ADVERTISEMENT

ಎನ್‌ಇಪಿ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿಯೇ ಇಲ್ಲ; ಶಂಕರಮೂರ್ತಿ

ಪದ್ಮಶ್ರೀ ಪುರಸ್ಕೃತ ಎಂ.ಕೆ. ಶ್ರೀಧರ್‌ ಅವರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:18 IST
Last Updated 22 ಜೂನ್ 2024, 16:18 IST
ಶಿವಮೊಗ್ಗದಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಎಂ.ಕೆ. ಶ್ರೀಧರ್‌ ಅವರನ್ನು ಸನ್ಮಾನಿಸಲಾಯಿತು
ಶಿವಮೊಗ್ಗದಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಎಂ.ಕೆ. ಶ್ರೀಧರ್‌ ಅವರನ್ನು ಸನ್ಮಾನಿಸಲಾಯಿತು   

ಶಿವಮೊಗ್ಗ: ‘ಶಿಕ್ಷಣ ರಂಗದಲ್ಲಿ ಬದಲಾವಣೆ ತಂದು ಶೈಕ್ಷಣಿಕವಾಗಿ ಕ್ರಾಂತಿ ಮಾಡಬೇಕಿದೆ. ಇದಕ್ಕೆ ಪೂರಕವಾಗಿಯೇ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೊಳಿಸಲು ಮುಂದಾಗಿತ್ತು. ಆದರೆ ರಾಜ್ಯದ ಶಿಕ್ಷಣ ಸಚಿವರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ವಿನಾಕಾರಣ ವಿರೋಧ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ಡಿ.ಎಚ್‌.ಶಂಕರಮೂರ್ತಿ ಹೇಳಿದರು. 

ಪೀಪಲ್ಸ್ ಫೋರಂ ಫಾರ್‌ ಕರ್ನಾಟಕ ಏಜುಕೇಷನ್‌ ವತಿಯಿಂದ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಪ್ರದ್ಮಶ್ರೀ ಪುರಸ್ಕೃತ ಎಂ.ಕೆ. ಶ್ರೀಧರ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಅವುಗಳು ಇನ್ನೂ ಕೂಡ ನಿವಾರಣೆ ಆಗಿಲ್ಲ. ಬದಲಾವಣೆಗೆ ಮುನ್ನುಡಿ ಬರೆಯುವ ಅಗತ್ಯವಿದೆ’ ಎಂದು ತಿಳಿಸಿದರು. 

ADVERTISEMENT

‘ಪದ್ಮಶ್ರೀ ಗೌರವ ಪಡೆಯಲು ಹಲವರು ಸಾಕಷ್ಟು ಲಾಭಿ ಮಾಡುತ್ತಾರೆ. ಆದರೆ ಈ ಗೌರವ ಶ್ರೀಧರ್‌ ಅವರನ್ನು ಹುಡುಕಿಕೊಂಡು  ಬಂದಿದೆ. ಇದಕ್ಕೆ ಅವರ ಸಾಧನೆಯೇ ಸಾಕ್ಷಿ. ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಕೊಡುಗೆ ಅಮೋಘವಾದುದು’ ಎಂದರು. 

‘ಮಕ್ಕಳಿಗೆ ಎಂತಹ ಶಿಕ್ಷಣ ಕೊಡಬೇಕು ಎಂಬುದರ ಕುರಿತು ಇನ್ನೂ ಗೊಂದಲದಲ್ಲೇ ಇದ್ದೇವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕೂಡ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುವ ಅಗತ್ಯವಿದೆ’ ಎಂದು ತಿಳಿಸಿದರು.

‘ನನ್ನ ಸಾಧನೆಯ ಹಿಂದೆ ಹಲವರ ಶ್ರಮವಿದೆ. ಶಿಕ್ಷಕರು, ಗೆಳೆಯರು, ಬಂಧು–ಬಳಗ ಇದ್ದಾರೆ. ಅವರು ನನಗೆ ಹೊಸ ರೂಪ ನೀಡಿದ್ದಾರೆ. ಅವರ ಸ್ಮರಣೆ ಮಾಡದಿದ್ದರೆ ಅದು ಮೂರ್ಖತನವಾಗುತ್ತದೆ’ ಎಂದು ಎಂ.ಕೆ.ಶ್ರೀಧರ್‌ ಹೇಳಿದರು. 

‘ಪದ್ಮಶ್ರೀ ಪ್ರಶಸ್ತಿ ಪಡೆಯಲು ಹೋದಾಗ ದೇಶದ ವಿವಿಧೆಡೆಯ ಹಲವು ಸಾಧಕರು ಬಂದಿದ್ದರು. ಅವರ ಸಾಧನೆ ನೋಡಿದಾಗ ನಾನು ಮಾಡಿರುವುದು ಕಡಿಮೆ ಎನಿಸಿತು. ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ಅರ್ಹರಿಗೆ ಸಿಗುತ್ತಿರುವುದು ನಿಜಕ್ಕೂ ಮಾದರಿ’ ಎಂದು ತಿಳಿಸಿದರು. 

‘ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಸಂಘಟನೆಗಳು ಜೀವನದಲ್ಲಿ ನನಗೆ ಹೊಸ ದಿಕ್ಕು ತೋರಿದವು. ಕಾಲೇಜು ದಿನಗಳಲ್ಲಿ ನಾವು ಯುವ ಕಾಂಗ್ರೆಸ್‌ ಎದುರಿಸಲು ಎಬಿವಿಪಿ ಸಂಘಟನೆಯನ್ನು ಬಲಗೊಳಿಸಿದ್ದೆವು. ಶಿಕ್ಷಣ ಕ್ಷೇತ್ರದಲ್ಲಿ ಒಬ್ಬರಿಂದ ಏನು ಮಾಡಲು ಆಗುವುದಿಲ್ಲ. ಪ್ರತಿಯೊಬ್ಬರ ಶ್ರಮ ಇದರಲ್ಲಿ ಇರುತ್ತದೆ’ ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ ‘ಬದಲಾಗುತ್ತಿರುವ ಭಾರತದ ಭರವಸೆಯ ಶಿಕ್ಷಣ’ ಕುರಿತು ಸಂವಾದ ನಡೆಯಿತು.  

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಏಜುಕೇಷನ್ ಸಂಚಾಲಕ ಧರ್ಮಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಕೈಗಾರಿಕೋದ್ಯಮಿ ಭೂಪಾಳಂ ಶಶಿಧರ್, ರುದ್ರೇಗೌಡ, ನಿವೃತ್ತ ಪ್ರಾಧ್ಯಾಪಕ ಜೆ.ಎಸ್. ಸದಾನಂದ, ಎ.ಜೆ.ರಾಮಚಂದ್ರ, ರವಿಕಿರಣ್, ಪ್ರವೀಣ್ ಇದ್ದರು. 

ಸಭೆ ನಡೆಯಲು ಬಿಡಲಿಲ್ಲ

‘ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ ನಿಗದಿ ಆಗಿತ್ತು. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಹೇಗೆ ಎಂಬುದು ಆ ಸಭೆಯ ಪ್ರಮುಖ ಚರ್ಚಾ ವಸ್ತುವಾಗಿತ್ತು. ನಾನು ಅದನ್ನು ವಿರೋಧಿಸಿದ್ದೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದೆ. ಆಗ ಸಭೆಯ ನೇತೃತ್ವ ವಹಿಸಿದ್ದವರು ಸಾಕು ಕುಳಿತುಕೊಳ್ಳಿ ಎಂದು ಗದರಿದ್ದರು. ಅವರಿಗೆ ನಾನು ತಕ್ಕ ಜವಾಬು ನೀಡಿದ್ದೆ. ಸಭೆಯಲ್ಲಿದ್ದ ಅನೇಕರು ನನ್ನ ಬೆಂಬಲಕ್ಕೆ ನಿಂತರು. ನಾವೆಲ್ಲಾ ಗಲಾಟೆ ಮಾಡಿ ಆ ಸಭೆ ನಡೆಯುವುದಕ್ಕೇ ಬಿಡಲಿಲ್ಲ’ ಎಂದು ಡಿ.ಎಚ್‌. ಶಂಕರಮೂರ್ತಿ ಸ್ಮರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.