ಶಿವಮೊಗ್ಗ:ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಸಂಜೆ 4ರ ಒಳಗೆ ಬಹಿರಂಗವಾಗಲಿದೆ. ಅಂದು ಬೆಳಿಗ್ಗೆ 8ರಿಂದ ಮತ ಎಣಿಕೆಗೆ ಕಾರ್ಯ ಆರಂಭವಾಗಲಿದ್ದು, ಸಹ್ಯಾದ್ರಿ ಕಾಲೇಜು ಕೊಠಡಿಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 15 ಕೊಠಡಿಗಳಲ್ಲಿ ನಡೆಯಲಿದೆ. ಎಲ್ಲ ಕೊಠಡಿಗಳಿಂದ ಒಟ್ಟು 126 ಟೇಬಲ್ ಅಳವಡಿಸಲಾಗಿದೆ. ಪ್ರತಿ ಟೇಬಲ್‌ಗೂ ಒಬ್ಬರಂತೆ 126 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್‌ಗೂ ಒಬ್ಬರು ಮೇಲ್ವಿಚಾರಕರು, ಒಬ್ಬ ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್‌ಗಳನ್ನುನೇಮಿಸಲಾಗಿದೆ. ಮತ ಎಣಿಕೆ ಸ್ಥಳದಲ್ಲಿ ಹಾಜರಿರಲು ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರಿಗೆ ಅವಕಾಶ ನೀಡಲಾಗಿದೆ.
ಅಂದು ಬೆಳಿಗ್ಗೆ 7ಕ್ಕೆ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಕಡ್ಡಾಯವಾಗಿ ಹಾಜರಿರಬೇಕು. ಅಂಚೆ ಮತಗಳ ಎಣಿಕೆಯನ್ನೂ ಬೆಳಿಗ್ಗೆ 8ಕ್ಕೆ ಚುನಾವಣಾಧಿಕಾರಿ ಟೇಬಲ್ ಮೇಲೆ ಆರಂಭಿಸಲಾಗುತ್ತದೆ.
14 ಮತದಾನ ಕೇಂದ್ರಕ್ಕೆ ಒಂದು ಸುತ್ತಿನಂತೆ ಮತ ಎಣಿಕೆ ನಡೆಯಲಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗರಿಷ್ಠ 21 ಸುತ್ತು ಹಾಗೂ ಶಿಕಾರಿಪುರದಲ್ಲಿ ಕನಿಷ್ಠ 17 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಮತ ಎಣಿಕೆ ಕೇಂದ್ರದೊಳಗೆ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದೆ. ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಬೆಳಿಗ್ಗೆ 7.30ರ ಒಳಗಾಗಿ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಲು ಸೂಚಿಸಲಾಗಿದೆ. ಅಭ್ಯರ್ಥಿಗಳ ಪರ ಏಜೆಂಟರು ಗುರುತಿನ ಚೀಟಿಯೊಂದಿಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ವಿವರ ನೀಡಿದರು.
ಬಿಗಿ ಭದ್ರತೆ:
ಸುಗಮ ಮತ ಎಣಿಕೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,019 ಪೊಲೀಸ್ ಅಧಿಕಾರಿ, ಸಿಬ್ಬಂದಿ, 521 ಗೃಹ ರಕ್ಷಕ ದಳದ ಸಿಬ್ಬಂದಿ, 5 ಕೆಎಸ್‍ಆರ್‌ಟಿಸಿ ತುಕಡಿ, 14 ಡಿಎಆರ್, 1 ಸಿಆರ್ಎಫ್ ಹಾಗೂ 1 ಎಸ್‌ಎಸ್‌ಬಿ ಕಂಪನಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ 490 ಪೊಲೀಸ್ ಅಧಿಕಾರಿ ಸಿಬ್ಬಂದಿ, 78 ಗೃಹ ರಕ್ಷಕ ದಳದ ಸಿಬ್ಬಂದಿ, 2 ಕೆಎಸ್‍ಆರ್‌ಪಿ ತುಕಡಿ, 4 ಡಿಎಆರ್ ಹಾಗೂ ಸಿಆರ್‌ಎಫ್ ಸಿಬ್ಬಂದಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರದ ಸುತ್ತಲೂ ಭಾರಿ ಭದ್ರತೆ ಒದಗಿಸಲಾಗಿದೆ. ಸಹ್ಯಾದ್ರಿ ಕಾಲೇಜು ಮುಂಭಾಗ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆವರಣದ ಬಳಿ ವಿಜಯೋತ್ಸವ ಆವರಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.