ADVERTISEMENT

ಬಿಎಸ್‌ವೈ ಹೊಂದಾಣಿಕೆ ರಾಜಕೀಯದಿಂದಾಗಿ ಬಿಜೆಪಿಗೆ ಹೀನಾಯ ಸ್ಥಿತಿ: ಈಶ್ವರಪ್ಪ

ನನ್ನ ಪ್ರಶ್ನೆಗೆ ಬಿಎಸ್‌ವೈ ಉತ್ತರ ಕೊಡಲೇಬೇಕು, ಪುತ್ರರಿಗಾಗಿ ಎಂತಹ ಕೆಲಸಕ್ಕೂ ಕೈಹಾಕುತ್ತಾರೆ; ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:42 IST
Last Updated 17 ಏಪ್ರಿಲ್ 2024, 15:42 IST
<div class="paragraphs"><p>ಕೆ.ಎಸ್. ಈಶ್ವರಪ್ಪ</p></div>

ಕೆ.ಎಸ್. ಈಶ್ವರಪ್ಪ

   

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರತಿ ಬಾರಿ ಚುನಾವಣೆಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಇಂತಹ ಒಪ್ಪಂದ ಜಾತಿ ರಾಜಕೀಯ, ಹಿಂದುತ್ವವಾದಿಗಳನ್ನು ತುಳಿಯುವುದು ಮೊದಲಾದ ಕೆಲಸಗಳಿಂದ ಪಕ್ಷವು 108 ಸ್ಥಾನಗಳಿಂದ 68 ಸ್ಥಾನ ಬರಲು ಕಾರಣವಾಗಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

‘ನನ್ನ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದು ಸಾಧ್ಯವಿಲ್ಲ, ಅವರು ಪ್ರತಿಕ್ರಿಯೆ ಕೊಡಲೇಬೇಕು. ‘ಹೊಂದಾಣಿಕೆ ಮತ್ತು ಜಾತಿ ರಾಜಕೀಯ ಮಾಡಿಲ್ಲ. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಲಿ ನೋಡೋಣ’ ಎಂದು ಸವಾಲು ಎಸೆದ ಅವರು ತಮ್ಮ ಪುತ್ರರಿಗಾಗಿ ಎಂತಹ ಕೆಲಸಕ್ಕೂ ಕೈಹಾಕುತ್ತಾರೆ. ಪಕ್ಷಕ್ಕೆ ಇಂತಹ ಹೀನ ಸ್ಥಿತಿ ಬರಲು ಬಿಎಸ್‍ವೈ ಕಾರಣ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಸಾದರ ಲಿಂಗಾಯಿತ ಅಭ್ಯರ್ಥಿ ನಾಗರಾಜಗೌಡ ಮತ್ತು ಹಿಂದುಳಿದ ವರ್ಗದ ಗೋಣಿ ಮಾಲತೇಶ್‌ ಇಬ್ಬರನ್ನೂ ಸೋಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಜಾತಿ ಕಾರಣಕ್ಕೆ ಭದ್ರಾವತಿಯ ಶಾಸಕ ಸಂಗಮೇಶ್ ಜೊತೆ ಹೊಂದಾಣಿಕೆ ಮಾಡಿಕೊಂಡು ತಮಗೆ ಮತ ಹಾಕಿಸಿಕೊಳ್ಳುತ್ತಿದ್ದು, ಗುಟ್ಟಾಗಿಯೇನೂ ಉಳಿದಿಲ್ಲ. ಈಗ  ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ ಹಾಕಿಸಿಕೊಳ್ಳುವ ಮೂಲಕ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದು, ತಮ್ಮ ಪುತ್ರನನ್ನು ಹೇಗಾದರೂ ಗೆಲ್ಲಿಸಬೇಕು ಎಂದು ಒದ್ದಾಡುತ್ತಿದ್ದಾರೆ. ಆದರೆ ಅದು ಈ ಬಾರಿ ಸಫಲವಾಗುವುದಿಲ್ಲ’ ಎಂದು ಈಶ್ವರಪ್ಪ ಹೇಳಿದರು.

‘ನಾನು ಸ್ಪರ್ಧೆ ಘೋಷಿಸಿದ ಬಳಿಕ ಬಿಜೆಪಿಯ ಸುಮಾರು ಶೇ 70 ರಷ್ಟು ಕಾರ್ಯಕರ್ತರು ನನ್ನ ಜೊತೆಗೆ ಬಂದಿರುವುದನ್ನು ಕಂಡು ಗಾಬರಿಯಿಂದ ಅಂತಹ ಕಾರ್ಯಕರ್ತರ ಮನೆಗೆ ಹೋಗಿ ಆಶ್ವಾಸನೆ ನೀಡುತ್ತಿದ್ದಾರೆ. ಈಗ ಕಾರ್ಯಕರ್ತರ ನೆನಪಾಗುತ್ತಿದೆ. ಅಂತೂ ಕಾರ್ಯಕರ್ತರಿಗೆ ಬೆಲೆ ಬಂದಂತಾಗಿದೆ. ಕಳೆದ 15 ವರ್ಷಗಳಲ್ಲಿ ರಾಘವೇಂದ್ರ ಯಾವ ಕಾರ್ಯಕರ್ತರನ್ನು ಕೂಡಾ ಮಾತನಾಡಿಸುತ್ತಿರಲಿಲ್ಲ. ತಮ್ಮ ಹಿಂಬಾಲಕರನ್ನು ಮಾತ್ರ ಇಟ್ಟುಕೊಳ್ಳುತ್ತಿದ್ದರು’ ಎಂದು ಟೀಕಿಸಿದರು.

ವಿಜಯೇಂದ್ರನಿಗೆ ಸಂಸ್ಕೃತಿ ಗೊತ್ತಿಲ್ಲ: 

‘ಬಿಎಸ್‌ವೈ ಪುತ್ರ ವಿಜಯೇಂದ್ರ ಸೊಕ್ಕಿನ ಮಾತನಾಡಿದ್ದಾರೆ. ಯಾರ್ರೀ ವಿಜಯೇಂದ್ರ? ಆತ ಪಕ್ಷಕ್ಕಾಗಿ ಏನು ಕೆಲಸ ಮಾಡಿದ್ದಾನೆ. ಅವರಪ್ಪ, ನಾನು ಹಾಗೂ ನನ್ನಂತವರು ಬೆವರು ಸುರಿಸಿದ್ದರಿಂದ ಮಾತ್ರ ಅಧಿಕಾರ ಸಿಕ್ಕಿದೆ. ಆತ ಯಾವ ಹೋರಾಟದಲ್ಲಿ ಭಾಗಿಯಾಗಿದ್ದಾನೆ. ವಿಜಯೇಂದ್ರನಿಗೆ ಹಿರಿಯರು, ಸಂಸ್ಕೃತಿ ಎಂದರೆ ಏನೆಂಬುದೇ ಗೊತ್ತಿಲ್ಲ’ ಎಂದು ಈಶ್ವರಪ್ಪ ಹರಿಹಾಯ್ದರು.

ಸುವರ್ಣ ಶಂಕರ್‌, ಏಳುಮಲೈ ಬಾಬು, ವಿಶ್ವಾಸ್‌, ಶಂಕರ್‌ಗನ್ನಿ, ಮಹಾಲಿಂಗಶಾಸ್ತ್ರಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.