ಕೋಣಂದೂರು: ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಲ್ಲಲ್ಲಿ ಮರಗಳು ಧರೆಗುರುಳುತ್ತಿದ್ದು, ಆತಂಕ ಎದುರಾಗಿದೆ.
ಸಮೀಪದ ಮೀನುಮನೆಕೊಪ್ಪದ ಬಳಿ ಶುಕ್ರವಾರ ಯುವಕ ಸಚಿನ್ ಹಾಗೂ ತೋರೆಬೈಲಿನ ಜಯಂತ್ ಭಟ್ ಹೋದ ತಿಂಗಳು ಅಕೇಶಿಯಾ ಮರ ಬಿದ್ದು ಮೃತಪಟ್ಟಿರುವುದರಿಂದ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಮಳೆಗೆ ಯಾವಾಗ ಮರ ಬೀಳುವುದೋ ಮನೆ, ಜೀವಕ್ಕೆ ಹಾನಿಯಾಗುವುದೋ ಎಂಬ ಆತಂಕದಲ್ಲೇ ಕಾಲಕಳೆಯುವಂತಾಗಿದೆ.
ಮಲೆನಾಡಿನಲ್ಲಿ ಎದುರಾಗುವ ಈ ಸಮಸ್ಯೆ ಇಂದು– ನಿನ್ನೆಯದಲ್ಲ. ದಶಕಗಳಿಂದ ಅಕೇಶಿಯಾ ನೆಡುತೋಪು ಆರಂಭವಾದಾಗಿನಿಂದ ಈ ಸಮಸ್ಯೆ ಇದೆ. ಮೈಸೂರು ಪೇಪರ್ ಮಿಲ್ (ಎಂಪಿಎಂ)ಗೆ ಮರ ಪೂರೈಸಲು ಮಲೆನಾಡಿನಲ್ಲಿ ಅಕೇಶಿಯಾ ಬೆಳೆಸಲು ಶುರುವಾದಾಗಾನಿಂದ ಈ ಸಂಕಷ್ಟ ಇದೆ. ಆದರೆ ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಮಳೆಗಾಲದಲ್ಲಿ ಈ ಭಾಗದಲ್ಲಿ ಮರಗಳು ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗುವುದೂ ಸಾಮಾನ್ಯ.
ಕೋಣಂದೂರು ಹಾಗೂ ಅಗ್ರಹಾರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನೆಡಲಾಗಿರುವ ಅಕೇಶಿಯಾ ಮರಗಳು ಈಚೆಗೆ ಸುರಿಯುತ್ತಿರುವ ಮಳೆ ಗಾಳಿಯಿಂದ ಧರೆಗೆ ಉರುಳುತ್ತಿವೆ.
ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರತಿನಿತ್ಯ ಸಾವಿರಾರು ಮರಗಳು ಧರೆಗೆ ಉರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉರುಳುತ್ತಿರುವಂಥವು ಬಹುತೇಕ ಅಕೇಶಿಯಾ ಮರಗಳೇ. ದಿನನಿತ್ಯ ನೂರಾರು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಎಂಪಿಎಂ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇಲ್ಲಿನ ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ರಾಷ್ಟ್ರೀಯ ವಸತಿ ಶಾಲೆಗೆ ಹೊಂದಿಕೊಂಡಿರುವ ಹಾಲೇಸರ ರಸ್ತೆಯಲ್ಲಿ ಬೃಹದಾಕಾರದ ಅಕೇಶಿಯಾ ಮರಗಳು ಬೆಳೆದು ನಿಂತಿವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವಾಹನ ಸವಾರರು ಈ ದಾರಿಯಲ್ಲಿ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಶಾಲಾ ಆಡಳಿತ ಮಂಡಳಿ ದೂರು.
ಇಲ್ಲಿನ ಮುಖ್ಯರಸ್ತೆಯ ಇಕ್ಕೆಲದ ನವಜ್ಯೋತಿ ಶಾಲೆಯ ಸಮೀಪ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಮಣ್ಣು ತೆಗೆದ ಪರಿಣಾಮ ಮರಗಳು ಬೀಳುವ ಆತಂಕ ಎದುರಾಗಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರಗಳನ್ನು ಕೂಡಲೇ ತೆರವು ಮಾಡಬೇಕು ಎಂಬುದು ಪಾಲಕರ ಆಗ್ರಹ.
ತ್ರಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಲಾಪುರ ಗ್ರಾಮದ ದೇಮ್ಲಾಪುರ ಸಂಪರ್ಕಿಸುವ ಬಾಳಗಾರು ರಸ್ತೆಯ ಇಕ್ಕೆಲಗಳಲ್ಲಿ ಅಕೇಶಿಯಾ ಮತ್ತ ನೀಲಗಿರಿ ಮರಗಳು ನಿತ್ಯ ಬೀಳುತ್ತಿವೆ. ವಾಹನ ಸವಾರರು, ವಿದ್ಯಾರ್ಥಿಗಳ ಪಾಡು ಹೇಳತೀರದು. ಇಲ್ಲಿನ 20 ಕುಟುಂಬಗಳ ಸದಸ್ಯರು ಪ್ರತಿದಿನ ಶಾಲೆ– ಕಾಲೇಜು, ದೈನಂದಿನ ವ್ಯವಹಾರಕ್ಕಾಗಿ ಕೋಣಂದೂರಿಗೆ ಬರುವುದು ಅನಿವಾರ್ಯ. ಸದಾ ಕೆಸರುಗದ್ದೆಯಂತಿರುವ ಮಣ್ಣಿನ ರಸ್ತೆ ಒಂದು ಕಡೆಯಾದರೆ ಈಗಲೋ ಆಗಲೋ ಬೀಳಲು ಸಿದ್ಧವಾಗಿರುವ ಅಕೇಶಿಯಾ ಮರಗಳು ಇನ್ನೊಂದು ಕಡೆ. ಗ್ರಾಮಸ್ಥರು ಜೀವಭಯದಲ್ಲಿ ಓಡಾಡಬೇಕು ಎಂದು ವಾಸ್ತವ ತೆರೆದಿಟ್ಟರು ದೇಮ್ಲಾಪುರದ ಗಿರೀಶ್.
ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಚದಕಟ್ಟೆ ಮತ್ತು ಕೋಣಂದೂರು ಮುಖ್ಯರಸ್ತೆ ಸಂಪರ್ಕಿಸುವ 8 ಕಿ.ಮೀ. ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಮೀನುಮನೆಕೊಪ್ಪದ ಯುವಕ ಸಚಿನ್ ಮೃತ ಪಟ್ಟಿರುವುದು ಸಹ ಇದೇ ವ್ಯಾಪ್ತಿಯಲ್ಲಿ ಎಂಬುದು ಗಮನಾರ್ಹ.
ದೇಮ್ಲಾಪುರ, ತೋರೇಬೈಲು ಮೂಲಕ ಕೋಣಂದೂರು ಸಂಪರ್ಕಿಸುವ ರಸ್ತೆಯ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ತೋರೆಬೈಲಿನ ಜಯಂತ್ ಭಟ್ ಅಕೇಶಿಯಾ ಮರ ಬಿದ್ದು ಮೃತಪಟ್ಟ ನಂತರ ನಾಮಾಕಾವಸ್ಥೆಗೆ ಕೆಲ ಮರಗಳನ್ನು ಮಾತ್ರ ಕಡಿತಲೆ ಮಾಡಲಾಗಿದೆ. ಇದರಿಂದ ವಾಹನ ಸವಾರರ ಗಮನ ಸ್ವಲ್ಪ ಬೇರೆಡೆ ಹೋದರೂ ಅನಾಹುತ ಕಟ್ಟಿಟ್ಟ ಬುತ್ತಿ.
ಈಚೆಗೆ ಶಾಸಕ ಆರಗ ಜ್ಞಾನೇಂದ್ರ ಸಹ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿ, ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದರು.
ಹಲವು ಅನಾಹುತಗಳಿಗೆ ಕಾರಣವಾಗಿರುವ, ಅವೈಜ್ಞಾನಿಕವಾಗಿ ನೆಡಲಾಗಿರುವ ಅಕೇಶಿಯಾ ಮತ್ತು ನೀಲಗಿರಿ ಕಡಿತಲೆ ಮಾಡದೇ ಹೋದಲ್ಲಿ ಇನ್ನಷ್ಟು ಜೀವಗಳು ಬಲಿಯಾಗುವ ಸಂಭವ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಅಕೇಶಿಯಾ ಮರಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಮಲೆನಾಡಿನಲ್ಲಿ ಅಕೇಶಿಯಾ ನೀಲಗಿರಿ ಪೈನಸ್ ಮರಗಳನ್ನು ಸಂಪೂರ್ಣ ನಿಷೇಧ ಮಾಡಬೇಕು. ಈ ಮರಗಳು ಮನುಷ್ಯ ಮಾತ್ರವಲ್ಲದೇ ವನ್ಯಜೀವಿಗಳಿಗೂ ಸಂಚಕಾರ ತಂದಿವೆ. ಅಪ್ಪಟ ಮಲೆನಾಡನ್ನು ಬಯಲುಸೀಮೆಯಾಗಿಸಿ ತಾಪಮಾನ ಏರಿಕೆಗೆ ಕಾರಣವಾಗಿದೆ.ಕೆ.ಪಿ.ಶ್ರೀಪಾಲ್ ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ ಒಕ್ಕೂಟ
15 ವರ್ಷಕ್ಕೊಮ್ಮೆ ಮರಗಳನ್ನು ಕಟಾವು ಮಾಡಲು ಅವಕಾಶ ಇದೆ. ಕೇಂದ್ರ ಸರ್ಕಾರದ ಪೂರ್ವಾನುಮತಿ ಮೇರೆಗೆ ಕಟಾವು ಮಾಡಲಾಗುವುದು. ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಮರಗಳನ್ನು ಆದ್ಯತೆಯ ಮೇರೆಗೆ ಕಟಾವು ಮಾಡಲು ಕ್ರಮ ಕೈಗೊಳ್ಳಲಾಗುವುದು.ಶಿವಶಂಕರ್ ಉಪ ವಲಯ ಅರಣ್ಯಾಧಿಕಾರಿ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.