ADVERTISEMENT

ಶಿಥಿಲಗೊಂಡ ವಿದ್ಯುತ್ ಕಂಬಗಳು: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 7:23 IST
Last Updated 15 ಜುಲೈ 2024, 7:23 IST
ಹೊಳೆಬಾಗಿಲು ಬಳಿ ಈಚೆಗೆ ಉರುಳಿದ ವಿದ್ಯುತ್ ಕಂಬಗಳ ಸಮೀಪದಲ್ಲಿ ಆಪಾಯವನ್ನು ಲೆಕ್ಕಿಸದೇ ಬಸ್ ಹಾದುಹೋಗುತ್ತಿರುವುದು
ಹೊಳೆಬಾಗಿಲು ಬಳಿ ಈಚೆಗೆ ಉರುಳಿದ ವಿದ್ಯುತ್ ಕಂಬಗಳ ಸಮೀಪದಲ್ಲಿ ಆಪಾಯವನ್ನು ಲೆಕ್ಕಿಸದೇ ಬಸ್ ಹಾದುಹೋಗುತ್ತಿರುವುದು   

ಬ್ಯಾಕೋಡು (ತುಮರಿ): ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿಂತಿಲ್ಲ. ಪದೇ ಪದೇ ವಿದ್ಯುತ್ ಕೈಕೊಡುತ್ತಿರುವ ಕಾರಣ ಜನರು, ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ಕೆಲಸಕ್ಕೆಂದು ಬರುವ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಪ್ರತಿ ಬಾರಿ ರಭಸದ ಮಳೆ ಹಾಗೂ ಗಾಳಿಗೆ ಮಲೆನಾಡಿನ ಹಳ್ಳಿಗಳ ಕಚ್ಚಾ ರಸ್ತೆಗಳ ಬದಿಯಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತವೆ. ಮನೆ, ವಾಹನಗಳ ಮೇಲೆ ಬಿದ್ದು ಹಾನಿಯುಂಟುಮಾಡುವ ಜೊತೆಗೆ ಕುಗ್ರಾಮಗಳಲ್ಲಿನ ಒಂಟಿ ಮನೆಗಳು ವಾರಗಟ್ಟಲೇ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಜೀವನ ನಡೆಸಬೇಕಾಗುತ್ತದೆ.

ಕರೂರು, ಬಾರಂಗಿ ಅವಳಿ ಹೋಬಳಿಗಳ ವ್ಯಾಪ್ತಿಯ ಮರಾಠಿ, ಹೊಸಕೊಪ್ಪ, ಅಬ್ಬಿನಾಲೆ, ಕಾರಣಿ, ಬರುವೆ, ನೆಲ್ಲಿಬೀಡು, ಕೋಗಾರು, ಬಿಳಿಗಾರು ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್ ಕೈಕೊಡುತ್ತಿರುವ ಕಾರಣ ಕೃಷಿಕರಿಗೆ ಬೇಸಿಗೆಯಲ್ಲಿ ಕಡಿಮೆ ವೋಲ್ಟೇಜ್‌ ಸಮಸ್ಯೆ ಎದುರಾಗುತ್ತದೆ. ಮಳೆಗಾಲ ಆರಂಭವಾದರೇ ವಿದ್ಯುತ್‌ ಪೂರೈಕೆಯೇ ಸರಿಯಾಗಿ ಇರುವುದಿಲ್ಲ. ಇದರಿಂದ ಹಳ್ಳಿಗಳಲ್ಲಿ ಜನರ ಪಾಡು ಹೇಳಿ ಪ್ರಯೋಜನವಿಲ್ಲ ಎಂಬಂತಾಗಿದೆ.

ADVERTISEMENT

ಶರಾವತಿ ಹಿನ್ನೀರಿನಲ್ಲಿ ಬಹುತೇಕ ಗ್ರಾಮಗಳು ಗುಡ್ಡ ಪ್ರದೇಶದಿಂದ ಅವೃತ್ತವಾಗಿವೆ. ಜೂನ್ ತಿಂಗಳಲ್ಲಿ ಇಲ್ಲಿನ ಬರುವೆ, ತುಮ್ಮನಗದ್ದೆ, ಹಾರೇಕೊಪ್ಪ, ಹೊಸೂರು, ಜಾವಳ್ಳಿ, ಕಿರೇತೋಡಿ, ಹೆರಾಟೆ, ಬೊಬ್ಬಿಗೆ, ಮಿಂಚ, ಮಾರಲಗೋಡು, ಮೇಘಾನೆ, ಕಳೂರು ಭಾಗದಲ್ಲಿ ವಿದ್ಯುತ್ ಪೂರೈಕೆಯನ್ನು ವಾರಕ್ಕೊಮ್ಮೆ ಕಾಣುವುದೂ ಕಷ್ಟ ಎನ್ನುತ್ತಾರೆ ರೈತ ಯೋಗರಾಜ.

ಹೆಚ್ಚು ಜನವಸತಿಯ ಪ್ರದೇಶಗಳಾದ ಬ್ಯಾಕೋಡು, ಸುಳ್ಳಳ್ಳಿ ಭಾಗದಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಒಂದು ದಿನದಲ್ಲಿ ಹೆಚ್ಚೆಂದರೆ 2 ತಾಸು ವಿದ್ಯುತ್ ಇರುತ್ತದೆ. ಒಮ್ಮೊಮ್ಮೆ ದಿನಗಟ್ಟಲೇ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಪೂರೈಕೆ  ಇಲ್ಲದ ಕಾರಣ, ನೆಟ್‌ವರ್ಕ್‌ ಸಹ ಸ್ಥಗಿತಗೊಂಡು ಸಕಾಲಕ್ಕೆ ಜನರು ತಮ್ಮ ಕೆಲಸ ಮಾಡಿಕೊಳ್ಳಲಾಗದೇ ಹಿಂದಿರುಗುವ ದೃಶ್ಯ ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ 2 ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳು, ಒಂದು ಪದವಿ ಪೂರ್ವ ಕಾಲೇಜು, 3 ಪ್ರೌಢಶಾಲೆಗಳು ಸೇರಿದಂತೆ ನಾಡ ಕಚೇರಿ, ಕೃಷಿ ಪತ್ತಿನ ಸಹಕಾರ ಸಂಘಗಳು, ಆಫ್‌ಕೋಸ್, ಗ್ರಾಮ ಓನ್ ಕೇಂದ್ರ, ಗ್ರಂಥಾಲಯಗಳು, ವಿವಿಧ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯುತ್ ನಿಲುಗಡೆ ಮಾಡುತ್ತಿರುವ ಕಾರಣ ಬಾಂಡ್ ಪೇಪರ್, ಜೆರಾಕ್ಸ್ ತೆಗೆದುಕೊಳ್ಳುವುದಕ್ಕೂ ಕಷ್ಟವಾಗಿದೆ. ರೈತರಿಗೆ ಬೆಳೆವಿಮೆ ಅರ್ಜಿ ಸಲ್ಲಿಸಲು, ಪಹಣಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು.

ವಿದ್ಯಾರ್ಥಿಗಳಿಗೂ ತೊಂದರೆ:

ಈಗಾಗಲೇ ಎಲ್ಲೆಡೆ ಶೈಕ್ಷಣಿಕ ವರ್ಷ ಆರಂಭವಾಗಿ ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಬಸ್ ಪಾಸ್, ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಮೆಸ್ಕಾಂ ನಿಂದ ಆಗಾಗ ವಿದ್ಯುತ್ ಕಡಿತ ಮಾಡುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ನಿಗದಿತ ಕಾಲಕ್ಕೆ ಅರ್ಜಿ ಸಲ್ಲಿಸದಿದ್ದರೆ ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗುವುದು ಹೇಗೆ? ಅಗತ್ಯ ದಾಖಲೆಗಳನ್ನು ಒದಗಿಸುವುದಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ವಿದ್ಯಾರ್ಥಿ ಪ್ರಜ್ವಲ್.

‘ಬೇಸಗೆಯಲ್ಲಿ ಹಲವು ಬಾರಿ ವಿದ್ಯುತ್ ನಿಲುಗಡೆ ಕುರಿತು ಅಧಿಕೃತ ಪ್ರಕಟಣೆ ಮೆಸ್ಕಾಂನಿಂದ ಹೊರಡಿಸಲಾಗುತ್ತದೆ. ಅದು ಹೊರತುಪಡಿಸಿದರೆ ನಿತ್ಯವೂ ಎಲ್.ಸಿ, ಲೈನ್ ಟ್ರಿಪ್ ಎಂದು ಹತ್ತಾರು ಬಾರಿ ವಿದ್ಯುತ್ ಕಡಿತಗೊಳಿಸುವುದನ್ನು ಮೆಸ್ಕಾಂ ಅಧಿಕಾರಿಗಳು ರೂಢಿ ಮಾಡಿಕೊಂಡಿದ್ದಾರೆ’ ಎಂದು ಗಣಪತಿ ಹಿನ್ಸೋಡಿ ದೂರಿದ್ದಾರೆ.

ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು:

‘ಈ ಭಾಗದ ನೆಲ್ಲಿಬೀಡುನಿಂದ ಸಸಿಗೊಳ್ಳಿ, ಹೊಸಕೊಪ್ಪ, ಬರುವೆ, ಮಾರಲಗೋಡು, ಕಾರಣಿ, ಕಟ್ಟಿನಕಾರು ಭಾಗದ ಹಲವೆಡೆ ವಿದ್ಯುತ್ ಕಂಬ, ವಿದ್ಯುತ್ ಲೈನ್ ಶಿಥಿಲಾವಸ್ಥೆ ತಲುಪಿದ್ದು , ಸಣ್ಣಪುಟ್ಟ ಮರದ ಕೊಂಬೆಗಳು ಬಿದ್ದರೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಆಪಾಯಕ್ಕೆ ಆಹ್ವಾನ ನೀಡುತ್ತಿವೆ. ವಿದ್ಯುತ್ ಸ್ವರ್ಶಿಸಿ ಹಲವು ಕಡೆ ಜನ ಜಾನುವಾರುಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸುಧಿಂದ್ರ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮರಿ ಸಮೀಪದ ಸಸಿಗೊಳ್ಳಿ ಹಾಗೂ ಸುಳ್ಳಳ್ಳಿ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಉರುಳಿರುವುದು
ರಸ್ತೆಗೆ ಬಾಗಿದ ಮರ ತೆರವು ಕಾರ್ಯ ವಿಳಂಬ ದಿನಗಟ್ಟಲೇ ವಿದ್ಯುತ್ ಅನಿಯಮಿತ ಸ್ಥಗಿತ ಬೆಳೆ ವಿಮೆ, ಪಹಣಿ ಪತ್ರ ಪಡೆಯಲು ತೊಂದರೆ ಪ್ರತಿಭಟನೆಗೆ ಗಡುವು ನೀಡಿದ ಗ್ರಾಮಸ್ಥರು
ಚುನಾವಣೆ ಹಿನ್ನೆಲೆಯಲ್ಲಿ ಜಂಗಲ್ ಕಟಿಂಗ್ ಕಾರ್ಯ ವಿಳಂಬವಾಗಿದೆ. ವಿದ್ಯುತ್ ಕಂಬಕ್ಕೆ ಹೊಂದಿಕೊಂಡಿರುವ ಕೊಂಬೆ ತೆರವು ಮಾಡಲು 4 ಜನರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಶೇ 40ರಷ್ಟು ಕಾರ್ಯ ಪೂರ್ಣಗೊಂಡಿದೆ
ಶ್ರೀಧರ್ ಎಸ್. ಮೆಲ್ವಿಚಾರಕರು ಮೆಸ್ಕಾಂ ಉಪ ವಿಭಾಗ ಬ್ಯಾಕೋಡು
ಸಮರ್ಪಕ ವಿದ್ಯುತ್ ಪೂರೈಕೆಗೆ ಗಡುವು:
ಈಗಾಗಲೇ ದಿನನಿತ್ಯ ಅಸಮರ್ಪಕ ವಿದ್ಯುತ್ ಸೇವೆಯಿಂದ ಈ ಭಾಗದ ಜನರು ರೋಸಿ ಹೋಗಿದ್ದಾರೆ. ಮೆಸ್ಕಾಂ ಉಪ ವಿಭಾಗದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಅವ್ಯವಸ್ಥೆ ಸರಿಪಡಿಸಲು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ವಂದನೆ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜುಲೈ 20ರ ಗಡುವು ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರ ಸಮ್ಮುಖದಲ್ಲಿ ಬ್ಯಾಕೋಡು ಉಪ ವಿಭಾಗದ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುದಾಗಿ ಎಸ್.ಎಸ್ ಭೋಗ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಧಿಂದ್ರ ಹೊಸಕೊಪ್ಪ ಮಾಹಿತಿ ನೀಡಿದ್ದಾರೆ.
ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ:
‘ಶರಾವತಿ ಹಿನ್ನೀರು ಭಾಗದ ಜನರಿಗೆ ನಿರಂತರವಾಗಿ ವಿದ್ಯುತ್ ನೀಡಬೇಕೆಂದು ಸ್ಥಳೀಯ ಶಾಸಕರು ಈಚೆಗೆ ಕೆಡಿಪಿ ಸಭೆಯಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿದರೆ ವಾಸ್ತವವಾಗಿ ಯಾವುದೇ ಕಾರ್ಯ ಸಾಧನೆ ಆಗಿಲ್ಲ. ಅಧಿಕಾರಿಗಳು ಶಾಸಕರ ಸೂಚನೆಯಂತೆ ವಿದ್ಯುತ್ ಮಾರ್ಗ ಸುಧಾರಿಸಿದ್ದಾರೆಯೋ ಇಲ್ಲವೋ ಎಂಬುದು ಅರ್ಥವಾಗುತ್ತಿಲ್ಲ. ಈಚೆಗೆ ಹೊಳೆಬಾಗಿಲು ಬಳಿ ವಿದ್ಯುತ್ ಕಂಬ ಉರುಳಿದಾಗ 3 ದಿನಗಳ ನಂತರ ಅದರ ದುರಸ್ತಿ ಮಾಡಲಾಯಿತು. ವಿದ್ಯುತ್ ಕಂಬಗಳು ಬಿದ್ದಿವೆ ಲೈನ್ ಕಟ್ ಆಗಿದೆ ಎಂದು ಹೇಳುವುದನ್ನು ಕೇಳಿಸಿಕೊಳ್ಳುವುದೇ ಆಗಿದೆ. ಸಾರ್ವಜನಿಕರ ಸಹನೆಯನ್ನು ಮೆಸ್ಕಾಂ ಈ ಪರಿ ಪರೀಕ್ಷಿಸಿದರೆ ಹೇಗೆ?’ ಎಂದು ಅರುಣ್ ಕರೂರು ಬೇಸರ ವ್ಯಕ್ತಪಡಿಸಿದರು. ‘ಬೇಸಿಗೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳ ಪಟ್ಟಿ ಮಾಡುವುದು ಅವುಗಳನ್ನು ಬದಲಾಯಿಸುವುದು ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳಿಗೆ ಅಡಚಣೆ ತಂದೊಡ್ಡುವ ಮರ  ಟೊಂಗೆಗಳನ್ನು ಕಟಾವು ಮಾಡಿ ಕ್ರಮ ಕೈಗೊಳ್ಳುವುದು ಬೀಳುವ ಮರಗಳನ್ನು ಗುರುತಿಸುವುದು ಇದ್ಯಾವುದನ್ನೂ ಮಾಡಿಲ್ಲವೆ? ಮಾಡಿದ್ದರೆ ಅಲ್ಪಸ್ವಲ್ಪ ಗಾಳಿ ಬೀಸಿದರೂ ಕಂಬಗಳು ಯಾಕೆ ಉರುಳುತ್ತಿವೆ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಮೆಸ್ಕಾಂ ಅಧಿಕಾರಿಗಳು ಉತ್ತರದಾಗಳಲ್ಲವೇ’ ಎಂಬುದು ಎಸ್.ಎಸ್. ಭೋಗ್ ಗ್ರಾಮಸ್ಥರ ಮಾತು.
ನಡೆಯದ ಜಂಗಲ್ ಕಟಿಂಗ್: 
ಮಳೆಗಾಲಕ್ಕೂ ಮುನ್ನ ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರ ಕೊಂಬೆಗಳನ್ನು ಗುರುತಿಸಿ ಸರ್ವೆ ನಡೆಸಲಾಗುತ್ತದೆ. ಬಳಿಕ ಹರಾಜು ಪ್ರಕ್ರಿಯೆ ನಡೆಸಿ ಖಾಸಗಿಯವರಿಗೆ ಟೆಂಡರ್ ನೀಡಿ ಅವುಗಳನ್ನು ತೆರವುಗೊಳಿಸಲಾಗುತ್ತಿತ್ತು. ಬ್ಯಾಕೋಡು ಉಪ ವಿಭಾಗದ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್ ಪ್ರಕ್ರಿಯೆ (ರಸ್ತೆ ಕಡೆಗೆ ಬಾಗಿದ ಮರಗಳ ತೆರವು ಕಾರ್ಯಾಚರಣೆ) ಈವರೆಗೂ ನಡೆದಿಲ್ಲ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಈ ಬಗ್ಗೆ ನಿರಾಸಕ್ತಿ ತೋರಿದ ಕಾರಣ ಅವಳಿ ಹೋಬಳಿಗಳಲ್ಲಿ ಹಲವೆಡೆ ಅಪಾಯಕಾರಿ ಮರಗಳ ತೆರವು ಕಾರ್ಯ ಆಗಿಲ್ಲ. ಅನಿವಾರ್ಯವಾಗಿ ಕೆಲವು ಕಡೆ ಸಾರ್ವಜನಿಕರೇ ಮರ ಕೊಂಬೆ ತೆರವು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.