ADVERTISEMENT

ನನ್ನ ತೇಜೋವಧೆಗೆ ಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ: ಗೀತಾ ಶಿವರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:52 IST
Last Updated 24 ಏಪ್ರಿಲ್ 2024, 15:52 IST
ಹೊಳೆಹೊನ್ನೂರಿನ ಸಮೀಪದ ಹನುಮಂತಾಪುರ ಗ್ರಾಮ ಮಂಗೋಟೆ ಯಶವಂತ ಅವರ ಮನೆಯಲ್ಲಿ ಗೀತಾ ಶಿವರಾಜಕುಮಾರ್ ಹಾಗೂ ನಟ ಶಿವರಾಜಕುಮಾರ್ ಊಟ ಮಾಡಿದರು
ಹೊಳೆಹೊನ್ನೂರಿನ ಸಮೀಪದ ಹನುಮಂತಾಪುರ ಗ್ರಾಮ ಮಂಗೋಟೆ ಯಶವಂತ ಅವರ ಮನೆಯಲ್ಲಿ ಗೀತಾ ಶಿವರಾಜಕುಮಾರ್ ಹಾಗೂ ನಟ ಶಿವರಾಜಕುಮಾರ್ ಊಟ ಮಾಡಿದರು   

ಹೊಳೆಹೊನ್ನೂರು: ‘ಶಿವಮೊಗ್ಗದಲ್ಲಿ ಜನಿಸಿರುವ ನಾನು ಕೂಡ ಭಾರತೀಯ ಸಂಸ್ಕೃತಿಯನ್ನು ತಿಳಿದಿರುವ ಹೆಣ್ಣುಮಗಳು’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ಸಮೀಪದ ಅರಹತೊಳಲು ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಉಚ್ಛಾಟಿಸಿರುವ ಅಭ್ಯರ್ಥಿಯೊಬ್ಬರು ನಾನು ಬೆವರು ಒರೆಸಿಕೊಂಡ ವಿಷಯವನ್ನು ಮಾಧ್ಯಮಗಳ ಮುಂದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿರುವುದು ನಾಚಿಗೇಡಿನ ಸಂಗತಿ’ ಎಂದು ಪರೋಕ್ಷವಾಗಿ ಈಶ್ವರಪ್ಪಗೆ ಟಾಂಗ್ ಕೊಟ್ಟರು. 

‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ವಾರ್ಷಿಕ ₹1 ಲಕ್ಷ, ರೈತರ ಸಾಲ ಮನ್ನಾ, ಸೇರಿದಂತೆ ಇನ್ನೂ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ’ ಎಂದು ಹೇಳಿದರು‌. 

ADVERTISEMENT

‘ಅಧಿಕಾರ ಕೈಲಿದ್ದಾಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತದ ಕೆಲವರು ನನ್ನ ಬಗ್ಗೆ ಟೀಕಿಸುತ್ತಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನದಲ್ಲಿ ಉತ್ತರ ನೀಡಲಾಗುತ್ತದೆ. ಅದಕ್ಕೆ, ಮತದಾರರು ನನಗೆ ಬೆಂಬಲ ನೀಡಬೇಕು’ ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಬಿಜೆಪಿಯವರು ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ನೀರು, ಸೂರು, ವಿದ್ಯುತ್, ರಸ್ತೆಗಳನ್ನು, ಉದ್ಯೋಗ, ಶಾಲಾ-ಕಾಲೇಜುಗಳನ್ನು ನೀಡಿದ್ದೇ ಕಾಂಗ್ರೆಸ್ ಎನ್ನುವುದನ್ನು ಯಾರೂ ಮರೆತಿಲ್ಲ. ಆದರೆ, 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ’ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಬೇಕು. ಇಲ್ಲಿ, ಕ್ಷೇತ್ರದ ಜನರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು. 

ತಾಲ್ಲೂಕಿನ ಅರಹತೊಳಲು, ಸಿದ್ಲೀಪುರ, ಸನ್ಯಾಸಿ ಕೊಡಮಗ್ಗಿ, ಮುಂಗೋಟೆ, ಆನವೇರಿ, ನಿಂಬೆಗೊಂದಿ, ಸೈದರ ಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಿದರು. 

ನಟ ಶಿವರಾಜಕುಮಾರ್, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಎಚ್.ಎಲ್.ಷಡಾಕ್ಷರಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಿಜಯ್ ಕುಮಾರ್, ಶಾಂತಕುಮಾರ್ ನಾಯ್ಕ, ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಟಿ.ನೇತ್ರಾವತಿ, ದೇವಿ ಕುಮಾರ್, ಕೆ.ಆರ್ ಶ್ರೀಧರ್, ಎನ್.ಟಿ.ಸಂಗನಾಥ್, ಎಸ್.ಪಿ.ಜಯದೇವಪ್ಪ, ಬಂಡೇರ ಚಂದ್ರಪ್ಪ, ಎ.ಎಂ.ಮಲ್ಲಿಕಾರ್ಜುನ್, ಆರ್. ಉಮೇಶ್, ಹಾಲೇಶಣ್ಣ, ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.