ADVERTISEMENT

ಮಾಜಿ ಸಚಿವ ಬಿ.ಸಿ.ಪಾಟೀಲ ಅಳಿಯ ಪ್ರತಾಪಕುಮಾರ್ ಆತ್ಮಹತ್ಯೆ

ಮಕ್ಕಳಿಲ್ಲದ ಕೊರಗು: ಕುಟುಂಬದವರ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:57 IST
Last Updated 8 ಜುಲೈ 2024, 16:57 IST
<div class="paragraphs"><p>ಪ್ರತಾಪಕುಮಾರ್</p></div>

ಪ್ರತಾಪಕುಮಾರ್

   

ಶಿವಮೊಗ್ಗ: ಮಾಜಿ ಸಚಿವ, ಬಿಜೆಪಿಯ ಬಿ.ಸಿ.ಪಾಟೀಲ ಅವರ ಅಳಿಯ ಕೆ.ಜಿ. ಪ್ರತಾಪ್ ಕುಮಾರ್ (43) ಸೋಮವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಪ್ರತಾಪ್‌ಕುಮಾರ್, ಬಿ.ಸಿ. ಪಾಟೀಲ ಅವರ ಹಿರಿಯ ಪುತ್ರಿ ಸೌಮ್ಯಾ ಅವರ ಪತಿ. ಮಧ್ಯಾಹ್ನ ಕಾರಿನಲ್ಲಿಯೇ ವಿಷ ಸೇವಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇವರನ್ನು ಸಹೋದರ ಪ್ರಭುದೇವ್‌ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಶಿವಮೊಗ್ಗದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ

ADVERTISEMENT

ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ರಾತ್ರಿ ಕತ್ತಲಗೆರೆಗೆ ಕೊಂಡೊ ಯ್ಯಲಾಯಿತು. ಪ್ರತಾಪ್‌ಕುಮಾರ್ ಹಿರೇಕೆರೂರಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.

ಮಕ್ಕಳಿರಲಿಲ್ಲ ಎಂಬ ಕೊರಗು

‘ಪ್ರತಾಪ್‌ ಹಾಗೂ ಮಗಳು ಸೌಮ್ಯಾ ಮದುವೆ 2008ರಲ್ಲಿ ಆಗಿತ್ತು. ಅವರು ನನಗೆ ಅಳಿಯ ಮಾತ್ರವಲ್ಲ, ಮಗನೂ ಆಗಿದ್ದರು. ನಮ್ಮ ಜಮೀನು, ವ್ಯವಹಾರ, ರಾಜಕೀಯ ಸಂಗತಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು’ ಎಂದು ಬಿ.ಸಿ. ಪಾಟೀಲ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ದಂಪತಿಗೆ ಮಕ್ಕಳು ಇರಲಿಲ್ಲ. ಪ್ರತಾಪ್‌ಗೆ ಆ ಕೊರಗು ಇತ್ತು. ಮದ್ಯ ವ್ಯಸನಿಯಾಗಿದ್ದ ಅವರು, ಈಚೆಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು’ ಎಂದು ಅವರು ತಿಳಿಸಿದರು.

‘ಹಿರೇಕೆರೂರಿನಲ್ಲಿ ನಮ್ಮ ಮನೆಯಲ್ಲಿಯೇ ವಾಸವಿದ್ದ ಪ್ರತಾಪ್ ಸೋಮವಾರ ಕತ್ತಲಗೆರೆಗೆ
ಹೋಗಿ ಬರುವುದಾಗಿ ತೆರಳಿದ್ದರು. ಅವರ ಸಹೋದರ ಪ್ರಭುದೇವ್ ಕರೆ ಮಾಡಿ ಪ್ರತಾಪ್ ವಿಷ ಸೇವಿಸಿರುವ ವಿಷಯ ತಿಳಿಸಿದರು. ಇದಕ್ಕೂ ಮೊದಲು ಪ್ರತಾಪ್ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಅವರ ಲೊಕೇಶನ್ ಪತ್ತೆ ಕಷ್ಟವಾಯಿತು. ನಂತರ ಫೋನ್ ಆನ್‌ ಮಾಡಿಕೊಂಡಿದ್ದ ಅವರಿಗೆ ನಾನೂ ಕರೆ ಮಾಡಿ ಮಾತಾಡಿದ್ದೆ, ಅವರ ಮಾತು ಅಸ್ಪಷ್ಟವಾಗಿತ್ತು. ಶಿವಮೊಗ್ಗ ಹಾಗೂ ದಾವಣಗೆರೆ ಪೊಲೀಸರ ನೆರವಿನಿಂದ ಲೊಕೇಶನ್ ಪತ್ತೆ ಮಾಡಿದೆವು. ಪ್ರಭುದೇವ್ ಸ್ಥಳಕ್ಕೆ ತೆರಳಿ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಮಾಹಿತಿ ನೀಡಿದರು.

ಪ್ರತಾಪ್ ಕುಟುಂಬದವರ ಅಪೇಕ್ಷೆಯಂತೆ ಅಂತ್ಯಕ್ರಿಯೆ ಕತ್ತಲಗೆರೆಯಲ್ಲಿಯೇ ಮಂಗಳವಾರ ಮಧ್ಯಾಹ್ನ ನಡೆಯಲಿದೆ ಎಂದು ಅವರು ಹೇಳಿದರು.

ಮೆಗ್ಗಾನ್‌ ಆಸ್ಪತ್ರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪ್ರಣವಾನಂದ ಸ್ವಾಮೀಜಿ ಭೇಟಿ ನೀಡಿದ್ದರು.

ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಡೆತ್‌ನೋಟ್‌ ಪತ್ತೆಯಾಗಿಲ್ಲ. ಮೊಬೈಲ್ ಫೋನ್‌ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.