ADVERTISEMENT

ಭದ್ರಾವತಿ | ನೈರ್ಮಲ್ಯ ಮರೀಚಿಕೆ, ನಿವಾಸಿಗಳ ಹಿಡಿಶಾಪ

ಭದ್ರಾವತಿ ನಗರದ ವಿವಿಧ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ; ನಿರ್ವಹಣೆ ಕಾಣದ ಚರಂಡಿಗಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 7:47 IST
Last Updated 10 ಜೂನ್ 2024, 7:47 IST
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಅಂಟಿಕೊಂಡಿರುವ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರನ್ನು ತಿನ್ನಲು ಮುಂದಾಗಿರುವ ಹಸು
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಅಂಟಿಕೊಂಡಿರುವ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರನ್ನು ತಿನ್ನಲು ಮುಂದಾಗಿರುವ ಹಸು   

ಭದ್ರಾವತಿ : ನಗರದ ಬಹುತೇಕ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು, ನಿರ್ವಹಣೆ ಕಾಣದ ಚರಂಡಿಗಳು, ಸೊಳ್ಳೆ ಉತ್ಪತ್ತಿಗೆ ಹೇಳಿ ಮಾಡಿಸಿದಂತಿವೆ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಇರುವ ಬಡಾವಣೆ, ಭೋವಿ ಕಾಲೋನಿ, ಗಾಂಧಿನಗರ, ಚಾನೆಲ್ ಏರಿಯಾ, ಕನಕ ಮಂಟಪ ರಸ್ತೆ ಹಿಂಭಾಗ, ರಾಜು ನಾಯ್ಡು ರಸ್ತೆ, ತರೀಕೆರೆ ರಸ್ತೆಯ ಯಕೆನ್ ಶಾ ಕಾಲೊನಿ, ಸಿದ್ಧಾರೂಢ ನಗರ ಬಡಾವಣೆಗಳಲ್ಲಿ ಹೇಳತೀರದಷ್ಟು ನಿರ್ವಹಣೆ ಕಾರ್ಯ ಬಾಕಿ ಉಳಿದಿವೆ.

ಬಡಾವಣೆಯ ಜನರು ಅನೇಕ ಬಾರಿ  ನಗರಸಭೆಯ ಅಧಿಕಾರಿಗಳಿಗೆ ದೂರುಗಳ ಸಲ್ಲಿಸಿದ್ದಾರೆ. ಆದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದೇ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕದೇ ಸಾಬೂಬುಗಳನ್ನು ಹೇಳುತ್ತಾ ತಾತ್ಕಾಲಿಕ ಪರಿಹಾರಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಸ್ಥಳೀಯರಾದ ಕಾಂತಮ್ಮ ಆರೋಪಿಸುತ್ತಾರೆ.

ADVERTISEMENT
ಸೊಳ್ಳೆ ಉತ್ಪತ್ತಿಗೆ ಆವಾಸಸ್ಥಾನವಾಗಿ ಪರಿಣಮಿಸಿರುವ ಕಸದ ರಾಶಿ

ಸೊಳ್ಳೆ ಕಾಟ ವಿಪರೀತ ಹೆಚ್ಚಳ:

ವಾತಾವರಣದ ಏರುಪೇರಿನಿಂದಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಅವುಗಳಿಗೆ ಪೂರಕವೆಂಬಂತೆ ಚರಂಡಿಗಳಲ್ಲಿ ನಿಂತ ನೀರು, ಇತ್ತೀಚೆಗೆ ಆಗಾಗೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳಲ್ಲಿ ಶೇಖರಣೆ ಗೊಂಡಿರುವ ಅಲ್ಪಸ್ವಲ್ಪ ನೀರಿನಿಂದಾಗಿ ಸೊಳ್ಳೆಗಳ ಉಗಮ ಸ್ಥಾನ ಸೃಷ್ಟಿಯಾಗಿದೆ. ಜನರು ಸಂಜೆಯಾಗುತ್ತಿದ್ದಂತೆ ಕಿಟಕಿ ಬಾಗಿಲುಗಳ ಮುಚ್ಚಿ, ಸೊಳ್ಳೆ ನಿವಾರಕಗಳ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ನಿವೃತ್ತ ಉದ್ಯೋಗಿ ಮಹೇಶ್ ತಿಳಿಸಿದರು.

ಚರಂಡಿಯ ನೀರು ಮುಂದೆ ಹರಿಯದೆ ನಿಂತಿರುವುದು

ತಲೆಕೆಡಿಸಿಕೊಳ್ಳದ ಅಧಿಕಾರಿಗಳು :

ಸ್ವಚ್ಛತೆಯ ನಿರ್ವಹಣೆಗೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭೂತನ ಗುಡಿ ವಾರ್ಡ್ ನಲ್ಲಿ ಸೊಳ್ಳೆ ಔಷಧಿ ಸಿಂಪಡಿಸಿ ಬಹಳಷ್ಟು ಕಾಲ ಆಗಿದೆ. ನಗರಸಭೆ ಅಧಿಕಾರಿಗಳ ಕೇಳಿದರೆ, 15 ದಿನಕ್ಕೊಮ್ಮೆ ಪ್ರತಿ ವಾರ್ಡ್ ಗಳಿಗೂ ಸಿಂಪಡಿಸಲಾಗುತ್ತಿದೆ. ನಿಮ್ಮ ವಾರ್ಡಿಗೆ ಬರಲಿಲ್ಲವೇ ಎಂಬುದಾಗಿ ಮರುಪ್ರಶ್ನಿಸುತ್ತಾರೆ‘ ಎಂದು ಸ್ಥಳೀಯರು ದೂರುತ್ತಾರೆ.

ಹಳೇ ನಗರದ ನಗರಸಭೆಯ ಹಿಂಭಾಗವೇ ಇರುವ ಭೂತನ ಗುಡಿ ವಾರ್ಡ್ ನ ಮುಖ್ಯ ವೃತ್ತದಲ್ಲಿಯೇ ಕಸದ ರಾಶಿ ಕಾಣಿಸುವುದು

ರಸ್ತೆ, ಚರಂಡಿ, ಕಸ ಬಿಸಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಲು ದೈನಂದಿನ ಸ್ವಚ್ಛತಾ ಸಿಬ್ಬಂದಿ, ಮೇಲ್ವಿಚಾರಕರನ್ನು ನಿಯೋಜಿಸಿ, ದೈನಂದಿನ ನಿರ್ವಹಣೆ ಕಡ್ಡಾಯಗೊಳಿಸಬೇಕಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು

ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದಂತ ಸ್ಥಳ
ಪ್ರಕಾಶ್ ಎಂ. ಚನ್ನಪ್ಪನವರ್
ನ್ಯೂಟೌನ್ ಭಾಗದಲ್ಲಿ 14 ವಾರ್ಡ್ ಹಳೇ ನಗರ ಭಾಗದಲ್ಲಿ 18 ವಾರ್ಡ್‌ಗಳಿವೆ. ಸೊಳ್ಳೆ ಔಷಧಿ ಸಿಂಪಡಿಸುವ ಗಾಡಿಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾರ್ಡ್‌ಗೂ ಬರಲು ಒಂದು ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಔಷಧಿ ಸಿಂಪಡಿಸಲು ಎರಡು ದಿವಸ ಬೇಕಾಗುತ್ತದೆ
ಪ್ರಭಾಕರ್‌ ನಗರಸಭೆ ಪರಿಸರ ವಿಭಾಗದ ಅಧಿಕಾರಿ
ಕಾಂತಮ್ಮ
ಸಾರ್ವಜನಿಕರ ದೂರಿನ ಅನ್ವಯ ಸಂಬಂಧ ಪಟ್ಟ ವಾರ್ಡ್‌ನ ಕೌನ್ಸಿಲರ್ ಗಳೊಂದಿಗೆ ಸಭೆ ನಡೆಸಿ ಸ್ವಚ್ಛತಾ ಕಾರ್ಯಗಳ ವಿಷಯವಾಗಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗುವುದು
ಪ್ರಕಾಶ್ ಎಂ. ಚನ್ನಪ್ಪನವರ್ ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.