ಶಿವಮೊಗ್ಗ: ಮಹಾನಗರ ಪಾಲಿಕೆಯು ಕಂದಾಯ ಪಾವತಿ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಈಗ ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ಕಂದಾಯ ಪಾವತಿಸಬಹುದು ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಕಚೇರಿ ಯಲ್ಲಿ ಬುಧವಾರ ಆನ್‌ಲೈನ್‌ನಲ್ಲಿ ಕಂದಾಯ ಪಾವತಿ ಕಾರ್ಯಕ್ರಮಕ್ಕೆ ತಮ್ಮ ಮನೆಯ ಕಂದಾಯವನ್ನು ಆನ್‌ಲೈನ್‌ನಲ್ಲಿ ಪಾವತಿಸುವ ಮೂಲಕ ಚಾಲನೆ ನೀಡಿದರು.
‘ಕೋವಿಡ್ ಕಾರಣದಿಂದ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಪರದಾಡಬೇಕಿತ್ತು. ಪಾಲಿಕೆಗೆ ಹೋಗಿ ತಾವು ಎಷ್ಟು ಕಟ್ಟಬೇಕೆಂದು ಬರೆಸಿಕೊಂಡು ಆನಂತರ ಬ್ಯಾಂಕ್ ಅಥವಾ ಶಿವಮೊಗ್ಗ ಒನ್‌ಗೆ ತೆರಳಿ ಕಟ್ಟಬೇಕಿತ್ತು. ಈಗ ಈ ಅಲೆದಾಟ ತಪ್ಪಿದಂತಾಗುತ್ತದೆ. ಪಾಲಿಕೆ ವ್ಯಾಪ್ತಿಯ ಕಂದಾಯ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಮನೆಯ ಕಂದಾಯವನ್ನು ಮನೆಯಲ್ಲಿಯೇ ಆನ್‌ಲೈನ್ ಮೂಲಕ ಕಟ್ಟಿದರೆ ಅಲ್ಲಿಯೇ ಅವರಿಗೆ ರಶೀದಿಯನ್ನು ಕೂಡ ನೀಡುತ್ತಾರೆ. ಆದರೆ, ನಗದು ಪಾವತಿಸಲು ಅವಕಾಶವಿಲ್ಲ. ಏನಿದ್ದರೂ ಆನ್‌ಲೈನ್ ಮೂಲಕವೇ ಪಾವತಿಸಬೇಕು’ ಎಂದು ತಿಳಿಸಿದರು.
‘ಜೂನ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ಇದ್ದು, ಇದನ್ನು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು. ಇದಕ್ಕಾಗಿ ಸಾರ್ವಜನಿಕರು ಪಾಲಿಕೆಗೆ ಕರೆ ಕೂಡ ಮಾಡಬಹುದಾಗಿದೆ’ ಎಂದರು.
ಉಪಮೇಯರ್ ಶಂಕರ್‌ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.