ಕೋಣಂದೂರು: ಸಮೀಪದ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಸರ್ಕಾರಿ ಜಾಗ ಕಬಳಿಸಿ ಮಾರಾಟ ಮಾಡುತ್ತಿದ್ದಸಂಬಂಧ ಗ್ರಾಮ ಪಂಚಾಯಿತಿ ಆಡಳಿತ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ತಹಶೀಲ್ದಾರ್‌ಗೆ ದೂರು ನೀಡಿದ ಕಾರಣ ಗುರುವಾರ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಹೊರಬೈಲು ಗ್ರಾಮದ ಸರ್ವೆ ನಂ.6ಕ್ಕೆ ಸೇರಿದ ಸರ್ಕಾರಿ ಪ್ರದೇಶದಲ್ಲಿ ಅನಧಿಕೃತ ನಿವೇಶನ, ತಾತ್ಕಾಲಿಕ ಕಟ್ಟಡ ನಿರ್ಮಿಸಿ ಲಕ್ಷಾಂತರ ರೂಪಾಯಿಗೆ ಕೆಲವರು ಮಾರಾಟ ಮಾಡುತ್ತಿದ್ದ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಸಾರ್ವಜನಿಕ ಬಳಕೆಗೆ ಮೀಸಲಾದ ಜಾಗದಲ್ಲಿ ಒತ್ತುವರಿ ಪ್ರಕರಣದ ಕುರಿತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸ್ಥಳ ಪರಿಶೀಲಿಸಿದ ಗ್ರಾಮ ಪಂಚಾಯಿತಿ ಆಡಳಿತ ಸರ್ಕಾರಿ ಪ್ರದೇಶದಲ್ಲಿ ಅನಧಿಕೃತ ನಿವೇಶನ ಕಟ್ಟಡ ನಿರ್ಮಾಣ, ಮಾರಾಟ ಸಂಗತಿ ಬಹಿರಂಗವಾದ ಕಾರಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ದೂರು
ನೀಡಿತ್ತು.
ಅಂಬೇಡ್ಕರ್ ವಸತಿಶಾಲೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಇತರೆ ಸಾರ್ವಜನಿಕ ಅಭಿವೃದ್ಧಿ ಕೆಲಸಕ್ಕೆ ಸರ್ಕಾರಿ ಪ್ರದೇಶ ಮೀಸಲಾಗಿತ್ತು. 250ಕ್ಕೂ ಹೆಚ್ಚು ನಿವೇಶನ, 40 ತಾತ್ಕಾಲಿಕ ಕಟ್ಟಡ, ಗುಡಿಸಲುಗಳನ್ನು ತೆರವು ಮಾಡಲಾಯಿತು. ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಲಾಠಿ ಪ್ರಹಾರ: ಕಾರ್ಯಾಚರಣೆ ನಡೆಸದಂತೆ ಒತ್ತುವರಿದಾರರು ತಕರಾರು ಒಡ್ಡಿದರು. ಜೆಸಿಬಿ ಯಂತ್ರಕ್ಕೆ ಕಲ್ಲು ತೂರಲು ಮುಂದಾದಾಗ ಪೊಲೀಸರು ಲಾಠಿ ಬೀಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.