ಶಿವಮೊಗ್ಗ: ಸಕಲ ವಿಘ್ನಗಳ ನಿವಾರಕ ಗಣೇಶನ ಹಬ್ಬ ಆಚರಿಸಲು ಶುಕ್ರವಾರ ಮಾರುಕಟ್ಟೆಯಲ್ಲಿ ಹೂವು–ಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆಯಿತು. ಬೆಲೆ ಏರಿಕೆ ಬಿಸಿಯ ನಡುವೆಯೂ ಗ್ರಾಹಕರು ಭರ್ಜರಿ ವ್ಯಾಪಾರ, ವಹಿವಾಟು ನಡೆಸಿದರು.
ಪೂಜೆಗೆ ಅಗತ್ಯವಾದ ಹೂವು, ಹಣ್ಣು, ಬಾಳೆ ದಿಂಡು, ಮಾವಿನ ತೋರಣ, ತೆಂಗಿನ ಕಾಯಿ ಹಾಗೂ ಇನ್ನಿತರ ವಸ್ತುಗಳನ್ನು ಗಾಂಧಿ ಬಜಾರ್, ಹೂವಿನ ಮಾರುಕಟ್ಟೆಯಲ್ಲಿ ಖರೀದಿಸಲು ಗ್ರಾಹಕರು ಮುಗಿಬಿದ್ದರು. ಹೀಗಾಗಿ ಗಾಂಧಿ ಬಜಾರ್ ಭಾಗದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿತು.
ನಗರದ ಕೆಲವು ಕಡೆ ರಸ್ತೆ ಬದಿಗಳಲ್ಲಿ ಹೂವು, ಬಾಳೆ ದಿಂಡು, ಮಾವಿನ ಸೊಪ್ಪಿನ ರಾಶಿ ರಾಶಿ ಗ್ರಾಹಕರನ್ನು ಸೆಳೆದವು. ಹಬ್ಬದ ಅಂಗವಾಗಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದವು.
ಮಾರುಕಟ್ಟೆಯಲ್ಲಿ ಕೆ.ಜಿ ಸೇಬಿಗೆ ₹280, ಕೆ.ಜಿ ದಾಳಿಂಬೆಗೆ ₹270, ಕೆ.ಜಿ ದ್ರಾಕ್ಷಿ ಬೆಲೆ ₹200, ಕೆ.ಜಿ ಮೋಸಂಬಿಗೆ ₹180, ಕೆ.ಜಿ ಕಿತ್ತಳೆಗೆ ₹ 200, ಬಾಳೆ ಹಣ್ಣಿಗೆ ₹ 80 ದರ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ಎಲ್ಲ ಹಣ್ಣುಗಳನ್ನು ಕೂಡಿಸಿ ಪ್ಯಾಕೇಜ್ ರೂಪದಲ್ಲಿ ಪೂಜೆಗಾಗಿ ಸಿದ್ಧಪಡಿಸಿದ್ದ ಬುಟ್ಟಿಗೆ ₹150 ದರ ನಿಗದಿ ಮಾಡಿದ್ದರು.
ಎರಡು ಬಾಳೆ ದಿಂಡಿಗೆ ₹ 30, ಮಾವಿನ ತೋರಣಕ್ಕೆ ₹ 10 ನಿಗದಿ ಮಾಡಿದ್ದರು. ಮಲ್ಲಿಗೆ ಹೂವು ಒಂದು ಮಾರು ₹100, ಮೊಗ್ಗಿನ ಒಂದು ಹಾರಕ್ಕೆ ₹ 300, ಕೆ.ಜಿ ಚೆಂಡು ಹೂವಿನ ಬೆಲೆ ₹ 200 ಇತ್ತು. ಒಂದು ತೆಂಗಿನ ಕಾಯಿ ಬೆಲೆ ₹ 25 ಇತ್ತು. ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಗ್ರಾಹಕರನ್ನು ಕಂಗಾಲು ಮಾಡಿತು.
ಇನ್ನೂ ತರಕಾರಿ ಬೆಲೆ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೆ.ಜಿ ಟೊಮೆಟೊಗೆ ₹ 30, ಕೆ.ಜಿ ಆಲೂಗಡ್ಡೆಗೆ ₹ 50, ಹೀರೇಕಾಯಿ ಕೆ.ಜಿಗೆ ₹ 50, ಸೌತೆಕಾಯಿ ಕೆ.ಜಿಗೆ ₹ 60, ಬಿಟ್‌ರೂಟ್ ಕೆ.ಜಿ ₹ 70, ಕೆ.ಜಿ ಈರುಳ್ಳಿ ಬೆಲೆ ₹ 60, ಕೆ.ಜಿ ನುಗ್ಗೆಕಾಯಿ ₹ 80 ಹಾಗೂ ಸೊಪ್ಪಿನ ಕಟ್ಟು ಒಂದಕ್ಕೆ ₹ 10 ನಿಗದಿ ಮಾಡಲಾಗಿತ್ತು.
ಹಬ್ಬಗಳ ಸಂದರ್ಭದಲ್ಲಿ ಹೂವು, ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಗಗನಕ್ಕೇರಿಸಲಾಗುತ್ತದೆ. ಇದು ಗ್ರಾಹಕರಿಗೆ ಭಾರಿ ಹೊರೆಯಾಗುತ್ತದೆ ಎಂದು ಗ್ರಾಹಕ ಎಂ.ಆರ್. ಬಸವರಾಜ ಹೇಳಿದರು.ಶಿವು ವ್ಯಾಪಾರಿ
ನಾವು ಕೂಡ ಹೆಚ್ಚಿನ ದರ ನೀಡಿ ಖರೀದಿ ಮಾಡುತ್ತೇವೆ. ಹಬ್ಬಗಳು ಎಂದ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಳಿತ ಸಹಜಶಿವು ವ್ಯಾಪಾರಿ
ಹೂವು ಹಣ್ಣುಗಳ ಬೆಲೆ ಜಾಸ್ತಿ ಆಯಿತು. ಇದು ಗ್ರಾಹಕರಿಗೆ ಆರ್ಥಿಕವಾಗಿ ಸಾಕಷ್ಟು ಹೊರೆಯಾಗುತ್ತದೆ. ಹಬ್ಬದ ಹೊತ್ತಿನಲ್ಲಿಯೇ ಬೆಲೆಗಳು ಜಾಸ್ತಿ ಆಗುತ್ತವೆರಾಜೇಶ ಹಿರೇಮಠ ಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.