ADVERTISEMENT

ನಾಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ವಿಶ್ವ ಮಾನವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 14:34 IST
Last Updated 9 ಸೆಪ್ಟೆಂಬರ್ 2024, 14:34 IST
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ   

ಶಿವಮೊಗ್ಗ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಸೆ.10ರಂದು ಗೌರವಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ಎನ್‌. ರಾಜು ಹೇಳಿದರು. 

ಸಾಗರದಲ್ಲಿರುವ ಅವರ ನಿವಾಸದಲ್ಲಿಯೇ ತಿಮ್ಮಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾಗೋಡು ಅವರ ಮಾನವೀಯ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. 

ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಶಾಲಾ–ಕಾಲೇಜುಗಳಲ್ಲಿ ಅ.26ರಂದು ಮಾಜಿ ಮುಖ್ಯಮಂತ್ರಿ ದಿ.ಎಸ್‌. ಬಂಗಾರಪ್ಪ ಅವರ ಜನ್ಮ ದಿನ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಹೇಳಿದರು. 

ADVERTISEMENT

ಭದ್ರಾವತಿ ತಾಲ್ಲೂಕಿನ ಡಿ.ಬಿ ಹಳ್ಳಿ ಗ್ರಾಮದ 33 ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಭೂಮಿಯ ಸಾಗುವಳಿ ಚೀಟಿಗಳನ್ನು ರದ್ದುಗೊಳಿಸಿರುವುದು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಹೀಗಾಗಿಯೇ ಸೊರಬದಲ್ಲಿರುವ ಎಸ್‌. ಬಂಗಾರಪ್ಪ ಅವರ ಸಮಾಧಿ ಸ್ಥಳದ ಮುಂದೆ ಸೆ.10ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

‘ರೈತರು ಭೂಮಿಯನ್ನು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ಭೂಮಿ ನಮ್ಮದು ಎನ್ನುತ್ತಿರುವುದು ಆತಂಕದ ಬೆಳವಣಿಗೆ. ರೈತರನ್ನು ಒಕ್ಕಲೆಬ್ಬಿಸುವಂತಹ ಕೆಲಸ ಸರ್ಕಾರ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅವರು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು. 

ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ. ಶ್ರೀನಿವಾಸ್‌, ಎಂ.ಬಿ. ವೆಂಕಟಪ್ಪ, ಲಲಿತಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.