ADVERTISEMENT

ಎಮ್ಮೇಹಟ್ಟಿ | ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆರ್ಥಿಕ ನೆರವು

ಎಮ್ಮೇಹಟ್ಟಿ: ಸಂತ್ರಸ್ತ ಕುಟುಂಬಗಳಿಗೆ ಶಿವರಾಜಕುಮಾರ್, ಗೀತಾ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 17:35 IST
Last Updated 8 ಜುಲೈ 2024, 17:35 IST
ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಗೆ ಸೋಮವಾರ ಭೇಟಿ ನೀಡಿದ ಗೀತಾ ಹಾಗೂ ಶಿವರಾಜಕುಮಾರ್ ದಂಪತಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು
ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಗೆ ಸೋಮವಾರ ಭೇಟಿ ನೀಡಿದ ಗೀತಾ ಹಾಗೂ ಶಿವರಾಜಕುಮಾರ್ ದಂಪತಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು   

ಶಿವಮೊಗ್ಗ: ಹಾವೇರಿ ಬಳಿ ಜೂನ್ 29ರಂದು ನಡೆದ ಅಪಘಾತದಲ್ಲಿ ಮೃತಪಟ್ಟ ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಯ 13 ಜನರ ಕುಟುಂಬಕ್ಕೆ ಹಾಗೂ ಇಬ್ಬರು ಗಾಯಾಳುಗಳಿಗೆ ನಟ ಶಿವರಾಜಕುಮಾರ್‌ ಹಾಗೂ ಗೀತಾ ದಂಪತಿ ಸೋಮವಾರ ವೈಯಕ್ತಿಕವಾಗಿ ₹ 13 ಲಕ್ಷ ಪರಿಹಾರ ವಿತರಿಸಿದರು.

ಮಳೆಯ ನಡುವೆಯೇ ಎಮ್ಮೇಹಟ್ಟಿಯ ಮೃತರ ಮನೆಗಳಿಗೆ ಭೇಟಿ ನೀಡಿದ ಶಿವರಾಜಕುಮಾರ್ ಮತ್ತು ಗೀತಾ ಕುಟುಂಬಸ್ಥರ ಅಳಲು ಆಲಿಸಿ, ಕಂಬನಿ ಮಿಡಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ಸದ್ಯದ ಸ್ಥಿತಿಗತಿ, ಬದುಕಿ ಉಳಿದವರ ಪರಿಸ್ಥಿತಿಯ ಬಗ್ಗೆಯೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಸಾವಿಗೀಡಾದ 13 ಜನರ ಕುಟಂಬದವರಿಗೆ ಒಟ್ಟು ₹ 10 ಲಕ್ಷ ಹಾಗೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಚಿಕಿತ್ಸಾ ವೆಚ್ಚವಾಗಿ ತಲಾ ₹ 1.5 ಲಕ್ಷ ನೀಡಿದರು.

ADVERTISEMENT

ಈ ವೇಳೆ ಮಾತನಾಡಿದ ಶಿವರಾಜಕುಮಾರ್, ‘ಹಣ ಕೊಟ್ಟ ತಕ್ಷಣ ಅವರ ಬದುಕಿಗೆ ಆಸರೆ ಆಗುವುದಿಲ್ಲ. ಕುಟುಂಬಸ್ಥರಿಗೆ ಶಾಶ್ವತ ನೆರವು ಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಮೃತರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವೆ’ ಎಂದು ಹೇಳಿದರು.

ಸಂತ್ರಸ್ತ ಕುಟುಂಬಗಳಿಗೆ ನೆರವು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಗ್ರಾಮಸ್ಥರು ತೋರಿದ ಕಾಳಜಿಯನ್ನು ಗೀತಾ ಶಿವರಾಜಕುಮಾರ್ ಇದೇ ವೇಳೆ ಶ್ಲಾಘಿಸಿದರು. ಕುಟುಂಬದ ಎಲ್ಲ ಸದಸ್ಯರನ್ನು ಕಳೆದುಕೊಂಡಿರುವ ಅಂಗವಿಕಲೆ ಅರ್ಪಿತಾ ಭವಿಷ್ಯಕ್ಕೆ ನೆರವಾಗುವ ಭರವಸೆ ನೀಡಿದರು.

ಶಿವರಾಜಕುಮಾರ್ ಹಾಗೂ ಗೀತಾ ದಂಪತಿಯನ್ನು ವೀಕ್ಷಿಸಲು ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.

ಕೆಲಸ ಕೊಡಿಸಲು ಮನವಿ:

‘ಪತಿಯೇ ನನಗೆ ಆಸರೆಯಾಗಿದ್ದರು. ಈಗ ನಾನು ಮೂರು ತಿಂಗಳ ಬಾಣಂತಿ. ಮಗನ ಭವಿಷ್ಯಕ್ಕೆ ನನಗೆ ಉದ್ಯೋಗ ಬೇಕಿದೆ ಕೊಡಿಸಿ’ ಎಂದು ಅರುಣ್ ಎಂಬುವರ ಪತ್ನಿ ಮನವಿ ಮಾಡಿದರು.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್, ಭದ್ರಾವತಿ ತಾಲ್ಲೂಕು ಮರಾಠಾ ಸಮಾಜದ ಅಧ್ಯಕ್ಷ ಲೋಕೇಶ್‌ರಾವ್‌, ಕಾಂಗ್ರೆಸ್ ಮುಖಂಡರಾದ ಡಾ.ಶ್ರೀನಿವಾಸ ಕರಿಯಣ್ಣ, ಕಲಗೋಡು ರತ್ನಾಕರ, ಅನಿಲ್‌ಕುಮಾರ್ ತಡಕಲ್, ಹನುಮಂತು, ಉಮೇಶ್, ಜಿತೇಂದ್ರಗೌಡ, ಹಬೀಬ್‌ವುಲ್ಲಾ ಇದ್ದರು.

ಮನೆಯವರ ಸಾವು ಬಾಲಕಿಗೆ ಗೊತ್ತಿಲ್ಲ

ಅಪಘಾತದಲ್ಲಿ ಟೆಂಪೊ ಟ್ರಾವೆಲರ್‌ ಮಾಲೀಕ ನಾಗೇಶರಾವ್‌ ಪತ್ನಿ ವಿಶಾಲಾಕ್ಷಿ ಪುತ್ರ ಆದರ್ಶ ಅತ್ತೆ ಸುಭದ್ರಮ್ಮ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ 16 ವರ್ಷದ ಪುತ್ರಿ ಅರ್ಪಿತಾ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆದರೆ ಅಪಘಾತದ ಶಾಕ್‌ನಿಂದ ಹೊರಗೆ ಬಂದಿಲ್ಲ. ಅರ್ಪಿತಾ ಹುಟ್ಟಿನಿಂದಲೇ ಅಂಗವಿಕಲೆ. ಮತ್ತೊಬ್ಬರ ನೆರವಿನಿಂದಲೇ ಓಡಾಡಬೇಕಿದೆ. ಅಪಘಾತದಲ್ಲಿ ಕುಟುಂಬದ ಎಲ್ಲರೂ ಸಾವಿಗೀಡಾದ ವಿಚಾರ ಆಕೆಗೆ ಸೋಮವಾರವೂ ಗೊತ್ತಾಗಿರಲಿಲ್ಲ. ಸಂಬಂಧಿಕರು ಹೇಳಿರಲಿಲ್ಲ. ಮನೆಯವರೆಲ್ಲ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿರುವುದಾಗಿ ದೊಡ್ಡಪ್ಪ ರಂಗಸ್ವಾಮಿ ಕಂಬನಿ ಮಿಡಿದರು. ವಿಷಯ ತಿಳಿದು ಮರುಗಿದ ಗೀತಾ ಶಿವರಾಜಕುಮಾರ್ ಅರ್ಪಿತಾ ಕೈ ಹಿಡಿದುಕೊಂಡು ನೆರವಾಗುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.