರ್ ಮೂಲಕ ನೀರು ತಲುಪಿಸುವ ಕೆಲಸ ಮಾಡಿದ್ದರು. ಜೊತೆಗೆ ಜಾನುವಾರಿಗೆ ಮೇವು ಕೊಡುವ ಕೆಲಸ ಮಾಡಿದ್ದರು. ಅವರಿಗೆ ‘ಯಶೋಮಾರ್ಗ’ ಎಲ್ಲ ರೀತಿಯ ಸಹಕಾರ ನೀಡಿತ್ತು. ರಾಕಿಂಗ್ ಸ್ಟಾರ್ ಯಶ್ ಅವರ ನೇತೃತ್ವದಲ್ಲಿ ‘ಯಶೋಮಾರ್ಗ’ ಜೀವಪರ, ಜಲಪರ ಕೆಲಸ ಮಾಡುತ್ತಿದೆ ಎಂದುತಿಳಿಸಿದರು.
ಕಲ್ಯಾಣಿಯನ್ನು ಸರ್ವಾಂಗೀಣ ಅಭಿವೃದ್ಧಿಪಡಿಸುವ ಜೊತೆಗೆ ಇನ್ನಷ್ಟು ಜನರು ಬಂದು ನೋಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಕ್ಕೆ ಸಂಸ್ಥೆ ಕೈಜೋಡಿಸಿದೆ. ಚಂಪಕ ಸರಸು ಜೊತೆಗೆ ರಾಜ್ಯದ ಅನೇಕ ಕಲ್ಯಾಣಿಗಳ ಅಭಿವೃದ್ದಿಯಾಗಬೇಕಾಗಿದೆ. ಅದಕ್ಕೂ ‘ಯಶೋಮಾರ್ಗ’ ಕೈಜೋಡಿಸಲಿದೆ ಎಂದು ಹೇಳಿದರು.
ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನವೀನಾ ರವಿಗೌಡ, ಅಖಿಲ ಕರ್ನಾಟಕ ಯಶ್ ಅಭಿಮಾನಿ ಬಳಗದ ಅಧ್ಯಕ್ಷ ಸತೀಶ್ ಶಿವಣ್ಣ, ಅಖಿಲ ಭಾರತ ಯಶ್ ಅಭಿಮಾನಿ ಬಳಗದ ಅಧ್ಯಕ್ಷ ರಾಕೇಶ್, ಯಶ್ ಅಭಿಮಾನಿ ಬಳಗದ ಸಂಸ್ಥಾಪಕ ಶೀಗಂಧ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ರಾಜೇಂದ್ರಗೌಡ, ಕಾರ್ಯದರ್ಶಿ ಬಿ.ಡಿ. ರವಿಕುಮಾರ್, ಕನ್ನಡ ಯುವಕ ಸಂಘದ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.