ADVERTISEMENT

ಸಿನಿಮಾ ಜನರ ಮನಸ್ಸು ಕೆರಳಿಸುತ್ತಿದೆ ಹೊರತು ಅರಳಿಸುತ್ತಿಲ್ಲ: ಗಿರೀಶ ಕಾಸರವಳ್ಳಿ

ಬಹುಮುಖಿ ಸಂವಾದ: ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:39 IST
Last Updated 24 ಆಗಸ್ಟ್ 2024, 15:39 IST
ಶಿವಮೊಗ್ಗದಲ್ಲಿ ಶನಿವಾರ ‘ಬಹುಮುಖಿ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಂವಾದ ನಡೆಸಿದರು
ಶಿವಮೊಗ್ಗದಲ್ಲಿ ಶನಿವಾರ ‘ಬಹುಮುಖಿ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಂವಾದ ನಡೆಸಿದರು   

ಶಿವಮೊಗ್ಗ: ಸಿನಿಮಾ ಸಂಪೂರ್ಣ ಇಂದು ವಾಣಿಜ್ಯೋದ್ಯಮ ಆಗಿ ಬದಲಾಗಿದೆ. ಅದು ಜನರ ಮನಸ್ಸನ್ನು ಕೆರಳಿಸುತ್ತಿದೆಯೇ ಹೊರತು ಅರಳಿಸುತ್ತಿಲ್ಲ. ಅದು ಈಗ ಪರಂಪರೆಯ ಭಾಗವಾಗಿ ಉಳಿದುಕೊಂಡಿಲ್ಲ. ಬರೀ ಕೆಲವು ತಂತ್ರಗಳನ್ನು ಅವಲಂಬಿಸಿದೆ ಹೀಗಾಗಿ ಯಾರು ಬೇಕಾದರೂ ಸಿನಿಮಾ ಮಾಡಬಹುದು ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಶನಿವಾರ ‘ಬಹುಮುಖಿ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನಿಮಾ ಹೊಸ ಸಾಧ್ಯತೆಗಳ ವಿಷಯ ಕುರಿತು ಅವರು ಮಾತನಾಡಿದರು.

‘ಬರೀ ಕಥೆ ಹೇಳುವುದೇ ಸಿನಿಮಾ ಅಲ್ಲ. ಕಥಾನಕವನ್ನು ಕಟ್ಟುವುದು ಸಿನಿಮಾ. ವಿಚಾರವನ್ನು ಚಿಂತಿಸುವಂತೆ ಮಾಡುವುದು ಸಿನಿಮಾ. ರಂಗಭೂಮಿ, ಸಾಹಿತ್ಯ, ನೃತ್ಯ ಪ್ರಕಾರಗಳ ಇತಿಹಾಸ ಬಹಳ ದೊಡ್ಡದು. ಆದರೆ, ಸಿನಿಮಾದ ಇತಿಹಾಸ ತೀರಾ ಇತ್ತೀಚಿನದು.  ಸಿನಿಮಾ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಪ್ರಶ್ನೆ ಮಾಡುವ ಕೆಲಸ ಸಿನಿಮಾ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇಂದು ಮೊಬೈಲ್ ಫೋನ್ ಇದ್ದವರೆಲ್ಲ ಸಿನಿಮಾ ಮಾಡಬಹುದು. ಸಿನಿಮಾ ಈಗ ಹಣವಿದ್ದವರ ಸ್ವತ್ತಾಗಿದೆ. ಅದು ಸಾಮಾಜಿಕ ಸಂವಾದ ಹುಟ್ಟು ಹಾಕುತ್ತಿಲ್ಲ. ಸಿನಿಮಾ ಕಲೆಯಾಗಿಯೇ ಉಳಿಯಬೇಕಾದರೆ ಅದು ಹೊಸ ಹೊಸ ಚರ್ಚೆಗಳನ್ನು ಹುಟ್ಟು ಹಾಕಬೇಕು’ ಎಂದರು.

ಸಿನಿಮಾ ಆರಂಭದಲ್ಲಿ ದೃಶ್ಯ ಕಲೆ ಆಗಿತ್ತು. ನಂತರ ದೃಶ್ಯ ಶ್ರವ್ಯ ಎರಡು ಕಲೆ ಆಗಿ ಬದಲಾಯಿತು. ಸಿನಿಮಾ ನಮಗೆ ಅರಿವು ಮೂಡಿಸಬೇಕು. ಸುಳ್ಳುಹೇಳುವ ಜಾಹೀರಾತು ಸಿನಿಮಾ ಆಗಬಾರದು. ಹೊಸದಾಗಿ ಚಿತ್ರ ನೀಡುವವರು ಸಾಮಾಜಿಕ ಚಳವಳಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಇತರೆ ಕಲೆಗಳು ಜನರಿಗೆ ಏನನ್ನು ಕೊಡುತ್ತವೆಯೋ ಅದಕ್ಕಿಂತ ಭಿನ್ನವಾಗಿ ಚಿತ್ರಗಳು ಜನರಿಗೆ ಏನನ್ನು ಕೊಡುತ್ತವೆ ಎಂಬುದು ಮುಖ್ಯವಾಗುತ್ತದೆ. ಇಂದು ಪ್ರಶಸ್ತಿಗಳು ಕೂಡ ಜನಪ್ರಿಯ ಚಿತ್ರಗಳಿಗೆ ಸಿಗುತ್ತಿವೆ. ಅದು ಕೆರಳಿಸುವ ಚಿತ್ರವೂ ಆಗಿರಬಹುದು ಎಂದರು.

ಯು.ಅರ್.ಅನಂತಮೂರ್ತಿ ಅವರ ಘಟಶ್ರಾದ್ಧ ಚಿತ್ರದಿಂದಲೇ ನನ್ನ ಸಿನಿಮಾ ಪ್ರಯಾಣ ಆರಂಭಿಸಿದೆ. ಈಗ ಅನಂತಮೂರ್ತಿ ಅವರ ‘ಆಕಾಶ ಮತ್ತು ಬೆಕ್ಕು’ ಕತೆಯನ್ನು ಸಿನಿಮಾ ಮಾಡುವ ಯೋಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಬಹುಮುಖಿಯ ಎಚ್.ಎಸ್.ನಾಗಭೂಷಣ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.