ADVERTISEMENT

ಭದ್ರಾವತಿ: ಬಿಸಿಲಿನ ಬಿಸಿ.. ಮೇಲೆ ತಂಪು ಪಾನೀಯ ದರ ಏರಿಕೆ ಬಿಸಿ!

​ಪ್ರಜಾವಾಣಿ ವಾರ್ತೆ
Published 9 ಮೇ 2024, 8:14 IST
Last Updated 9 ಮೇ 2024, 8:14 IST
ಬಿಸಿಲಿನ ತಾಪ ಹೆಚ್ಚಿದ್ದು ಬಸವೇಶ್ವರ ವೃತ್ತದ ಬಳಿ ಇರುವ ತಂಪು ಪಾನೀಯದ ಅಂಗಡಿಯಲ್ಲಿ ಗ್ರಾಹಕರು ಕಬ್ಬಿನ ಹಾಲು ಸವಿದರು
ಬಿಸಿಲಿನ ತಾಪ ಹೆಚ್ಚಿದ್ದು ಬಸವೇಶ್ವರ ವೃತ್ತದ ಬಳಿ ಇರುವ ತಂಪು ಪಾನೀಯದ ಅಂಗಡಿಯಲ್ಲಿ ಗ್ರಾಹಕರು ಕಬ್ಬಿನ ಹಾಲು ಸವಿದರು   

ಭದ್ರಾವತಿ: ಲೋಕಸಭೆ ಚುನಾವಣೆ ಕಾವು ಇಳಿದಿದೆ. ಆದರೆ, ಬಿರುಬಿಸಿಲಿನ ಕಾವು ಹೆಚ್ಚುತ್ತಲೇ ಸಾಗಿದೆ. ನಗರದ ತಾಪಮಾನವು ಕಳೆದ ಒಂದು ವಾರದಿಂದ 37ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೂ ಇದ್ದು, ಜನರು ಬಿಸಿಲಿನ ತಾಪಕ್ಕೆ ಹೈರಾಣಾಗಿ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.

ಆದರೆ, ಎಳನೀರು, ಕಬ್ಬಿನ ಹಾಲು ಹಾಗೂ ಹಣ್ಣಿನ ಜೂಸ್‌ಗಳ ದರ ಏರಿಕೆಯಾಗಿದ್ದು, ಸಾರ್ವಜನಿಕರಿಗೆ ಬೆಲೆ ಏರಿಕೆ ತಾಪವೂ  ತಟ್ಟುತ್ತಿದೆ.

ಬಿಸಿಲಿನ ಧಗೆ ಹೆಚ್ಚಾಗಿರುವುದರಿಂದ ಆರೋಗ್ಯದ ಕಾಳಜಿ ಇರುವವರು ಹೆಚ್ಚಾಗಿ ಹಣ್ಣಿನ ಜೂಸ್, ಕಬ್ಬಿನ ಹಾಲು ಹಾಗೂ ಎಳನೀರು ಸೇವಿಸುತ್ತಿದ್ದಾರೆ. ಇನ್ನು ಮಕ್ಕಳು, ಮಹಿಳೆಯರು ಐಸ್‌ಕ್ರೀಂ ಅನ್ನೇ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಅವುಗಳ ಬೆಲೆಯೂ ಗಗನಕ್ಕೆ ಏರಿದೆ.

ADVERTISEMENT

ನಗರದ ಕೆಲವೆಡೆ ಕೆಲವು ದಿನಗಳ ಹಿಂದೆ ತುಂತುರು ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆಯ ಸುಳಿವಿಲ್ಲ. ನಗರದ ಜನರು ಸುಡು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಇನ್ನು ಕೆಲಸದ ನಿಮಿತ್ತ ಮನೆ, ಕಚೇರಿಗಳಿಂದ ಹೊರಬರುವ ಜನ ಕೊಡೆ, ಟೋಪಿಗಳ ಮೊರೆ ಹೋಗಿದ್ದಾರೆ. ರಸ್ತೆ ಬದಿ, ಬಸ್‌ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಎಳನೀರು, ಮಜ್ಜಿಗೆ, ಜ್ಯೂಸ್‌, ಕಬ್ಬಿನ ಹಾಲು ಸೇವಿಸಿ ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ತಂಪಾದ ಪಾನೀಯ ಸೇವನೆ ಮಾಡಿ ದೇಹವನ್ನ ತಂಪು ಮಾಡಿಕೊಳ್ಳುತ್ತಿದ್ದಾರೆ.

ಎರಡ್ಮೂರು ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಈಗ ಎಳನೀರು ಹಾಗೂ ಜೂಸ್ ಬೆಲೆ ಹೆಚ್ಚಾಗಿದೆ. ಜೂಸ್‌ಗಳ ಬೆಲೆ ₹ 20ರಿಂದ ₹ 30 ಏರಿಕೆಯಾದರೆ, ಎಳನೀರು ಬೆಲೆ ₹ 50ರಿಂದ ₹ 70ವರೆಗೂ ಮಾರಾಟವಾಗುತ್ತಿದೆ. ₹ 40 ನೀಡಿ ಜನರು ನಿಂಬೆ ಶರಬತ್ತು ಕುಡಿಯುತ್ತಿದ್ದಾರೆ. ಪ್ರತಿದಿನ ಒಂದೊಂದು ಅಂಗಡಿಗಳಲ್ಲಿಯೂ 500ರಿಂದ 600 ಗ್ಲಾಸ್ ಜ್ಯೂಸ್ ಮಾರಾಟ ಆಗುತ್ತಿವೆ ಎಂದು ಮಾರುಕಟ್ಟೆಯ ವ್ಯಾಪಾರಸ್ಥರು ತಿಳಿಸಿದರು.

ಹಣ್ಣಿನ ಜ್ಯೂಸ್ ದರ: ನಗರದ ವಿವಿಧ ಅಂಗಡಿಗಳಲ್ಲಿ ಈವರೆಗೆ ₹ 50 ಇದ್ದ ಸೇಬು ಜೂಸ್ ದರ ಈಗ ₹ 65ಕ್ಕೆ ಏರಿಕೆಯಾಗಿದೆ. ದಾಳಿಂಬೆ ₹ 65, ಮುಸಂಬಿ ₹ 50, ಕಿತ್ತಲೆ ₹ 55, ಬಾಳೆಹಣ್ಣು ಮಿಲ್ಕ್‌ ಶೇಕ್ ₹ 60, ಕ್ಯಾರೆಟ್ ಜೂಸ್ ₹ 65, ಕಲ್ಲಂಗಡಿ ಜೂಸ್‌ ₹ 50, ಅನಾನಸ್‌ ₹ 50, ಕರಬೂಜ ₹ 50, ಮಿಕ್ಸ್ ಜೂಸ್ ₹ 50, ಡ್ರೈ ಫ್ರೂಟ್ಸ್ ಶೇಕ್ ₹ 80, ಸಪೋಟ ₹ 55, ಪಪ್ಪಾಯ ₹ 55, ದ್ರಾಕ್ಷಿ ಜೂಸ್ ₹ 50, ಕಬ್ಬಿನ ಹಾಲು ₹ 40 ಹಾಗೂ ಟೆಂಡರ್ ಕೊಕೊನಟ್ ಮಿಲ್ಕ್ ಶೇಕ್ ₹ 80 ದರ ಇದೆ.ಅಭಿವೃದ್ಧಿಯ ಯೋಜನೆ ಅಡಿ ಕಳೆದ ವರ್ಷ ನಗರದ ಹಲವು ಭಾಗದಲ್ಲಿದ್ದ ದೊಡ್ಡ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೆಲವು ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಳೆಯಾದರೆ ಸಸಿಗಳು ಚಿಗುರಿತಾಪಮಾನ ಕಡಿಮೆಯಾಗಬಹುದು. ದಿನೇಶ್ ಆರ್‌ಎಫ್ಒ

ಬಿಸಿಲಿನ ತಾಪಕ್ಕೆ ಎಳನೀರು ಸೇವಿಸುತ್ತಿರುವ ಮಹಿಳೆ
ಮಕ್ಕಳಿಗೆ ಬೇಸಿಗೆ ರಜೆ ಸಮಯ ಬಿಸಿಲಿನ ತಾಪ ಹೆಚ್ಚಿರುವುದರಿಂದ ಹೊರಾಂಗಣದಲ್ಲಿ ಆಟಚಾಡಲು ಸಾಧ್ಯವಿಲ್ಲದೆ ಮನೆಯ ಒಳಗೆ ಟಿ.ವಿ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ನಮ್ಮ ಬಾಲ್ಯದ ಆಟ ನೆನೆದರೆ ಈಗಿನ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ.
ಫಿಲೋಮಿನಾ ಪೋಷಕಿ
ಅಭಿವೃದ್ಧಿಯ ಯೋಜನೆ ಅಡಿ ಕಳೆದ ವರ್ಷ ನಗರದ ಹಲವು ಭಾಗದಲ್ಲಿದ್ದ ದೊಡ್ಡ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೆಲವು ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಳೆಯಾದರೆ ಸಸಿಗಳು ಚಿಗುರಿತಾಪಮಾನ ಕಡಿಮೆಯಾಗಬಹುದು.
ದಿನೇಶ್ ಆರ್‌ಎಫ್ಒ
ಎಳನೀರು ದರ ಏರಿಕೆ
ಮಳೆ ಇಲ್ಲದೆ ಬೆಳೆ ಕುಂಠಿತವಾಗಿದೆ. ಅಣಬೆ ಬೇರು ಮತ್ತು ಕಾಂಡದ ಮೇಲೆ ರಸ ಸೋರುವ ರೋಗಗಳು ತೆಂಗಿನ ಬೆಳೆಯನ್ನು ಬಾಧಿಸುತ್ತಿದೆ. ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಎಳನೀರಿನ ಬೆಳೆ ಕಡಿಮೆಯಾಗಿದ್ದು ಗಾತ್ರದಲ್ಲಿಯೂ ರುಚಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ. ಆದ್ದರಿಂದ ದೂರದ ತಮಿಳುನಾಡು ಕೇರಳ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹೊಸದುರ್ಗ ಇನ್ನಿತರ ಪ್ರದೇಶಗಳಿಂದ ಎಳನೀರು ತರಿಸಲಾಗುತ್ತಿದೆ. ಸರಕು ಸಾಗಣೆ ವೆಚ್ಚ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ‘ರೈತರಿಂದ ಒಂದು ಎಳನೀರಿಗೆ ₹ 25ಕ್ಕೆ ಖರೀದಿಸಲಾಗುತ್ತಿದ್ದು ಖರ್ಚು ವೆಚ್ಚಗಳನ್ನು ನೋಡಿ ವ್ಯಾಪಾರಕ್ಕೆ ₹ 50ರಿಂದ ₹ 60 ದರ ನಿಗಿಪಡಿಸಲಾಗುತ್ತಿದೆ. ಬೆಲೆ ಏರಿಕೆಯಾದರೂ ಎಳನೀರು ಕುಡಿಯುವ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ’ ಎಂದು ಎಳನೀರು ವ್ಯಾಪಾರಿ ಸುಬ್ರಮಣಿ ತಿಳಿಸಿದರು.
ತಾಪ ಕಡಿಮೆಯಾದ ಬಳಿಕ ಹೊರಬನ್ನಿ
ಬಿಸಿಲಿನಲ್ಲಿ ಹೆಚ್ಚಾಗಿ ತಿರುಗಾಡಬೇಡಿ. ಮನೆಯಿಂದ ಹೊರ ಬಂದರೆ ಕೊಡೆ ಹಿಡಿದು ಸಾಗಿ. ಟೋಪಿ ಧರಿಸಿ. ಕಾಟನ್‌ ಬಟ್ಟೆ ಧರಿಸಿ. ಆದಷ್ಟು ಬಿಸಿಲಿನ ತಾಪ ಕಡಿಮೆಯಾದ ಮೇಲೆ ಹೊರಬನ್ನಿ. ಹೆಚ್ಚಾಗಿ ನೀರನ್ನು ಕುಡಿಯಿರಿ. ಬಿಸಿಲಿನಿಂದ ಬಂದೊಡನೆ ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ ಇದರಿಂದ ಬಿಸಿಲಿನ ತಾಪದಿಂದ ಉಂಟಾಗುವ ಚರ್ಮರೋಗದಿಂದ ದೂರವಿರಬಹುದು. ಎಂ.ಅಶೋಕ್ ತಾಲ್ಲೂಕು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.