ADVERTISEMENT

ಶಿವಮೊಗ್ಗ: ಬಹಿರಂಗ ಪ್ರಚಾರ ಅಂತ್ಯ, ಕೊನೆ ಕ್ಷಣದ ಕಸರತ್ತು; ಚುರುಕಿನ ಮತಯಾಚನೆ

23ರಂದು ಬೆಳಿಗ್ಗೆ 7ಕ್ಕೆ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:55 IST
Last Updated 30 ಏಪ್ರಿಲ್ 2019, 15:55 IST
   

ಶಿವಮೊಗ್ಗ:ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆಯೇ ತೆರೆಬಿದ್ದಿದ್ದರೂ, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತಿಮ ಕ್ಷಣದ ಕಸರತ್ತು

ರಾಜ್ಯದ 14 ಕ್ಷೇತ್ರಗಳಿಗೆ ಏ.18ರಂದು ಮತದಾನ ಮುಗಿದ ನಂತರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪ್ರಮುಖರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರು. ಎರಡನೇ ಹಂತದ ಬಹಿರಂಗ ಪ್ರಚಾರ ಕೊನೆಗೊಂಡ ಮರುದಿನವೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಗೆ ದೌಡಾಯಿಸಿದ್ದರು. ಮೂರು ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸಿ, ಜೆಡಿಎಸ್‌ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಪರ ಮತಯಾಚನೆ ಮಾಡಿದ್ದರು. ಮತ್ತೆ ಏ.20, 21ರಂದು ಇಲ್ಲೇ ಠಿಕಾಣಿ ಹೂಡಿದಿದ್ದರು. ಅತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ಏ.16ರಿಂದಲೇ ಪುತ್ರ ರಾಘವೇಂದ್ರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಏ.23ರಂದು ಚುನಾವಣೆ ನಡೆಯುತ್ತಿದ್ದರೂ, ಅವರ ಚಿತ್ತ ಶಿವಮೊಗ್ಗದಲ್ಲೇ ನೆಟ್ಟಿದೆ. ಭದ್ರಾವತಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿ, ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದರು.ಎರಡೂ ಪಕ್ಷಗಳ ಮುಖಂಡರು ಭಾನುವಾರ ಅಂತಿಮ ಕ್ಷಣದ ಕಸರತ್ತು ನಡೆಸಿದರು. ಬಿಜೆಪಿ ಮುಖಂಡರು ಶಿವಮೊಗ್ಗ ಸೇರಿದಂತೆ ಹಲವೆಡೆ ವಿಜಯದ ಕಡೆ ಬಿಜೆಪಿ ನಡೆ ಹಮ್ಮಿಕೊಂಡಿತ್ತು. ಮೈತ್ರಿ ಅಭ್ಯರ್ಥಿ ಪರ ಹಲವೆಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಮೈತ್ರಿಗೆ ಬಲ ತುಂಬಿದ ಡಿಕೆ ಸಹೋದರರು:

ಉಪ ಚುನಾವಣೆಯ ಸೋಲಿನ ನ್ಯೂನತೆ ಸರಿಪಡಿಸಿಕೊಳ್ಳಲು ಈ ಚುನಾವಣೆ ಘೋಷಣೆಯಾದ ಆರಂಭದಿಂದಲೇ ಮೈತ್ರಿ ಮುಖಂಡರು ಒತ್ತು ನೀಡಿದ್ದರು. ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಂಡ ಸಚಿವ ಡಿ.ಕೆ.ಶಿವಕುಮಾರ್ ಭದ್ರಾವತಿಯಲ್ಲಿ ಮೈತ್ರಿ ಪಕ್ಷಗಳ ಮುಖಂಡರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರು. ಎರಡು ದಶಕಗಳಿಂದ ಹಾವು, ಮುಗುಸಿಯಂತೆ ಇದ್ದ ಅಪ್ಪಾಜಿ ಗೌಡ, ಬಿ.ಕೆ.ಸಂಗಮೇಶ್ವರ ಒಟ್ಟಿಗೆ ಮೈತ್ರಿ ಅಭ್ಯರ್ಥಿ ಪರ ಅಖಾಡಕ್ಕೆ ಇಳಿದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಒಕ್ಕಲಿಗರ ಮತ ಸೆಳೆಯಲು ಬಿಜೆಪಿ, ಮೈತ್ರಿ ತಂತ್ರ:

ಈ ಬಾರಿ ಭದ್ರಾವತಿ ಹೊರತುಪಡಿಸಿದರೆ ಪಕ್ಷಗಳು ಹೆಚ್ಚು ಒತ್ತು ನೀಡಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ. ಉಪ ಚುನಾವಣೆಯಲ್ಲಿ ಮೈತ್ರಿ ಇದ್ದರೂ, ಅಲ್ಲಿ ಬಿಜೆಪಿ ಸಾಕಷ್ಟು ಮುನ್ನಡೆ ಪಡೆದುಕೊಂಡಿತ್ತು. ಹಾಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ, ದೇವೇಗೌಡರು, ಡಿ.ಕೆ.ಶಿವಕುಮಾರ್, ರೇವಣ್ಣ, ಪುಟ್ಟರಾಜು, ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಸಂಚರಿಸಿ ಒಕ್ಕಲಿಗ ಮತಗಳನ್ನು ಕ್ರೋಡೀಕರಿಸಲು ಪ್ರಯತ್ನಿಸಿದ್ದಾರೆ. ಅತ್ತ ಬಿಜೆಪಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕರೆತಂದು ಮತಗಳು ಕೈತಪ್ಪದಂತೆ ಸಮುದಾಯದ ಕಸರತ್ತು ನಡೆಸಿದೆ.

ತಮ್ಮನ ಪರ ಗೀತಾ ಶಿವರಾಜ್‌ಕುಮಾರ್:

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಈಡಿಗ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ದೊರಕಿಸಲು ಸಹೋದರಿ ಗೀತಾ ಶಿವರಾಜ್‌ಕುಮಾರ್ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಸಾಥ್ ನೀಡುತ್ತಿದ್ದಾರೆ. ಅತ್ತ ಬಿಜೆಪಿ ಕುಮಾರ್ ಬಂಗಾರಪ್ಪ, ಹಾಲಪ್ಪ ಹರತಾಳು ಆ ಸಮುದಾಯದ ಮತಗಳ ಸಮನ್ವಯಕ್ಕೆ ಶ್ರಮಿಸುತ್ತಿದ್ದಾರೆ.

ಮಾಧ್ಯಮಗಳ ಬಳಕೆಯಲ್ಲಿ ಎಲ್ಲರೂ ಮುಂದು:

ಪ್ರತಿ ಬಾರಿ ಮಾಧ್ಯಮಗಳಲ್ಲಿ ಬಿಜೆಪಿ ಅತಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿತ್ತು. ಇದೇ ಮೊದಲ ಬಾರಿ ಮೈತ್ರಿ ಪಕ್ಷಗಳೂ ಮಾಧ್ಯಮಗಳನ್ನು ಅತಿ ಹೆಚ್ಚು ಬಳಕೆ ಮಾಡಿಕೊಂಡಿವೆ. ಪ್ರಮುಖ ಮುಖಂಡರು, ಜಾತಿವಾರು ಮುಖಂಡರು, ವಿವಿಧ ಸಂಘಟನೆಗಳು ನಿರಂತರವಾಗಿ ಪತ್ರಿಕಾಗೋಷ್ಠಿ ನಡೆಸಿವೆ. ಮಾಧ್ಯಮ ಬಳಕೆಯಲ್ಲಿ ಬಿಜೆಪಿ ಕಾರ್ಯತಂತ್ರವನ್ನೇ ಈ ಬಾರಿ ಮೈತ್ರಿಯೂ ಅನುಸರಿಸಿದ ಪರಿಣಾಮ ಇಬ್ಬರೂ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಚಾರ ಸಿಕ್ಕಿದೆ.

ಕ್ಷೇತ್ರಕ್ಕೆ ಕಾಲಿಡದ ಲಿಂಗಾಯತ ನಾಯಕರು:

ಬಿಜೆಪಿಗೆ ಬಹುದೊಡ್ಡ ಬಲ ಲಿಂಗಾಯತ ಸಮುದಾಯ. ಆ ಮತಗಳನ್ನು ಸೆಳೆಯಲು ಮೈತ್ರಿ ಪಕ್ಷದ ಯಾವ ಲಿಂಗಾಯತ ನಾಯಕರು ಕ್ಷೇತ್ರಕ್ಕೆ ಬರಲಿಲ್ಲ. ಎಸ್.ಎಸ್. ಮಲ್ಲಿಕಾರ್ಜುನ್, ಬಸವರಾಜ ಹೊರಟ್ಟಿ ಬರುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಬಿ.ಕೆ.ಸಂಗಮೇಶ್ವರ, ಎಚ್.ಎಂ.ಚಂದ್ರಶೇಖರಪ್ಪ, ಶಾಂತವೀರಪ್ಪ ಗೌಡ, ವೀರೇಶ ಕೊಟಗಿ, ಶಿವಲಿಂಗೇಗೌಡ, ಸಿ.ಡಿ.ಹನುಮಂತಪ್ಪ, ಗುಡಮಗಟ್ಟೆ ಮಲ್ಲಯ್ಯ, ಹನುಮಂತಾಪುರ ನಾಗರಾಜ್ ಮತ್ತಿತರ ಸ್ಥಳೀಯ ಮುಖಂಡರು ಪ್ರಚಾರ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.