ADVERTISEMENT

ತುಮರಿ | ನಿತ್ಯ ಹರಿದ್ವರ್ಣ ಕಾಡಿನಲ್ಲೂ ನೀರಿಗೆ ತತ್ವಾರ!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 6:41 IST
Last Updated 4 ಮಾರ್ಚ್ 2024, 6:41 IST
ತುಮರಿ ಸಮೀಪದ ಹೊಳೆಬಾಗಿಲು ಬಳಿ ಗುಂಪಾಗಿ ಕುಳಿತುಕೊಳ್ಳುವ ಮಂಗಗಳಿಗೆ ಪ್ರವಾಸಿಗರೊಬ್ಬರು ಆಹಾರ ನೀಡುತ್ತಿರುವುದು
ತುಮರಿ ಸಮೀಪದ ಹೊಳೆಬಾಗಿಲು ಬಳಿ ಗುಂಪಾಗಿ ಕುಳಿತುಕೊಳ್ಳುವ ಮಂಗಗಳಿಗೆ ಪ್ರವಾಸಿಗರೊಬ್ಬರು ಆಹಾರ ನೀಡುತ್ತಿರುವುದು   

ತುಮರಿ: ನಿತ್ಯ ಹರಿದ್ವರ್ಣ ಕಾಡನ್ನು ಹೊಂದಿರುವ ಈ ಪ್ರದೇಶದಲ್ಲೂ ನೀರಿಗೆ ಬರ ಎದುರಾಗಿದ್ದು, ವನ್ಯಜೀವಿಗಳು ಹಾಗೂ ಜನರು ಪರಿತಪಿಸುವಂತಾಗಿದೆ.

ದಿನದಿಂದ ದಿನಕ್ಕೆ ಶರಾವತಿ ಹಿನ್ನೀರು ಇಳಿಮುಖವಾಗುತ್ತಿದೆ. ಪರಿಣಾಮವಾಗಿ ಶರಾವತಿ ಕಣಿವೆಯ ಸಿಂಗಳೀಕ ಅಭಯಾರಣ್ಯ, ಮಡೆನೂರು ಅಭಯಾರಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ಗಡಿಯಂಚಿನ ಗ್ರಾಮಗಳತ್ತ ಪ್ರಾಣಿಗಳು ಆಹಾರ, ನೀರು ಅರಸಿ ಬರುತ್ತಿವೆ. ಅರಣ್ಯ ಪ್ರದೇಶದಲ್ಲಿ ಬಹುತೇಕ ನೀರಿನ ಸೆಲೆಗಳು ಬತ್ತಿರುವುದರಿಂದ ಪ್ರಾಣಿ– ಪಕ್ಷಿಗಳು ಗ್ರಾಮದಂಚಿನಲ್ಲಿ ನಿತ್ಯವೂ ಕಾಣಿಸಿಕೊಳ್ಳುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಪಕ್ಕ ಗುಂಪುಗುಂಪಾಗಿ ಕುಳಿತುಕೊಳ್ಳುವ ಮಂಗಗಳು, ಪ್ರಯಾಣಿಕರು ನೀಡುವ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಬಾಟಲಿಯಲ್ಲಿ ನೀರು ನೀಡಿದರೂ ಸರಾಗವಾಗಿ ಕುಡಿದು ಬಾಯಾರಿಕೆಯನ್ನು ನೀಗಿಸಿಕೊಳ್ಳುವ ದೃಶ್ಯ ಮನಃಕಲಕುತ್ತದೆ.

ADVERTISEMENT

‘ಕಳೆದ ವರ್ಷವೂ ಶರಾವತಿ ಕಣಿವೆ ಭಾಗದಲ್ಲಿ ನೀರಿನ ಕೊರತೆ ಉಂಟಾಗಿ ಹಿನ್ನೀರಿನ ಚನ್ನಗೊಂಡ, ಬರುವೆ, ಮುಪ್ಪಾನೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಿಂಕೆಗಳು ಆಹಾರ, ನೀರು ಅರಸಿ ನಾಡಿಗೆ ನಿತ್ಯವೂ ಬರುತ್ತಿದ್ದವು. ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಡಿಗೆ ಬಂದರೆ, ಸಾಕು ನಾಯಿ ದಾಳಿ ಇಲ್ಲವೇ ಬೇಟೆಗಾರನ ಗುಂಡಿಗೆ ಬಲಿಯಾಗುವುದು ನಿಶ್ಚಿತ ಎಂದು ಪರಿಸರ ಪ್ರೇಮಿ ಜಯಂತ್ ಕೀರೆತೋಡಿ ಆತಂಕ ವ್ಯಕ್ತಪಡಿಸಿದರು.

ತಾಪಮಾನ ಏರಿಕೆಯಿಂದ ಮಲೆನಾಡಿನಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಅಗತ್ಯ ಸ್ಥಳಗಳಲ್ಲಿ ಅರಣ್ಯ ಇಲಾಖೆ ಶೀಘ್ರವೇ ಕೃತಕ ನೀರಿನ ತೊಟ್ಟಿ ನಿರ್ಮಿಸಿ ನೀರು ಪೂರೈಸಿದರೆ ಪ್ರಾಣಿ ಪಕ್ಷಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
ಅಖಿಲೇಶ್ ಚಿಪ್ಪಳಿ, ಪರಿಸರವಾದಿ, ಸಾಗರ

‘ಕಾಡಿನಲ್ಲಿ ಆಹಾರ, ನೀರಿನ ಸಮಸ್ಯೆಯಾಗಿದೆ. ವನ್ಯಜೀವಿಗಳು ರೈತರ ಹೊಲಗಳಿಗೆ ದಾಳಿ ಇಡುತ್ತಿವೆ. ಬೇಸಿಗೆ ಬೆಳೆಯನ್ನು ತಿಂದು ಹಾನಿ ಮಾಡುತ್ತಿವೆ. ಕಾಡು ಹಂದಿ ಮತ್ತು ಜಿಂಕೆಗಳು ಗದ್ದೆ, ಅಡಿಕೆ ತೋಟಗಳಿಗೆ ನುಗ್ಗುತ್ತಿವೆ. ಪ್ರಾಣಿ– ಪಕ್ಷಿಗಳಿಗೆ ನೀರಿನ ಸಮಸ್ಯೆಯಾಗದಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ ಮೂಲಕ ನೀರು ತುಂಬಿಸುವ ಕೆಲಸ ಸಮರ್ಪಕವಾಗಿ ಈ ಭಾಗದಲ್ಲಿ ಅರಣ್ಯ ಇಲಾಖೆ ಮಾಡುತ್ತಿಲ್ಲ. ಬದಲಗೆ ಕಾಡಿನ ಸುತ್ತ ‘ಬೆಂಕಿ ರೇಖೆ’ ಎಳೆದು ವನ್ಯಜೀವಿಗಳನ್ನು ಭಯಪಡಿಸುವ ಕೆಲಸ ಮಾಡುತ್ತಿರುವುದು ಅವೈಜ್ಞಾನಿಕ ಪದ್ಧತಿ. ಇದರಿಂದ ತ್ಯಂತ ಸೂಕ್ಷ್ಮವಾದ ಪಕ್ಷಿಗಳ ಅವಸಾನವಾಗುತ್ತದೆ ಎಂದು ರೈತ ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

‘ಮಳೆಯ ಅಭಾವದಿಂದ ಈ ವರ್ಷ ನೀರಿನ ಸಮಸ್ಯೆಯಾಗಿದೆ. ಅರಣ್ಯ ಪ್ರದೇಶದಲ್ಲಿನ ಕೆರೆಕಟ್ಟೆಗಳ ಹೂಳೆತ್ತಲು ಯಾವುದೇ ಕ್ರಿಯಾ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿಲ್ಲ. ಬೇಸಿಗೆಯಲ್ಲಿ ವನ್ಯಜೀವಿಗಳು ಸಂತೃಪ್ತವಾಗಿದ್ದರೆ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಈ ಭಾಗದ ಮರಾಠಿ, ಮಳೂರು, ಕೋಗಾರು, ಕಾನೂರು ಅರಣ್ಯ ವ್ಯಾಪ್ತಿಯಲ್ಲಿ ಕೃತಕ ನೀರಿನ ತೊಟ್ಟಿ ನಿರ್ಮಿಸಿದರೆ ವನ್ಯಜೀವಿಗಳಿಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದರು.

ಈ ಭಾಗದ ಮಳೂರು ಅರಣ್ಯ ಪ್ರದೇಶವನ್ನು ನಿತ್ಯ ಹರಿದ್ವರ್ಣ ಕಾಡು ಎಂದು ಪರಿಗಣಿಸಲಾಗಿದೆ. ಅಳಿವಿನಂಚಿನಲ್ಲಿರುವ ಸಸ್ಯಜಾತಿಗಳ ಸಂರಕ್ಷಣಾ ತಾಣ ಎಂದೂ ಚಿರಪರಿಚಿತವಾಗಿದೆ. ಈ ಪ್ರದೇಶದಲ್ಲಿ ಸದಾ ತೇವಾಂಶಭರಿತ ವಾತಾವರಣದಿಂದ ರಾಮ ಪತ್ರೆ ಪ್ರಬೇಧ ಮರ, ಕಾಡು ರುದ್ರಾಕ್ಷಿ, ದಾಲ್ಚಿನ್ನಿಯಂತಹ ಔಷಧೀಯ ಮರಗಳಿದ್ದು, ಕಾಡಿನ ಹಲವೆಡೆ ನೀರಿನ ಸೆಲೆಗಳು ಬತ್ತಿರುವುದರಿಂದ ಔಷಧೀಯ ಗಿಡಗಳು ಕಣ್ಮರೆಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳಿದರು.

ಮಳೂರು ಗ್ರಾಮದಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯಗಳ ತಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.