ADVERTISEMENT

ಕುಂಬತ್ತಿ ಬೆಂಬತ್ತಿರುವ ಗಣಿಗಾರಿಕೆ: ಪರಿಸರಕ್ಕೆ ಧಕ್ಕೆಯ ಆತಂಕ

ವೆಂಕಟೇಶ ಜಿ.ಎಚ್.
Published 12 ಮೇ 2023, 19:37 IST
Last Updated 12 ಮೇ 2023, 19:37 IST
ಹೊಸನಗರ ತಾಲ್ಲೂಕಿನ ಕುಂಬತ್ತಿಯ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ನೋಟ
ಹೊಸನಗರ ತಾಲ್ಲೂಕಿನ ಕುಂಬತ್ತಿಯ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ನೋಟ   

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನ ಶರಾವತಿ ಕಣಿವೆಯ ಕುಂಬತ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮಲೆನಾಡಿನ ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿದೆ.

ಕುಂಬತ್ತಿಯಲ್ಲಿ ಈಗಾಗಲೇ 15 ಎಕರೆಯಷ್ಟು ಬೆಟ್ಟ ಪ್ರದೇಶ ಗಣಿಗಾರಿಕೆಗೆ ತುತ್ತಾಗಿದೆ. ಬೆಟ್ಟದ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಮಣ್ಣಿನ ರಾಶಿಯೇ ಕಂಡುಬರುತ್ತಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆಗೆ ನಡೆಸುವ ಸ್ಫೋಟಗಳು ಪಕ್ಕದ ಶರಾವತಿ ಕಣಿವೆಯ ಜಲಚರ, ಅಪಾರ ವನ್ಯಜೀವಿ, ಪಕ್ಷಿಸಂಕುಲಕ್ಕೆ ಮಾರಕವಾಗಿದೆ ಎಂಬುದು ಪರಿಸರವಾದಿಗಳ ಅಳಲು.

ಗಣಿಗಾರಿಕೆಯಿಂದ ಕುಂಬತ್ತಿ, ಕಾರ್ಗಡಿ, ಹನಿಯ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳು, ಚಿಕ್ಕ ಕೆರೆಗಳು, ಮೂರು ಹಳ್ಳಗಳು ಹೂಳಿನಿಂದ ತುಂಬಿ ಅಸ್ತಿತ್ವ ಕಳೆದುಕೊಳ್ಳುವ ಆತಂಕವಿದೆ. ಪ್ರತೀ ಬಾರಿ ಸ್ಫೋಟ ನಡೆದಾಗಲೂ ಗ್ರಾಮದ ಸುತ್ತಲಿನ ಕಣಿವೆಯಲ್ಲಿನ ವನ್ಯಜೀವಿಗಳು ದಿಕ್ಕಾಪಾಲಾಗಿ ಓಡುತ್ತಿವೆ ಎಂದು ಜೀವವೈವಿಧ್ಯ ಮಂಡಳಿ ಸದಸ್ಯ ಡಾ. ಪ್ರಕಾಶ ಮೇಸ್ತ ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

‘ಕುಂಬತ್ತಿ ಬೆಟ್ಟ ಭೂಕುಸಿತ ಸೂಕ್ಷ್ಮ ವಲಯದಲ್ಲಿ ಬರುತ್ತದೆ. 2021ರಲ್ಲಿ ಸರ್ಕಾರಕ್ಕೆ ನೀಡಿದ ವರದಿಯಲ್ಲೂ ಶರಾವತಿ ಕಣಿವೆಯ ಈ ಪ್ರದೇಶದ ಬಗ್ಗೆ ಉಲ್ಲೇಖಿಸಿದ್ದೇವೆ ಇಲ್ಲಿ ಗಣಿಗಾರಿಕೆಗೆ ಕೊಟ್ಟಿರುವ ಅನುಮತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರುಪರಿಶೀಲಿಸಲಿ’ ಎಂದು ಭೂಕುಸಿತ ಅಧ್ಯಯನ ಸಮಿತಿ ಸದಸ್ಯ ಡಾ.ಟಿ.ವಿ. ರಾಮಚಂದ್ರ ಹೇಳುತ್ತಾರೆ.

ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಅನುಮತಿ ಪಡೆಯದೇ ಕುಂಬತ್ತಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಸಾಧ್ಯವಿಲ್ಲ. ಶರಾವತಿ ಜಲಾಶಯ ಹೂಳು ತುಂಬಿದೆ. ಜಲಾಶಯದ ಪಕ್ಕದ ಬೆಟ್ಟದಲ್ಲಿ ಗಣಿಗಾರಿಕೆ ನಡೆದರೆ ಇಡೀ ಬೆಟ್ಟದ ಮಣ್ಣು ಜಲಾಶಯ ಸೇರಿ ಇನ್ನಷ್ಟು ಹೂಳು ತುಂಬಲಿದೆ. ಕೆಪಿಸಿಯ ಮುಖ್ಯಸ್ಥರು ತಕ್ಷಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೇಲೆ ಒತ್ತಡ ಹೇರಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.

‘ಕುಂಬತ್ತಿ ಬೆಟ್ಟದಲ್ಲಿ ಸ್ಫೋಟಕಗಳ ಬಳಕೆಯಿಂದ ಸುತ್ತಲಿನ ಮನೆಗಳು ಬಿರುಕುಬಿಟ್ಟಿವೆ. ಕಾರ್ಗಡಿಯ ಸಿದ್ಧಿವಿನಾಯಕ ದೇವಾಲಯ ಕಟ್ಟಡದಲ್ಲೂ ಸೀಳು ಕಾಣಿಸಿಕೊಂಡಿದೆ. ಕುಂಬತ್ತಿಯಲ್ಲಿ ಪುರಾತತ್ವ ಇಲಾಖೆಗೆ ಸೇರಿದ ಉಮಾಮಹೇಶ್ವರ ದೇವಾಲಯ ಇದೆ. ಸ್ಫೋಟದ ಸದ್ದಿನಿಂದಾಗಿ ಸ್ಥಳೀಯರು ಭಯದಲ್ಲಿ ಜೀವಿಸುವಂತಾಗಿದೆ. ಇಲಾಖೆ ಅನುಮತಿ ಇಲ್ಲದೇ ಕುಂಬತ್ತಿ ಬೆಟ್ಟದಲ್ಲಿ ಗಣಿಗಾರಿಕೆ ಹೇಗೆ ಸಾಧ್ಯ’ ಎಂದು ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಪ್ರಶ್ನಿಸುತ್ತಾರೆ.

ನ್ಯಾಯಾಂಗ ನಿಂದನೆ ಆಗಲಿದೆ: ವಿಂಧ್ಯಾ

‘ಕುಂಬತ್ತಿಯಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ಮೊದಲು ನಿರಾಕ್ಷೇಪಣಾ ಪತ್ರ ಕೊಟ್ಟಿತ್ತು. ನಂತರ ಅದು ಪರಿಸರ ಸೂಕ್ಷ್ಮ ವಲಯ ಎಂದು ಇಲಾಖೆಗೆ ಪತ್ರ ಬರೆದಿತ್ತು. ಹೀಗಾಗಿ ನಾವು ಅಲ್ಲಿ ಗಣಿಗಾರಿಕೆ ನಿಲ್ಲಿಸಿದ್ದೆವು. ಆದರೆ ಗುತ್ತಿಗೆದಾರರು ಹೈಕೋರ್ಟ್‌ ಮೊರೆ ಹೋಗಿ ಅನುಮತಿ ಪಡೆದಿದ್ದಾರೆ. ನಾವು ಗಣಿಗಾರಿಕೆ ನಿಲ್ಲಿಸಲು ಮುಂದಾದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ’ ಎಂದು ಶಿವಮೊಗ್ಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಎನ್.ಎಂ. ವಿಂಧ್ಯಾ ಹೇಳುತ್ತಾರೆ. ಕುಂಬತ್ತಿಯಲ್ಲಿ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸುತ್ತಿರುವುದಕ್ಕೆ ಸ್ಥಳೀಯರ ವಿರೋಧದ ಬಗ್ಗೆಯೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಸ್ಫೋಟಕ ತಡೆಯಲು ಸಕ್ಷಮ ಪ್ರಾಧಿಕಾರ ನಾವು (ಗಣಿ ಮತ್ತು ಭೂವಿಜ್ಞಾನ ಇಲಾಖೆ) ಅಲ್ಲ. ಬದಲಿಗೆ ಡಿಜಿಎಂಸಿ (ಡೈರೆಕ್ಟರ್ ಜನರಲ್ ಮೈನ್ಸ್ ಸೇಫ್ಟಿ) ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ.

ಮತದಾನ ಬಹಿಷ್ಕಾರ; ತಹಶೀಲ್ದಾರ್ ಮನವೊಲಿಕೆ

ಇಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ಅರಣ್ಯ ವನ್ಯಜೀವಿ ಜೀವವೈವಿಧ್ಯ ಕಾಯ್ದೆಗಳ ಸ್ಪಷ್ಟ ಉಲ್ಲಂಘನೆ. ಕೂಡಲೇ ಗಣಿಗಾರಿಕೆ ನಿಲ್ಲಿಸಿ ಎಂದು ಒತ್ತಾಯಿಸಿ ಇತ್ತೀಚೆಗೆ ಕುಂಬತ್ತಿ ಗ್ರಾಮಸ್ಥರು ವಿಧಾನಸಭೆ ಚುನಾವಣೆ ಮತದಾನ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಗ್ರಾಮಸ್ಥರ ಮನವೊಲಿಸಿದ್ದರು. ‘ಕುಂಬತ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ಜೀವವೈವಿಧ್ಯ ಸಮಿತಿಯಲ್ಲಿ ನಿರ್ಣಯಿಸಿದ್ದೇವೆ. ಜಿಲ್ಲಾಡಳಿತಕ್ಕೂ ನಾಲ್ಕು ಬಾರಿ ಮನವಿ ಮಾಡಿದ್ದೇವೆ. ಆದರೂ ಏನೂ ಪ್ರಯೋಜನ  ಆಗಿಲ್ಲ. ಅಂತೆಯೇ ಊರಿನವರು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರು’ ಎಂದು ಕುಂಬತ್ತಿ ಗ್ರಾಮ ಭೂಮಿ ಸಂರಕ್ಷಣಾ ಸಮಿತಿಯ ಮುಖ್ಯಸ್ಥೆಯೂ ಆದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಕೃಷ್ಣಮೂರ್ತಿ ಹೇಳುತ್ತಾರೆ.

ಕುಂಬತ್ತಿಯಲ್ಲಿ ಗಣಿಗಾರಿಕೆಯಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಪ್ರಾಣಿಗಳು ತೋಟಗಳಿಗೆ ನುಗ್ಗುತ್ತಿವೆ. ಬಾವಿ ಕೊಳವೆಬಾವಿಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗೆ ಪರದಾಡುವಂತಾಗಿದೆ.
–ರುಕ್ಮಿಣಿ ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಗಣಿಯಲ್ಲಿ ನಡೆಸುವ ಸ್ಫೋಟದಿಂದ ಶರಾವತಿ ಅಣೆಕಟ್ಟೆಗೆ ಸುತ್ತಲಿನ ಹಳ್ಳಿಗಳಿಗೆ ಏನೆಲ್ಲ ದುಷ್ಪರಿಣಾಮಗಳಾಗಲಿವೆ ಎಂಬ ಬಗ್ಗೆ ಸರ್ಕಾರ ತುರ್ತಾಗಿ ಪರಿಶೀಲಿಸಬೇಕು.
–ಪ್ರೊ.ಬಿ.ಎಂ. ಕುಮಾರಸ್ವಾಮಿ ಪರಿಸರವಾದಿ
ಕುಂಬತ್ತಿಯಲ್ಲಿ ಗಣಿಗಾರಿಕೆ ಆರಂಭಕ್ಕೆ ಮುನ್ನ ವಿರೋಧ ಇರಲಿಲ್ಲ. ಈಗ ಶುರುವಾಗಿದೆ. ಗಣಿಗಾರಿಕೆ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದೇವೆ.
–ಡಾ.ಆರ್.ಸೆಲ್ವಮಣಿ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.