ಭದ್ರಾವತಿ: ಸರ್ಕಾರದ ಸೌಲಭ್ಯ ಪಡೆಯಲು ತಾಲ್ಲೂಕಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೆಸರಲ್ಲಿ ನಕಲಿ ಸದಸ್ಯತ್ವ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತಾಲ್ಲೂಕಿನಾದ್ಯಂತ ಅಂದಾಜು 28,000ದಿಂದ 30,000 ಕಟ್ಟಡ ಮತ್ತು ಇತರೆ ನಿರ್ಮಾಣ ವಿಭಾಗದ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಸದಸ್ಯತ್ವ ಹೊಂದಿದ್ದಾರೆ. ಆದರೆ, ನೈಜ ಕಾರ್ಮಿಕರ ಸಂಖ್ಯೆ ಅಂದಾಜು 8,000ದಿಂದ 10,000 ಎನ್ನಲಾಗಿದೆ.
ನಕಲಿ ಸದಸ್ಯತ್ವ ಹೆಚ್ಚುವಲ್ಲಿ ದಲ್ಲಾಳಿಗಳು ಶಾಮೀಲಾಗಿದ್ದಾರೆ. ಕಾರ್ಮಿಕ ಸಂಘಟನೆಯ ಮುಖಂಡರು ಎಂದು ಹೇಳಿಕೊಳ್ಳುವವರೇ ಕೆಲವರು ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಣ ಕೊಟ್ಟರೆ ಅವರೇ ಎಂಜಿನಿಯರ್, ಮೇಸ್ತ್ರಿಗಳ ಬಳಿ ಸಹಿ ಪಡೆದು ನಕಲಿ ದಾಖಲೆ ಸೃಷ್ಟಿಸಿ ಸದಸ್ಯತ್ವ ಮಾಡಿಸಿಕೊಡುತ್ತಾರೆ ಎಂದು ಕಟ್ಟಡ ಕಾರ್ಮಿಕರ ಸಂಘದ ಸದಸ್ಯ ಮೋಹನ್ ಹೇಳುತ್ತಾರೆ.
ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಕೊಡಲಾಗುತ್ತಿದೆ. ಅದನ್ನು ಪಡೆಯಲು ದಲ್ಲಾಳಿಗಳಿಗೆ ₹ 1,000 ಕೊಡಬೇಕಿದೆ ಎನ್ನುತ್ತಾರೆ.
ದೇಶದಾದ್ಯಂತ ಕೇವಲ ಕರ್ನಾಟಕದಲ್ಲಿ ನಕಲಿ ಕಾರ್ಮಿಕರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರತಿ ವರ್ಷ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನೂ ಶೇ 90ರಷ್ಟು ಕಡಿತಗೊಳಿಸಿದೆ. ಕಾರ್ಮಿಕರಿಗೆ ಸಿಗುತ್ತಿದ್ದ ಇತರೆ ಹಲವು ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ ಎಂದು ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳುತ್ತಾರೆ.
‘ಆನ್‌ಲೈನ್ ಮೂಲಕ ಸದಸ್ಯತ್ವ ಪಡೆಯುವ ವ್ಯವಸ್ಥೆ ಸ್ಥಗಿತಗೊಳ್ಳಬೇಕು. ಇದರಿಂದ ನೈಜ ಮತ್ತು ನಕಲಿ ಸದಸ್ಯರಿಗೆ ವ್ಯತ್ಯಾಸ ತಿಳಿಯದಂತಾಗಿದೆ. ಸದಸ್ಯತ್ವ ನೀಡುವ ಮೊದಲು ಅರ್ಜಿ ಸಲ್ಲಿಸಿದವರ ಮನೆಗಳ ಅಕ್ಕಪಕ್ಕವರನ್ನು ವಿಚಾರಿಸಿ, ಪರಿಶೀಲನೆ ನಡೆಸಬೇಕು. ಆಗ ಮಮಾತ್ರ ನಿಯಂತ್ರಣ ಸಾಧ್ಯವಾಗಲಿದೆ. ಈ ಕ್ರಮವನ್ನು ಇತ್ತೀಚೆಗೆ ಅನುಸರಿಸುತ್ತಿರುವುದಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈಗಾಗಲೇ ಅನೇಕ ನಕಲಿ ಕಾರ್ಮಿಕರು ಸದಸ್ಯತ್ವ ಪಡೆದಾಗಿದೆ’ ಎಂದು ಸಂಘದ ಸದಸ್ಯ ಪ್ರದೀಪ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಕಲಿ ಕಟ್ಟಡ ಕಾರ್ಮಿಕರ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಸದಸ್ಯತ್ವ ಪಡೆಯಲು ಇರುವ ನಿಯಮ ಬಿಗಿಗೊಳಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕಾರ್ಮಿಕರು ಮೇಸ್ತ್ರಿಯ ಬಳಿ ಕಡ್ಡಾಯವಾಗಿ 90 ದಿನಗಳ ಕಾಲ ಕೆಲಸ ಮಾಡಿದಂತಹ ಪತ್ರದ ಜೊತೆಗೆ ಪತ್ರದಲ್ಲಿ ಕಟ್ಟಡ ಮಾಲೀಕ ಎಂಜಿನಿಯರ್ ಮತ್ತು ಮೇಸ್ತ್ರಿಯ ಸಹಿ ಇರತಕ್ಕದ್ದು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಮಿಕನ ಮನೆಯ ಅಕ್ಕಪಕ್ಕದಲ್ಲಿ ವಿಚಾರಿಸಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಮಾಲೀಕರ ಬಳಿ ಪರಿಶೀಲಿಸಿದ ನಂತರವಷ್ಟೇ ಸದಸ್ಯತ್ವ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಹೊಸದಾಗಿ ಮನೆ ಕಟ್ಟುವವರು ಗುತ್ತಿಗೆದಾರರು ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಲ್ಲಿಸಿರುವ ಸೆಸ್ (ತೆರಿಗೆ) ಮೊತ್ತವೇ ಇದುವರೆಗೆ ₹6000ದಿಂದ ₹ 7000 ಕೋಟಿ ಸಂಗ್ರಹವಾಗಿದೆ. ಈ ಹಣದಿಂದ ಕಾರ್ಮಿಕರ ಮಕ್ಕಳಿಗೆ ಎಲ್.ಕೆ.ಜಿಯಿಂದ ಪಿಎಚ್.ಡಿವರೆಗೆ ವಾರ್ಷಿಕ ಕನಿಷ್ಠ ₹ 5000 ಶೈಕ್ಷಣಿಕ ಸಹಾಯಧನ ಉನ್ನತ ವಿದ್ಯಾಭ್ಯಾಸಕ್ಕೆ ಶುಲ್ಕ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಆರ್ಥಿಕ ನೆರವು ವೈದ್ಯಕೀಯ ಚಿಕಿತ್ಸೆ ಮಕ್ಕಳ ಮದುವೆಗೆಂದು ಧನಸಹಾಯ ಮಾಡಲಾಗುತ್ತಿದೆ. ಆದರೆ ಈಗ ಏಕಾಏಕಿ ಈ ಸೌಲಭ್ಯಗಳಲ್ಲಿ ಶೇ 80ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳಿಗೆ ಹಾಗೂ ಅವರ ಕುಟುಂಬದವರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಈ ಆದೇಶವನ್ನು ಹಿಂಪಡೆದು ಹಿಂದೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನೂ ಮುಂದುವರಿಸಬೇಕು ಎಂದು ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ವಿನೋದ್ ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.