ಸೊರಬ: ತಾಲ್ಲೂಕಿನ ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಗೊಂಡನಕೊಪ್ಪ ಗ್ರಾಮಸ್ಥರು ರಸ್ತೆ ಹದೆಗೆಟ್ಟಿರುವುದನ್ನು ಖಂಡಿಸಿ ಮಂಗಳವಾರ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಸ್ತೆ ಸರಿಪಡಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆಯೂ ಎಚ್ಚರಿಸಿದರು.
ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, 250ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಜನರು ವ್ಯವಸಾಯ, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಹಾಗೂ ರೋಗಿಗಳು ಆಸ್ಪತ್ರೆಗೆ ಹೋಗಲು ಸಮರ್ಪಕ ರಸ್ತೆ ಇಲ್ಲದಾಗಿದೆ ಎಂದರು.
ರಸ್ತೆ ಡಾಂಬರೀಕಣ ಮಾಡಿಕೊಡುವಂತೆ ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದಲ್ಲಿ ಗ್ರಾಮ ನಡುಗಡ್ಡೆಯಾಗಿ ಹೊರ ಸಂಪರ್ಕ ಕಳೆದುಕೊಂಡು ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದರು.
ಈ ರಸ್ತೆಯು ಸಾಗರ, ಮಾಸೂರು, ಸಮೀಪದ ಹಿರಳೆ, ಮೂಡಗೋಡು ಸೇರಿದಂತೆ ಹಲವು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ಗ್ರಾಮಸ್ಥರು ಒಮ್ಮತದ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.