ADVERTISEMENT

ಆನವಟ್ಟಿ | ಬಿಎಸ್‌ಸಿ ಪದವಿ: ದಶಕ ಕಳೆದರೂ ಒಬ್ಬರ ಪ್ರವೇಶವೂ ಇಲ್ಲ..!

ಆನವಟ್ಟಿ ಪ್ರಥಮದರ್ಜೆ ಕಾಲೇಜಿನಲ್ಲಿದೆ ಎಲ್ಲ ಸೌಲಭ್ಯ.. ವಿದ್ಯಾರ್ಥಿಗಳೇ ಬರುತ್ತಿಲ್ಲ...

ರವಿ ಆರ್.ತಿಮ್ಮಾಪುರ
Published 23 ಜೂನ್ 2024, 5:53 IST
Last Updated 23 ಜೂನ್ 2024, 5:53 IST
ಆನವಟ್ಟಿಯ ಸಮನವಳ್ಳಿ ಗಡಿ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಆನವಟ್ಟಿಯ ಸಮನವಳ್ಳಿ ಗಡಿ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಆನವಟ್ಟಿ: ಇಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಜ್ಞಾನ (ಸೈನ್ಸ್) ಪದವಿ ವಿಭಾಗ ಆರಂಭಗೊಂಡು 10 ವರ್ಷಗಳಾದರೂ ಉಪನ್ಯಾಸಕರ ನೇಮಕವಾಗದ ಕಾರಣ ಇದುವರೆಗೂ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ.

ಕಾಲೇಜು ಆರಂಭಕ್ಕೆ ಪರವಾನಗಿ ದೊರೆತು ಇಷ್ಟು ವರ್ಷಗಳಾದರೂ ಪಾಠ– ಪ್ರವಚನ ಆಙರಂಭವಾಗದ್ದಕ್ಕೆ ಪಾಲಕರು ಬೇಸರ ವ್ಯಕ್ತಪಡಿಸಿದ್ದು, ದೂರದ ಊರುಗಳಲ್ಲಿರುವ ಕಾಲೇಜುಗಳಲ್ಲಿ ಲಕ್ಷಗಟ್ಟಲೇ ವ್ಯಯಿಸಿ ಮಕ್ಕಳನ್ನು ಓದಿಸಬೇಕಾಗಿದೆ ಎಂಬುದು ಅವರ ಅಳಲು.

ಇಲ್ಲಿನ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗವಿದ್ದು, ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತವಿಜ್ಞಾನ (ಪಿಸಿಎಂ) ವಿಷಯಗಳ ಆಯ್ಕೆ ಲಭ್ಯವಿದೆ. ಪ್ರಥಮ ವರ್ಷದ ತರಗತಿ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳ ದಾಖಲಾತಿ ನಂತರ ಉಪನ್ಯಾಸಕರನ್ನು ನೇಮಿಸಲಾಗುವುದು ಎಂಬ ಧೋರಣೆ ಕಾಲೇಜಿನದ್ದಾಗಿದ್ದರೆ, ಉಪನ್ಯಾಸಕರು ನೇಮಕಗೊಳ್ಳುವವರೆಗೆ ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ‘ಇದು ಒಂದು ರೀತಿಯಲ್ಲಿ ಹುಚ್ಚು ಬಿಡೋವರೆಗೆ ಮದುವೆ ಆಗಲ್ಲ. ಮದುವೆ ಆಗೋವರೆಗೆ ಹುಚ್ಚು ಬಿಡಲ್ಲ’ ಎನ್ನುವಂತಿದೆ.

ADVERTISEMENT

2013ರಲ್ಲಿ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಿದ್ದು, 2014ರಲ್ಲಿ ತರಗತಿ ಆರಂಭಿಸಲು ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ಯುಜಿಸಿ ಮಾನ್ಯತೆ ಕೂಡ ಸಿಕ್ಕಿದೆ. ಆರಂಭದಲ್ಲಿ ಪ್ರಯೋಗಾಲಯ ಇರಲಿಲ್ಲ. ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳಲ್ಲಿ ಪ್ರಯೋಗಾಲಯ ಇರಲೇಬೇಕು ಎಂಬ ಸರ್ಕಾರದ ಆದೇಶಾನುಸಾರ 2022ರಲ್ಲಿ ₹ 4 ಲಕ್ಷ ಅನುದಾನದಲ್ಲಿ ವಿಜ್ಞಾನದ ಪ್ರಯೋಗಾಲಯ ಆರಂಭಿಸಲಾಗಿದ್ದು, ಅಗತ್ಯ ಉಪಕರಣಗಳನ್ನು ಖರೀದಿಸಲಾಗಿದೆ.

ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಸೌಲಭ್ಯ:

ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಭರಿಸುವ ಶುಲ್ಕವನ್ನು ಅವರ ಬ್ಯಾಂಕ್‍ ಖಾತೆಗೆ ವರ್ಷಾಂತ್ಯದಲ್ಲಿ ಮರಳಿಸುವ ಸೌಲಭ್ಯವನ್ನು ಉನ್ನತ ಶಿಕ್ಷಣ ಇಲಾಖೆ ನೀಡಿದೆ. ಕಾಲೇಜಿಗೆ ಜಿಂದಾಲ್‍ ಸಂಸ್ಥೆ ಸಹಕಾರವಿದ್ದು, ಪ್ರತಿಭಾವಂತ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ₹ 25,000, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ₹ 12,000 ವಿದ್ಯಾರ್ಥಿ ವೇತನ ಸೌಲಭ್ಯವಿದೆ. ವಿವಿಧ ಸಂಸ್ಥೆಗಳಿಂದಲೂ ವಿದ್ಯಾರ್ಥಿ ವೇತನ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಸಕಲ ಸೌಲಭ್ಯಗಳು: ವಿಶಾಲ ಗ್ರಂಥಾಲಯ, ಕ್ರೀಡಾಂಗಣ, ಸುಸಜ್ಜಿತವಾದ ವಿಜ್ಞಾನ ವಿಭಾಗದ ಕೊಠಡಿಗಳಿಗೆ ಸ್ಮಾರ್ಟ್ ಪ್ರೊಜೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಕ್ಯಾಂಟೀನ್ ವ್ಯವಸ್ಥೆ ಇದೆ. ಮೂಲ ಸೌಕರ್ಯಗಳ ಕಾರಣ ಯುಜಿಸಿಯ ನ್ಯಾಕ್‍ ಮಾನ್ಯತೆಯನ್ನೂ ಈ ಕಾಲೇಜು ಪಡೆದುಕೊಂಡಿದೆ. ಎಲ್ಲವೂ ಇದೆ ಆದರೆ ಈವರೆಗೆ ಒಬ್ಬ ವಿದ್ಯಾರ್ಥಿ ಈ ಕಾಲೇಜಿನ ವಿಜ್ಞಾನ ವಿಭಾಗದಿಂದ ಪದವಿ ಪಡೆಯಲಾಗಿಲ್ಲ.

ಸಿಇಟಿ, ನೀಟ್‌ ಬರೆದವರಿಗೂ ಪ್ರವೇಶಾವಕಾಶ:

ವಿಜ್ಞಾನ ವಿಭಾಗ ಹಾಗೂ ಕಲಾ ವಿಭಾಗಕ್ಕೆ ಜುಲೈ ಅಂತ್ಯದವರೆಗೂ ಪ್ರವೇಶ ಪಡೆಯಲು ಅವಕಾಶವಿದೆ. ದಂಡ ಶುಲ್ಕದೊಂದಿಗೆ ಆಗಸ್ಟ್‌ವರೆಗೂ ಪ್ರವೇಶ ಪಡೆಯಬಹುದಾಗಿದೆ. ಮೆಡಿಕಲ್‍, ಎಂಜಿನಿಯರಿಂಗ್‌ ಸೇರಿ ವಿವಿಧ ಕೋರ್ಸ್‍ಗಳಿಗೆ ನೀಟ್‌, ಸಿಇಟಿ ಬರೆದ ವಿದ್ಯಾರ್ಥಿಗಳೂ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದುಕೊಳ್ಳಬಹುದು. ಮುಂದೆ ಐದ್ಯಕೀಯ, ಎಂಜಿನಿಯರಿಂಗ್‌ ಸೀಟ್‌ ಸಿಕ್ಕಲ್ಲಿ ಕಳುಹಿಸಿಕೊಡಲಾಗುವುದು ಎಂದು ಪ್ರಾಂಶುಪಾಲ ಎಂ.ಬಿ. ಗಣಪತಿ ಹೇಳುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರು ಇದ್ದಾರೆ. ವಿದ್ಯಾರ್ಥಿಗಳು ಪ್ರವೇಶ ಪಡೆಯದ ಕಾರಣ ಬೇರೆ ಕಾಲೇಜಿಗೆ ನಿಯೋಜನೆಗೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರೆ ಇದೇ ಕಾಲೇಜಿನಲ್ಲಿ ಕಾಯಂ ಇರುತ್ತಾರೆ. ತರಗತಿ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳು ಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ತಕ್ಷಣವೇ ಉಪನ್ಯಾಸಕರನ್ನು ನೀಡುತ್ತದೆ ಎಂದು ಅವರು ವಿವರಿಸುತ್ತಾರೆ.

‘ನುರಿತ ಉಪನ್ಯಾಸಕರೇ ಇಲ್ಲ’ ಎಂಬ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಹಾನಗಲ್, ಶಿರಸಿ, ಸೊರಬ ಮತ್ತಿತರ ಕಡೆ ಬಿಎಸ್‌ಸಿ ಪದವಿ ಕಲಿಕೆಗೆ ಹೋಗುತ್ತಿದ್ದಾರೆ. ಒಂದೊಮ್ಮೆ ಈ ಕಾಲೇಜಿಗೆಂದೇ ಉಪನ್ಯಾಸಕರು ಇದ್ದಲ್ಲಿ ಆ ಬಗ್ಗೆ ಪ್ರಚಾರ ನೀಡಿ, ಪಿಯುಸಿ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದಲ್ಲಿ ಇಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಂದಾಗಬಹುದಾಗಿದೆ ಎಂಬುದೂ ಪಾಲಕರ ಕೋರಿಕೆಯಾಗಿದೆ.

ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ವಿಶ್ವವಿದ್ಯಾಲಯದವರು ಪ್ರವೇಶಾತಿ ಬಗೆಗಿನ ಸಮಸ್ಯೆ ಪರಿಹರಿಸಿ ಇರುವ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವಂತೆ ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದು ಗ್ರಾಮದ ಶಿಕ್ಷಣ ಪ್ರೇಮಿಗಳು ಮನವಿ ಮಾಡಿದ್ದಾರೆ.

ಪಾಲಕರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಕಾಲೇಜಿಗೆ ದಾಖಲಿಸಬಹುದು. ಅವರು ಉತ್ತಮ ಅಂಕಗಳಿಸುವಂತೆ ಭೋಧನೆ ಮಾಡಿಸುವ ಜವಾಬ್ದಾರಿ ನಮ್ಮದು. ಸಚಿವ ಎಸ್. ಮಧುಬಂಗಾರಪ್ಪ ಅವರು ಕಾಲೇಜಿನ ಅಧ್ಯಕ್ಷರಾಗಿದ್ದು ವಿಜ್ಞಾನ ವಿಭಾಗಕ್ಕೆ ಅಗತ್ಯ ಸವಲತ್ತು ಒದಗಿಸಲು ಸಿದ್ಧರಿದ್ದಾರೆ.
ಮಧುಕೇಶ್ವರ ಪಾಟೀಲ್‌, ಕಾಲೇಜು ಅಭಿವೃಧಿ ಸಮಿತಿ ಕಾರ್ಯಾಧ್ಯಕ್ಷ
ಆನವಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.