ನರಸಿಂಹರಾಜಪುರ: ಹೊಸನಗರ ತಾಲ್ಲೂಕಿನ ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೇಯ (54) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಏಳು ಮಂದಿ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದತ್ತಾತ್ರೇಯ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆಯ ಬಳಿ ಶನಿವಾರ ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮೃತರ ಪತ್ನಿ ಅನಸೂಯ ನೀಡಿದ ದೂರಿನಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
‘ದತ್ತಾತ್ರೇಯ 1997–98ರಿಂದ ಹೊಸನಗರ ತಾಲ್ಲೂಕು ನಗರ ಹೋಬಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 2019ರ ಆಗಸ್ಟ್‌ನಲ್ಲಿ ಬಡ್ತಿ ಹೊಂದಿ ಹೊಸನಗರ ತಾಲ್ಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಮೇಲೆ 2003ರಲ್ಲಿ ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ದತ್ತಾತ್ರೇಯ ಅವರು ಹೊಸನಗರ ತಹಶೀಲ್ದಾರ್ ಅವರಿಗೆ ರಜೆ ಅರ್ಜಿ ಸಲ್ಲಿಸಿದ್ದರೂ, ಅವರು ಮಂಜೂರಾತಿ ನೀಡಿರಲಿಲ್ಲ. ವೇತನ ಪಾವತಿಯನ್ನೂ ಮಾಡಿರಲಿಲ್ಲ’ ಎಂದು ಮೃತರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
‘ನುಲಿಗೆರಿ ಗ್ರಾಮದ ನಾಗೇಂದ್ರ, ಮುರುಗೇಶ, ವಿಠಲ ಮತ್ತು ಆನಂದ ಕಾರ್ವೆ ಎಂಬುವರು ಪತಿಗೆ ದೂರವಾಣಿ ಕರೆ ಮಾಡಿ ‘ಹಣ ತೆಗೆದುಕೊಂಡು ಬನ್ನಿ, ಪ್ರಕರಣವನ್ನು ರಾಜಿ ಮಾಡೋಣ’ ಎಂದು ಕಿರುಕುಳ ನೀಡುತ್ತಿದ್ದರು. ತಹಶೀಲ್ದಾರ್ ಅವರನ್ನು ಭೇಟಿ ಮಾಡಲು ಹೋದರೆಮಾತನಾಡಿಸದೆ ತೊಂದರೆ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಪತಿ ಶನಿವಾರಬೆಳಗ್ಗೆ 6 ಗಂಟೆಗೆ ತೀರ್ಥಹಳ್ಳಿ ಶಾಸಕರನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿತೆರಳಿದ್ದರು. ಬೆಳಗ್ಗೆ 10ಗಂಟೆಗೆ ನನ್ನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಮಾಡಿ, ‘ನನಗೆ ಬೇಜಾರಾಗಿದೆ, ನಾನು ಬರುವುದಿಲ್ಲ. ಬೇಜಾರು ಮಾಡಿಕೊಳ್ಳಬೇಡ, ಮುಡುಬ ಸೇತುವೆ ಬಳಿ ಇದ್ದೇನೆ. ನೀವು ಇಲ್ಲಿಗೆ ಬನ್ನಿ’ ಎಂದು ಕರೆ ಸ್ಥಗಿತಗೊಳಿಸಿದ್ದರು. ನಾವು ಸ್ಥಳಕ್ಕೆ ಹೋದಾಗನದಿಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದತ್ತಾತ್ರೇಯ ಅವರ ಆತ್ಮಹತ್ಯೆಗೆ ಆನಂದ ಕಾರ್ವೆ, ನಾಗೇಂದ್ರ, ವಿಠಲ, ಮುರುಗೇಶ, ಶಶಿಕಲಾ, ವನಜಾಕ್ಷಿ ಹಾಗೂತಹಶೀಲ್ದಾರ್ ಶ್ರೀಧರ್ ಮೂರ್ತಿ ಕಾರಣ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.