ಸಾಗರ: ಇಲ್ಲಿನ ರೈತ ಸಂಘ (ಎಚ್.ಗಣಪತಿಯಪ್ಪ ಸ್ಥಾಪಿತ) ದ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮೆಸ್ಕಾಂ ಸಿಬ್ಬಂದಿ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಗುರುವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ‘ಗ್ರಾಮೀಣ ಪ್ರದೇಶದಲ್ಲಿ ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಸಣ್ಣ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ವಿದ್ಯುತ್ ಗ್ರಾಹಕರಿಗೆ ಯಾವುದೆ ಮಾಹಿತಿ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಮೆಸ್ಕಾಂ ಸಿಬ್ಬಂದಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈ ವರ್ಷ ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಆದಾಗ್ಯೂ ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಗಾಗಿ ಭೂಮಿಯನ್ನು ಕಳೆದುಕೊಂಡಿರುವ ಜನರಿಗೆ ಸಮರ್ಪಕ ಸೇವೆ ದೊರಕುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಮೆಸ್ಕಾಂ ಸಿಬ್ಬಂದಿ ಜನರೊಂದಿಗೆ ಸೌಜನ್ಯ ಮರೆತು ದುರ್ವರ್ತನೆ ತೋರುತ್ತಿದ್ದಾರೆ’ ಎಂದು ಅವರು ದೂರಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ. ಕೆಳದಿ, ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ ಮನೆಘಟ್ಟ, ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ಕುಮಾರಗೌಡ, ಗಣಪತಿ ತಾಳಗುಪ್ಪ, ಬದ್ರೇಶ್ ಬಾಳಗೋಡು, ಶಿವಕುಮಾರ್ ಮೈಲಾರಿಕೊಪ್ಪ, ದೇವರಾಜ ಬೆಳಂದೂರು, ಹೇಮಂತ್ ಹೆನಗೆರೆ, ಬಸವರಾಜ ಬಂಡಿ, ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.