ಸಾಗರ: ಯುವಕನೊಬ್ಬನ ಕಣ್ಣಿನಲ್ಲಿ ಕಂಡ 3 ಸೆಂ.ಮೀ. ಉದ್ದದ ಜೀವಂತ ಹುಳವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ತಜ್ಞ ಡಾ. ಪ್ರಮೋದ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ.
ತಾಲ್ಲೂಕಿನ ಮಂಡಗಳಲೆ ಗ್ರಾಮದ ಯುವಕರೊಬ್ಬರಿಗೆ ಕಣ್ಣಿನಲ್ಲಿ ಪದೆ ಪದೆ ಉರಿ ಕಾಣಿಸಿಕೊಳ್ಳುತ್ತಿದ್ದು, ನೀರು ಸುರಿಯುತ್ತಿತ್ತು. ಅಲ್ಲದೇ ಕಣ್ಣು ವಿಪರೀತ ಕೆಂಪಾಗುತ್ತಿತ್ತು. ಈ ಕಾರಣ ಯುವಕ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದಾರೆ.
ಅಲ್ಲಿನ ವೈದ್ಯ ಡಾ.ಪ್ರಮೋದ್ ಅವರು ಮೈಕ್ರೋಸ್ಕೋಪ್ ಮೂಲಕ ಪರಿಶೀಲನೆ ನಡೆಸಿದಾಗ ಯುವಕನ ಕಣ್ಣಿನಲ್ಲಿ 3 ಸೆ.ಮೀ. ಉದ್ದದ ಲೋವಲೋವ ಎಂಬ ಸೂಕ್ಷ್ಮ ಹುಳು ಜೀವಂತ ಇರುವುದು ಪತ್ತೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆ ಹುಳುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪ್ರಮೋದ್, ‘ಇದೊಂದು ಅಪರೂಪದ ಪ್ರಕರಣವಾಗಿದೆ. ಲೋವಲೋವ ಎಂಬ ಹುಳು ದಕ್ಷಿಣ ಆಫ್ರಿಕಾದಂತಹ ದೇಶದಲ್ಲಿ ಪತ್ತೆಯಾಗಿದೆ. ಮಂಡಗಳಲೆ ಗ್ರಾಮದ ಈ ಯುವಕನ ಕಣ್ಣಿನಲ್ಲಿ ಈ ಹುಳು ಪತ್ತೆಯಾಗಿರುವುದು ಆಶ್ಚರ್ಯದ ಸಂಗತಿ’ ಎಂದರು.
‘ಲೋವಲೋವ ಹುಳು ಕಣ್ಣಿನೊಳಗೆ ಇದ್ದರೆ ಅದು ಪೂರ್ತಿಯಾಗಿ ಕಣ್ಣನ್ನು ಆವರಿಸಿಕೊಂಡು ಕುರುಡುತನ ಉಂಟಾಗುವ ಅಪಾಯವಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಕಣ್ಣಿನೊಳಗಿದ್ದ ಜಂತುವನ್ನು ತೆಗೆದು ಶಿವಮೊಗ್ಗದ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಹೆಚ್ಚಿನ ಮಾಹಿತಿ ಬರಬೇಕಿದೆ’ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಗೆ ಡಾ.ಸುಭೋದ್, ಡಾ.ಯಶವಂತ್, ಸಿಬ್ಬಂದಿ ಜುಬೇದಾ ಅಲಿ, ವಸಂತ ಸಹಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.