ಶಿವಮೊಗ್ಗ: ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಡಿಸಿಸಿ) ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ತೀರ್ಥಹಳ್ಳಿ, ಶಿವಮೊಗ್ಗದ ಮನೆ, ಕಚೇರಿ, ಫಾರಂ ಹೌಸ್‌ಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಮಂಜುನಾಥಗೌಡ ವಿರುದ್ಧ ಈ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟುಕೊಂಡು ಸಾಲ ನೀಡಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಕಳೆದ ಎರಡೂವರೆ ವರ್ಷಗಳಿಂದ ಡಿಸಿಸಿ ಬ್ಯಾಂಕ್ ಚಟುವಟಿಕೆಗಳಿಂದ ದೂರವಿದ್ದ ಅವರು, ವಾರದ ಹಿಂದಷ್ಟೇ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಆರ್.ಎಂ.ಮಂಜುನಾಥಗೌಡ
ತೀರ್ಥಹಳ್ಳಿ ಪಟ್ಟಣದಲ್ಲಿರುವ ಬೆಟ್ಟಮಕ್ಕಿಯ ನಿವಾಸ, ತಾಲ್ಲೂಕಿನ ಹಣಗೆರೆಕಟ್ಟೆ ಬಳಿ ಕರಕುಚ್ಚಿಯ ಫಾರಂಹೌಸ್, ಶಿವಮೊಗ್ಗದ ಶರಾವರಿ ನಗರದ ಮನೆ ಹಾಗೂ ಕಚೇರಿಯ ಮೇಲೆ ಇಡಿ ಅಧಿಕಾರಿಗಳ ಐದು ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ನಕಲಿ ಬಂಗಾರದ ಆಭರಣ ಅಡವಿಟ್ಟ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇತ್ತೀಚೆಗಷ್ಟೇ ಬ್ಯಾಂಕಿನಿಂದ ವರದಿ ಪಡೆದುಕೊಂಡಿತ್ತು. ಆರ್.ಎಂ.ಮಂಜುನಾಥಗೌಡ ಬೆಂಗಳೂರಿನಲ್ಲಿ ಇದ್ದಾರೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.