ADVERTISEMENT

ರಿಪ್ಪನ್‌ಪೇಟೆ | ಶುಂಠಿ ಅಧಿಕ ಇಳುವರಿ: ರೈತರ ಹರ್ಷ

ರಿ.ರಾ.ರವಿಶಂಕರ್
Published 5 ಫೆಬ್ರುವರಿ 2024, 7:21 IST
Last Updated 5 ಫೆಬ್ರುವರಿ 2024, 7:21 IST
ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮದಲ್ಲಿ ಶುಂಠಿ ಕೀಳುತ್ತಿರುವ ಕಾರ್ಮಿಕರು
ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮದಲ್ಲಿ ಶುಂಠಿ ಕೀಳುತ್ತಿರುವ ಕಾರ್ಮಿಕರು   

ರಿಪ್ಪನ್‌ಪೇಟೆ: ಸಮೀಪದ ಹುಂಚ ಹಾಗೂ ಕೆರೇಹಳ್ಳಿ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬೆಳೆಯಲಾದ ಶುಂಠಿ   ಅಧಿಕ ಇಳುವರಿ ಬಂದಿದ್ದರಿಂದ ರೈತರು ಹರ್ಷಚಿತ್ತರಾಗಿದ್ದಾರೆ.

ಕಳೆದ ಬಾರಿ ಕ್ವಿಂಟಲ್‌ಗೆ ದರ ₹ 3,500ರಿಂದ ₹ 4,000ರವರೆಗೆ ಇತ್ತು. ಈ ಬಾರಿ ಕ್ವಿಂಟಲ್‌ಗೆ ₹ 8,500ರಿಂದ ₹ 9,000ದವರೆಗೆ ಇದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

‌ಹುಂಚ ಹಾಗೂ ಕೆರೇಹಳ್ಳಿ ಹೋಬಳಿ ವ್ಯಾಪ್ತಿಯ 192 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಶುಂಠಿ ಬೆಳೆಯಲಾಗಿದೆ. ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ₹ 4 ಲಕ್ಷ ವೆಚ್ಚವಾಗಿದ್ದು, ಇಷ್ಟು ದರ ಸಿಗುತ್ತಿರುವುದರಿಂದ ಲಾಭ ಕಾಣುವಂತಾಗಿದೆ ಎಂದು ರೈತರು ಹೇಳಿದ್ದಾರೆ.

ADVERTISEMENT

‘ಕಳೆದ ಹಂಗಾಮಿನ ಕೊನೆಯ ಅವಧಿಯಲ್ಲಿ ಧಾರಣೆ ಚುರುಕು ಪಡೆದಿದ್ದರಿಂದ ಅದರ ಲಾಭ ಕೆಲವೇ ರೈತರಿಗೆ ದೊರೆತಿತ್ತು. ಈ ಬಾರಿಯೂ ಶುಂಠಿಯನ್ನು ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದ್ದು, ಇದೇ ಧಾರಣೆ ಮುಂದುವರಿದರೆ ಬೆಳೆಗಾರರಿಗೆ ಕೊಂಚ ಅನುಕೂಲವಾಗಲಿದೆ’ ಎಂದು ಶುಂಠಿ ವ್ಯಾಪಾರಿ ವಡಗೆರೆ ಪವನ್ ಶೆಟ್ಟಿ ಹೇಳಿದರು.

‘ನಿತ್ಯ ಆಹಾರ ಕ್ರಮದಲ್ಲಿ ಹಾಗೂ ಔಷಧ ತಯಾರಿಕೆಯಲ್ಲಿ ಬಳಕೆಯಾಗುವ ಶುಂಠಿಗೆ ಉತ್ತಮ ಬೇಡಿಕೆಯಿದೆ. ಬಾಂಗ್ಲಾದೇಶದ ಮಾರುಕಟ್ಟೆಗೆ ರಾಜ್ಯದ ಶುಂಠಿ ರಫ್ತಾಗುತ್ತಿದೆ. ಈ ಭಾಗದಲ್ಲಿ ಹಿಮಾಚಲ, ರಿಗೋಡಿ, ವರದಾ ತಳಿಗಳಿಗೆ ಬೇಡಿಕೆ ಹೆಚ್ಚು’ ಎಂದು ಕೃಷಿಕ ಬಸವಪುರದ ರಘುಪತಿ ತಿಳಿಸಿದರು.

‘ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ಶುಂಠಿಯು ಹಲವು ಬಗೆಯ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ. ಭೂಮಿ ಹದಗೊಳಿಸಲು ಯಂತ್ರದ ಬಾಡಿಗೆ, ಕೂಲಿ, ನಿರ್ವಹಣಾ ವೆಚ್ಚ, ಔಷಧ, ಸಾಗಣಿಕೆ ವೆಚ್ಚ ಎಲ್ಲವೂ ದುಬಾರಿಯಾಗಿವೆ’ ಎಂದು ಅವರು ಹೇಳಿದರು.

ಮಾರುಕಟ್ಟೆಗೆ ಹೋಗಲು ಸಿದ್ಧವಾದ ಹಸಿ ಶುಂಠಿ

‘ಕೃಷಿ ಕಾರ್ಮಿಕರ ಕೊರತೆ ಎಲ್ಲಾ ಹಂತದಲ್ಲೂ ಕಾಡುತ್ತಿದೆ. ಅಧಿಕ ಕೂಲಿಗೂ ಕಾರ್ಮಿಕರು ಲಭ್ಯವಿಲ್ಲ. ಇಂತಹ ಬೆಳೆಗಳಲ್ಲಿ ಯಂತ್ರಗಳಿಗೆ ಹೆಚ್ಚು ಅವಲಂಬಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೆಳೆಗಾರ ಹುಲಿಗಿನ ಮನೆ ಶ್ರೀಧರ್ ವಿವರಿಸಿದರು.

ಸಕಾಲದಲ್ಲಿ ಮಳೆಯಾಗದೆ‌ ಶುಂಠಿ ಬೆಳೆಯಲ್ಲಿ ಕೆಲವೆಡೆ ಶೇಕಡ 20ರಷ್ಟು ಇಳುವರಿ ಕುಂಠಿತವಾಗಿದೆ. ಆದರೂ ಕೆಲವೆಡೆ ಉತ್ತಮ ಇಳುವರಿ ಬಂದಿದೆ. ಕೊರತೆಯನ್ನು ಮಾರುಕಟ್ಟೆ ಧಾರಣೆ ಹೆಚ್ಚಾದಲ್ಲಿ ಸರಿದೂಗಿಸಿಕೊಳ್ಳಬಹುದು.
ಶಾಂತಮೂರ್ತಿ ಎನ್‌. ಕೃಷಿ ಅಧಿಕಾರಿ ರಿಪ್ಪನ್‌ಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.