ಸಾಗರ: ಬಾರಂಗಿ ಹೋಬಳಿಯ ವಿವಿಧ ಗ್ರಾಮಗಳ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ, ಮನೆ ಕಟ್ಟಿಕೊಂಡು ವಾಸವಾಗಿರುವ 60ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಕೂಡಲೇ ಸಾಗುವಳಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದ್ದು, ಆತಂಕಕ್ಕೆ ಕಾರಣವಾಗಿದೆ.
‘ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಅದು ಇತ್ಯರ್ಥವಾಗುವ ಮುನ್ನ ಯಾವುದೇ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ’ ಎಂಬ ಅರಣ್ಯ ಸಚಿವರ ಹೇಳಿಕೆಗೆ ವ್ಯತಿರಿಕ್ತವಾಗಿ ಅರಣ್ಯ ಇಲಾಖೆ ನಡೆದುಕೊಳ್ಳುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
‘ಅರಣ್ಯ ಪ್ರದೇಶದಲ್ಲಿ ಮೂರು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸಚಿವರು ಈಚೆಗೆ ಸ್ಪಷ್ಟಪಡಿಸಿದ್ದರು. ಆದರೆ, ಅರಣ್ಯ ಇಲಾಖೆ ನೋಟಿಸ್ ನೀಡಿರುವವರ ಪಟ್ಟಿಯಲ್ಲಿ 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವವರೂ ಇದ್ದಾರೆ’ ಎಂದು ಚೆನ್ನಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗರಾಜ್ ತಿಳಿಸಿದರು.
‘ಈ ಹಿಂದೆ ಭಾನ್ಕುಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಅವರು, ದೀರ್ಘಕಾಲದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಾರಂಗಿ ಹೋಬಳಿಯ ಎಲ್ಲಾ ಕೃಷಿಕರಿಗೂ ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅರಣ್ಯ ಇಲಾಖೆ ನೋಟಿಸ್ ನೀಡಿರುವುದು ವಿರೋಧಾಭಾಸದಿಂದ ಕೂಡಿದೆ’ ಎಂದು ದೂರಿದರು.
‘ಭಾರಂಗಿ ಹೋಬಳಿಯಲ್ಲಿನ ಅರಣ್ಯವನ್ನು ವನ್ಯಜೀವಿ ಪ್ರದೇಶವೆಂದು ಘೋಷಿಸುವುದಕ್ಕೂ ಮುನ್ನ ಮನೆ ಕಟ್ಟಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ ಹಲವು ಕುಟುಂಬಗಳಿವೆ. ಅವರು ಬೆಳೆದಿರುವ ತೆಂಗು, ಅಡಿಕೆ ಮರಗಳು ಆಕಾಶದೆತ್ತರಕ್ಕೆ ಬೆಳೆದಿವೆ. ಇಂತಹ ಕುಟುಂಬಗಳಿಗೂ ಏಕಾಏಕಿ ಸಾಗುವಳಿ ತೆರವುಗೊಳಿಸುವಂತೆ ಹೇಳಿದರೆ ಅವರು ಎಲ್ಲಿಗೆ ಹೋಗಬೇಕು?’ ಎಂದು ವಕೀಲ, ಕೃಷಿಕ ಬಿ.ತ್ಯಾಗಮೂರ್ತಿ ಪ್ರಶ್ನಿಸಿದರು.
‘ಕೇಂದ್ರ ಸರ್ಕಾರವು ಅರಣ್ಯ ಸಂರಕ್ಷಣಾ ಕಾಯ್ದೆ– 1980ಕ್ಕೆ ತಿದ್ದುಪಡಿ ತಂದಿದ್ದು, 1996ನೇ ಸಾಲಿನ ಡಿಸೆಂಬರ್ 12ಕ್ಕಿಂತ ಮುಂಚಿತವಾಗಿ ಯಾವುದಾದರೂ ಅರಣ್ಯ ಭೂಮಿಯನ್ನು ಸರ್ಕಾರದ ಸಕ್ಷಮ ಪ್ರಾಧಿಕಾರ ಯಾರಿಗಾದರೂ ಅರಣ್ಯೇತರ ಉದ್ದೇಶಕ್ಕಾಗಿ ಮಂಜೂರು ಮಾಡಿದ್ದಲ್ಲಿ, ಆ ಭೂಮಿ ಅರಣ್ಯದ ಸ್ವರೂಪವನ್ನು ಕಳೆದುಕೊಂಡಿದ್ದಲ್ಲಿ, ಅರಣ್ಯದಲ್ಲಿ ಜನವಸತಿ ಪ್ರದೇಶವಿದ್ದಲ್ಲಿ ಅಂತಹ ಪ್ರದೇಶವನ್ನು ಅರಣ್ಯವೆಂದು ಹೇಳಲಾಗದು ಎಂದು ಹೇಳಿದೆ. ಈ ತಿದ್ದುಪಡಿಯನ್ನು ಪರಿಗಣಿಸದೆ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವುದು ಕಾನೂನುಬಾಹಿರ’ ಎಂದು ಅವರು ವಿವರಿಸಿದರು.
‘ಅತಿವೃಷ್ಟಿ, ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಜನಾಂದೋಲನ ರೂಪಿಸುವುದು ಅನಿವಾರ್ಯ’ ಎಂದರು.
ಅರಣ್ಯ ಇಲಾಖೆ ಸಾಗುವಳಿ ತೆರವುಗೊಳಿಸುವಂತೆ ನೋಟಿಸ್ ನೀಡಿರುವ ರೈತರಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರೂ ಇದ್ದಾರೆ. ಅವರಿಗೆ ಈಗ ಸಾಗುವಳಿ ಮಾಡುತ್ತಿರುವ ಭೂಮಿ ಬಿಟ್ಟರೆ ಬೇರೆ ಭೂಮಿ ಇಲ್ಲ.ಯೋಗರಾಜ್ ಅಧ್ಯಕ್ಷರು ಚೆನ್ನಗೊಂಡ ಗ್ರಾಮ ಪಂಚಾಯಿತಿ
ಇಲಾಖೆಯಿಂದ ನೀಡಿರುವ ನೋಟಿಸ್ ಸಂಬಂಧ ಸಾಗುವಳಿದಾರರಿಂದ ಉತ್ತರ ಬಂದ ನಂತರವಷ್ಟೇ ಮೇಲಧಿಕಾರಿಗಳು ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತಾರೆ.ರಾಘವೇಂದ್ರ ಆರ್‌ಎಫ್‌ಒ ಕಾರ್ಗಲ್ ವಲಯ
ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ– 1980ಕ್ಕೆ ತಿದ್ದುಪಡಿ ತಂದಿರುವುದನ್ನು ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣ ಇತ್ಯರ್ಥವ ಆಗುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೆಲವು ರಿಟ್ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಹೈಕೋರ್ಟ್ ಆದೇಶಿಸಿದೆ. ಇದನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಪಾಲಿಸಬೇಕಿದೆ.ಬಿ.ತ್ಯಾಗಮೂರ್ತಿ ವಕೀಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.