ADVERTISEMENT

ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿ

ಭದ್ರಾ, ಲಿಂಗನಮಕ್ಕಿ ಜಲಾಶಯ; ಹೆಚ್ಚಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:33 IST
Last Updated 12 ಜೂನ್ 2024, 15:33 IST
ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬುಧವಾರ ಕಂಡು ಬಂದ ಜಲಾಶಯದ ವಿಹಂಗಮ ನೋಟ
ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬುಧವಾರ ಕಂಡು ಬಂದ ಜಲಾಶಯದ ವಿಹಂಗಮ ನೋಟ   

ಶಿವಮೊಗ್ಗ: ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಈ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳವಾಗಿದೆ.

ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ.

ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಇದ್ದು, ಬುಧವಾರ ಜಲಾಶಯದಲ್ಲಿ ನೀರಿನಮಟ್ಟ 588.11 ಮೀಟರ್ ಇತ್ತು. ಒಳಹರಿವು 1,765 ಕ್ಯುಸೆಕ್ ಇದೆ. ಜಲಾಶಯದಿಂದ ನದಿಗೆ 1,700 ಕ್ಯುಸೆಕ್ ನೀರು ಹರಿಯಬಿಡಲಾಗುತ್ತಿದೆ. 3.25 ಟಿಎಂಸಿ ಸಾಮರ್ಥ್ಯದ ಜಲಾಶಯ ಈ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾದ ಜಲಾಶಯ ಎಂಬ ಶ್ರೇಯಕ್ಕೆ ಪಾತ್ರವಾಗುವ ಹಂತದಲ್ಲಿದೆ.

ADVERTISEMENT

ತುಂಗಾ ಜಲಾಶಯ ಕಳೆದ ವರ್ಷ ಜುಲೈ 5ರಂದು ಭರ್ತಿಯಾಗಿತ್ತು. ಆದರೆ, ಈ ಬಾರಿ ಮಳೆ ಬೇಗನೇ ಶುರುವಾಗಿದ್ದರಿಂದ ಒಂದು ತಿಂಗಳು ಮೊದಲೇ ಭರ್ತಿ ಹಂತಕ್ಕೆ ಬಂದಿದೆ ಎಂದು ತುಂಗಾ ಜಲಾಶಯ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದ ಒಳಹರಿವು 1,395 ಕ್ಯುಸೆಕ್‌ ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಬುಧವಾರ 117.11 ಅಡಿಯಷ್ಟು ನೀರಿನ ಸಂಗ್ರಹ ಇತ್ತು. ಮಂಗಳವಾರ ಒಳಹರಿವು 2,911 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಕಳೆದ ವರ್ಷ ಇದೇ ದಿನ 137.4 ಅಡಿಯಷ್ಟು ನೀರು ಇತ್ತು. ಜಲಾಶಯದಿಂದ 342 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದೆ. ಬುಧವಾರ 1,745.40 ಅಡಿ ಇತ್ತು. ಜಲಾಶಯಕ್ಕೆ 3,450 ಕ್ಯುಸೆಕ್ ಒಳಹರಿವು ಇದ್ದು, 1,924.21 ಕ್ಯುಸೆಕ್ ನೀರು ಶರಾವತಿ ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1,743.70 ಅಡಿ ಇತ್ತು.

ಮಳೆಯ ಪ್ರಮಾಣ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6.83 ಸೆಂ.ಮೀ ಮಳೆ ಸುರಿದಿದೆ. ಜೂನ್ ತಿಂಗಳ  ವಾಡಿಕೆ ಮಳೆ 33.66 ಸೆಂ.ಮೀ ಇದ್ದು, ಕಳೆದ 12 ದಿನಗಳಲ್ಲಿ 9.74 ಸೆಂ.ಮೀ ಸರಾಸರಿ ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಾಗರ ತಾಲ್ಲೂಕಿನಲ್ಲಿ 3.16 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.