ADVERTISEMENT

ಶಿವಮೊಗ್ಗದಲ್ಲಿ ಮೊದಲ ಎಫ್‌ಎಂ ರೇಡಿಯೊ ಕೇಂದ್ರ

ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿಗೆ ಕೇಂದ್ರ ಸರ್ಕಾರದ ಅನುಮತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 3:48 IST
Last Updated 15 ಮಾರ್ಚ್ 2022, 3:48 IST
ಶಿವಮೊಗ್ಗದ ಇಲ್ಲಿನ ನವುಲೆ ಕೃಷಿ ವಿಶ್ವವಿದ್ಯಾಲಯ ಬಳಿ ಇರುವ ರತ್ನಾಕರ ನಗರದಲ್ಲಿ ಆರಂಭಗೊಂಡಿರುವ ಎಫ್.ಎಂ.ರೇಡಿಯೊ ಕೇಂದ್ರದ ಸಿಬ್ಬಂದಿ ಕಾರ್ಯದಲ್ಲಿ ನಿರತರಾಗಿರುವುದು.
ಶಿವಮೊಗ್ಗದ ಇಲ್ಲಿನ ನವುಲೆ ಕೃಷಿ ವಿಶ್ವವಿದ್ಯಾಲಯ ಬಳಿ ಇರುವ ರತ್ನಾಕರ ನಗರದಲ್ಲಿ ಆರಂಭಗೊಂಡಿರುವ ಎಫ್.ಎಂ.ರೇಡಿಯೊ ಕೇಂದ್ರದ ಸಿಬ್ಬಂದಿ ಕಾರ್ಯದಲ್ಲಿ ನಿರತರಾಗಿರುವುದು.   

ಶಿವಮೊಗ್ಗ: ನವುಲೆ ಕೃಷಿ ವಿಶ್ವವಿದ್ಯಾಲಯ ಬಳಿ ಇರುವ ರತ್ನಾಕರ ನಗರದಲ್ಲಿ ಶಿವಮೊಗ್ಗದ ಮೊದಲ ಎಫ್.ಎಂ. ರೇಡಿಯೊ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದೆ. ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

ದಶಕದಿಂದ ಮಲೆನಾಡಿಗೊಂದು ಎಫ್.ಎಂ.ರೇಡಿಯೊ ಬೇಕು ಎಂಬ ಬೇಡಿಕೆ ಇತ್ತು. ಜನರ ಬೇಡಿಕೆ ಈಡೇರಿಸುವ ಸಲುವಾಗಿ ಶಿವಮೊಗ್ಗ ರೇಡಿಯೊ ಎಫ್.ಎಂ. 90.8 ಕೊಡುಗೆಯಾಗಿ ಸಿಕ್ಕಿದೆ.

ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೊ ಎಫ್.ಎಂ. 90.8 ಆರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೊಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಬೆಳಿಗ್ಗೆ 9ಕ್ಕೆ ಸಂಜೆ 6ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗುತ್ತಿದೆ.

ADVERTISEMENT

ಎರಡು ಹೈಟೆಕ್ ಸ್ಟುಡಿಯೊಗಳು, ಒಂದು ಕಂಟ್ರೋಲ್ ರೂಂ, ಡೆಸ್ಕ್ ಸ್ಥಾಪಿಸಲಾಗಿದೆ. ಹೊರಾಂಗಣದಲ್ಲಿ ಕಾರ್ಯಕ್ರಮ ರೆಕಾರ್ಡ್ ಮಾಡಲು ಹೈಟೆಕ್ ರೆಕಾರ್ಡಿಂಗ್ ಮೈಕ್‌ಗಳನ್ನು ಕೂಡ ಅಳವಡಿಸಲಾಗಿದೆ. ಕೆಲವು ಅನುಭವಿ ಮತ್ತು ಹಿರಿಯರು ರೇಡಿಯೊ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 13 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಅವರಿಗೆ ಕಾರ್ಯಕ್ರಮ ನಿರೂಪಣೆ, ಸ್ಕ್ರಿಪ್ಟ್, ತಾಂತ್ರಿಕ ಕೌಶಲ ಎಲ್ಲವನ್ನೂ ಕಲಿಸಲಾಗುತ್ತಿದೆ.

ವಿಭಿನ್ನ ಕಾರ್ಯಕ್ರಮಗಳು: ರೇಡಿಯೊ ಶಿವಮೊಗ್ಗದಲ್ಲಿ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ, ಪರಿಸರ, ಕಲೆ, ಸಂಸ್ಕೃತಿ, ಸಾಹಿತ್ಯ, ಸರ್ಕಾರಿ ಯೋಜನೆಗಳು, ರೈತರು, ಕಾರ್ಮಿಕರು, ಆಹಾರ, ಸಾವಯವ ಕೃಷಿ ಸೇರಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ರೇಡಿಯೊ ಶಿವಮೊಗ್ಗ ಸರ್ಕಾರದ ಘಟಕ. ಖಾಸಗಿ ಎಫ್.ಎಂ. ರೇಡಿಯೊಗಿಂತಲೂ ಭಿನ್ನ. ಇದು ಸಮುದಾಯ ರೇಡಿಯೊ. ಸೀಮಿತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತದೆ. ಸ್ಥಳೀಯರನ್ನೇ ಬಳಸಿಕೊಂಡು ಕಾರ್ಯಕ್ರಮ ರೂಪಿಸುವುದು ಇದರ ವಿಶೇಷ. 50 ಗಿಗಾ ಹರ್ಟ್ಸ್ ಸಾಮರ್ಥ್ಯದಲ್ಲಿ ಕೆಲಸ ಆರಂಭಿಸಿದೆ.

ಎಫ್.ಎಂ ಶಿವಮೊಗ್ಗ ಆ್ಯಪ್‌: ರೇಡಿಯೊ ಶಿವಮೊಗ್ಗ ಎಫ್.ಎಂ ಕೇಳುಗರ ಸಂಖ್ಯೆ ಹೆಚ್ಚಿಸಲು, ಜಗತ್ತಿನಾದ್ಯಂತ ಎಫ್.ಎಂ. ತಲುಪಲು ಸ್ವಂತ ಆ್ಯಪ್‌ ಸಿದ್ಧಪಡಿಸಲಾಗಿದೆ. ರೇಡಿಯೊ ಸಿಗ್ನಲ್ ತಲುಪದ ಕಡೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಕಾರ್ಯಕ್ರಮ ಕೇಳಬಹುದು.ಶಿಕ್ಷಣ, ಪರೀಕ್ಷೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ
ಮಾಡಲಾಗುತ್ತದೆ.

8 ವರ್ಷಗಳ ಪ್ರಯತ್ನದ ಫಲ

‘ಎನ್‌ಜಿಒಗೆ ರೇಡಿಯೊ ಆರಂಭಿಸಲು ಅನುಮತಿ ದೊರಕಿರುವುದುನಮ್ಮ 8 ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. ರಾಜ್ಯದಲ್ಲಿ 8ರಿಂದ10 ಸಮುದಾಯ ರೇಡಿಯೊಗಳು ಸಕ್ರಿಯವಾಗಿವೆ. ಆರಂಭದಲ್ಲಿ ₹ 40 ಲಕ್ಷ ಖರ್ಚಾಗಿದೆ. ಎನ್‌ಜಿಒ ಕಾರ್ಯ ಮೆಚ್ಚಿ ರೇಡಿಯೊ ಆರಂಭಿಸುವ ಅನುಮತಿ ನೀಡಲಾಗಿದೆ’ ಎಂದು ಕೇಂದ್ರದ ನಿರ್ದೇಶಕ ಜನಾರ್ದನ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.