ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣ ಸ್ಥಳದಲ್ಲಿ ಮಂಗಳವಾರ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ರನ್‌ವೇ ಸ್ಥಳದ ಹತ್ತಿರ ಎರಡು ಮಿನಿ ಸರಕು ಸಾಗಣೆ ವಾಹನಗಳಲ್ಲಿ 36 ಬಾಕ್ಸ್‌ನಲ್ಲಿ 904 ಕೆ.ಜಿ ಜಿಲೆಟಿನ್ ಕಡ್ಡಿ ಹಾಗೂ 3,267 ಡಿಟೋನೇಟರ್ ಪತ್ತೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ವಿಷಯ ಗೊತ್ತಾದ ಕೂಡಲೇ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಂದು ಸ್ಫೋಟಕಗಳನ್ನು ಪರಿಶೀಲಿಸಿದರು.
ಅನುಮತಿ ನೀಡಿದ್ದ ಜಿಲ್ಲಾಧಿಕಾರಿ: ವಿಮಾನ ನಿಲ್ದಾಣ ಕಾಮಗಾರಿಗೆ ಜಲ್ಲಿ ಪೂರೈಸಲು ಸ್ಥಳದಲ್ಲೇ ಕ್ವಾರಿ ನೀಡಲಾಗಿದೆ. ಅಲ್ಲಿಯೇ ಇರುವ ಬಂಡೆ ಸ್ಫೋಟಿಸಿ ಕಾಮಗಾರಿಗೆ ಜಲ್ಲಿ ಬಳಕೆ ಮಾಡಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಸ್ಫೋಟಕ ಪೂರೈಕೆ ಮಾಡುವಂತೆ ಚಿಕ್ಕಬಳ್ಳಾಪುರದ ಸ್ಫೋಟಕ ಪೂರೈಕೆ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಂಪನಿ ಮಾಲೀಕರು ಸ್ಫೋಟಕಗಳನ್ನು ಸೋಮವಾರ ಕಳುಹಿಸಿ ಕೊಟ್ಟಿದ್ದರು. ಸ್ಫೋಟಕ ಪರಿಣಿತರು ಮಂಗಳೂರಿನಿಂದ ಬಾರದ್ದರಿಂದ ಸಾಮಗ್ರಿ ತುಂಬಿದ್ದ ವಾಹನಗಳನ್ನು ಅಲ್ಲೇ ಬಿಟ್ಟು ತೆರಳಿದ್ದರು ಎನ್ನಲಾಗಿದೆ. ನಿರ್ಲಕ್ಷ್ಯ ತೋರಿದ ಸ್ಫೋಟಕ ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಈ ಹಿಂದೆ ಎಂಒಯು ಮಾಡಿಕೊಂಡಿದ್ದವರು ಸ್ಫೋಟಕಗಳನ್ನು ಉಳಿಸಿದ್ದರು. ಹೊಸದಾಗಿ ಎಂಒಯು ಮಾಡಿಕೊಂಡಿದ್ದವರು ಉಳಿದ ಸಾಮಗ್ರಿಯನ್ನು ಬಳಕೆ ಮಾಡಲು ಬರುವುದಿಲ್ಲ. ಹೀಗಾಗಿ ಬಳಕೆಯಾಗದೇ ಉಳಿದಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಅಕ್ರಮ ಸ್ಫೋಟಕವಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.