ಶಿವಮೊಗ್ಗ: ‘ನಿಸರ್ಗದ ಎಲ್ಲ ನಿಯಮಗಳನ್ನು ಧಿಕ್ಕರಿಸಿ ಮನುಷ್ಯ ಕಾಂಕ್ರೀಟಿನ ಸೌಧಗಳನ್ನು ಕಟ್ಟಿಕೊಂಡ ಪರಿಣಾಮ ಟರ್ಕಿ ಹಾಗೂ ಸಿರಿಯಾದಲ್ಲಿ ಆದ ಭೂಕಂಪನದಂತಹ ದುರಂತಗಳನ್ನು ಎದುರಿಸಬೇಕಾಗಿದೆ’ ಎಂದು ಪರಿಸರವಾದಿ ನಾಗೇಶ ಹೆಗಡೆ ಹೇಳಿದರು.
ಇಲ್ಲಿನ ಕಮಲಾ ನೆಹರೂ ಕಾಲೇಜಿನಲ್ಲಿ ಭಾನುವಾರ ‘ಬಹುಮುಖಿ’ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾಗತಿಕ ತಾಪಮಾನ ಏರಿಕೆ ಕುರಿತು ಮಾತನಾಡಿದ ಅವರು, ಭೂಕಂಪನದಿಂದ ಮೃಗ ಪಕ್ಷಿಗಳು, ಜಲಚರ, ಆದಿಮಾನವರಿಗೆ, ಗ್ರಾಮೀಣರಿಗೆ ಹೆಚ್ಚು ತೊಂದರೆ ಆಗಿಲ್ಲ. ಟರ್ಕಿಯಲ್ಲಿ ಭೂಕಂಪನ ಆದ 30 ಕಿ.ಮೀ ಆಚೆ ಕುರಿ ಮೇಯಿಸುವವನಿಗೆ ಏನೂ ಆಗಿಲ್ಲ. ನಾವೆ ಓಡಿಸುವವನಿಗೆ ಏನೂ ಆಗಲಿಲ್ಲ. ಛಾವಣಿಗಳ ಮೇಲೆ ಛಾವಣಿ ಕಟ್ಟಿಕೊಂಡವರಿಗೆ ಮಾತ್ರ ತೊಂದರೆ ಎದುರಾಗಿದೆ ಎಂದರು.
‘ಭೂಕಂಪನ ನೈಸರ್ಗಿಕ ದುರಂತ ಅಲ್ಲ. ಬದಲಿಗೆ ಅದೊಂದು ನಿಸರ್ಗದ ಪ್ರಕ್ರಿಯೆ. ಆದರೆ ದುರಂತದ ರೂಪ ದಲ್ಲಿ ನಮ್ಮ ಮೈ ಮೇಲೆ ನಾವೇ ಎಳೆದು ಕೊಂಡಿದ್ದೇವೆ’ ಎಂದು ಹೇಳಿದರು.
ಟರ್ಕಿಯ ಭೂಕಂಪನಕ್ಕಿಂತ ಭೀಕರವಾದ ಅವಘಡ ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದೆ. 120 ಕಡೆ ಅರಣ್ಯ ತಾನೇ ತಾನಾಗಿಯೇ ಹೊತ್ತಿ ಉರಿಯುತ್ತಿದೆ. ಹೆಚ್ಚುತ್ತಿರುವ ಶಾಖದಿಂದಾಗಿ ಅರಣ್ಯದಲ್ಲಿ ಈ ಅಗ್ನಿಕಾಂಡ ನಡೆಯುತ್ತಿದೆ. ಎರಡು ವರ್ಷಗಳ ಹಿಂದೆ ಪಶ್ಚಿಮ ಘಟ್ಟದಲ್ಲೂ ಇದು ಎಚ್ಚರಿಕೆಯ ರೂಪದಲ್ಲಿ ಕಾಣಿಸಿಕೊಂಡಿದೆ. ಮುಂದೆ ಇಂತಹ ಅಸಂಭವನೀಯ ಸಾಧ್ಯತೆಗಳು ಆಗುವ ಲಕ್ಷಣಗಳು ಕಾಣುತ್ತಿವೆ ಎಂದು ಎಚ್ಚರಿಸಿದರು.
‘ಇಂದು ಪರಿಸರದ ಅಸಮತೋಲನದ ಪರಿಣಾಮ ಬಾಂಬ್ ಸೈಕ್ಲೋನ್, ಆಕಾಶ ಧಾರೆಯಂತಹ ಹೊಸ ವಿಕೋಪಗಳನ್ನು ಕಾಣುತ್ತಿದ್ದೇವೆ. ನಮಗಿಂತ 50 ವರ್ಷ ಮುಂದೆ ಇದ್ದಾರೆ ಎಂದು ಭಾವಿಸಿದವರಿಗೂ ಈ ಹೊತ್ತಿನಲ್ಲಿ ಆದಿ ಮಾನವರ ಕಾಲಕ್ಕೆ ಮರಳುವ ಸ್ಥಿತಿ ಬಂದಿತ್ತು. ಪಾಕಿಸ್ತಾನದಲ್ಲಿ ಇತ್ತೀಚೆಗೆ 3.5 ಕೋಟಿ ಜನರು ಮಹಾಮಳೆಯಿಂದ ತತ್ತರಿಸಿದರು. ಶೇ 35ರಷ್ಟು ಅಲ್ಲಿನ ಆರ್ಥಿಕತೆ ಕುಸಿಯಿತು. ನಿಮ್ಮ ಮನೆಯಲ್ಲಿ ಹಣ, ಆಭರಣ, ಐಷಾರಾಮಿ ವಸ್ತುಗಳು ಎಲ್ಲವೂ ಇವೆ. ಆದರೆ ದೋಣಿ ಇದೆಯಾ? ಎಂದು ಕೇಳಬೇಕಾದ ಸ್ಥಿತಿಯನ್ನು ಮೊನ್ನೆಯಷ್ಟೇ ಬೆಂಗಳೂರಿನ ಮಳೆಯ ಸಂದರ್ಭದಲ್ಲಿ ಕಂಡಿದ್ದೇವೆ. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು, ವಿಮಾನಗಳಲ್ಲಿ ಓಡಾಡುವವರು ಟ್ರ್ಯಾಕ್ಟರ್‌ನಲ್ಲಿ ಕುಳಿತು ಹೋಗಬೇಕಾಯಿತು. ನಿಸರ್ಗದ ಈ ವಿಲಕ್ಷಣ ಕಥೆಗಳು ನಮಗೆ ಎಚ್ಚರಿಕೆ ಗಂಟೆಯಾಗಿವೆ’ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಶ್ರೀಪತಿ ವಹಿಸಿದ್ದರು. ಪ್ರಾಚಾರ್ಯ ನಾಗಭೂಷಣ, ಕಾಂತೇಶ ಕದರಮಂಡಲಗಿ ಹಾಜರಿದ್ದರು.
***
ಮಕ್ಕಳಿಗೆ ವಾಸ್ತವಾಂಶ ತಿಳಿಸೋಣ..
ಮಕ್ಕಳಿಗೆ ಇಂದು ನಾವು 35ರಿಂದ 40 ವರ್ಷಗಳ ಹಿಂದಿನ ಪಾಠ ಹೇಳುತ್ತಿದ್ದೇವೆ. ಆದರೆ ಇವತ್ತು ಏನಾಗುತ್ತಿದೆ ಎಂಬುದನ್ನು ಅವರಿಗೆ ಹೇಳುತ್ತಿಲ್ಲ. ದುರಾದೃಷ್ಟವಶಾತ್ ಶಿಕ್ಷಣ ಇಲಾಖೆ ಅದನ್ನು ತಿಳಿಸುವ ಕೆಲಸ ಮಾಡುತ್ತಿಲ್ಲ ಎಂದು ನಾಗೇಶ ಹೆಗಡೆ ಹೇಳಿದರು.
‘ಮಕ್ಕಳಿಗೆ ಇವತ್ತಿನ ವಾಸ್ತವಾಂಶ ತಿಳಿಸಿ ಅವರನ್ನು ಪ್ರಜ್ಞಾವಂತ ಜನರನ್ನಾಗಿ ಮಾಡಬೇಕಿದೆ. ಊರಿನ ಪಕ್ಕದಲ್ಲಿಯೇ ಕಬ್ಬು ಬೆಳೆದರೂ ಅದರ ಬಗ್ಗೆ ಪಾಠದಲ್ಲಿ ಏನನ್ನೂ ಹೇಳುತ್ತಿಲ್ಲ. ನಾವು ವಾಸ್ತವದಿಂದ ದೂರ ಇಟ್ಟು ಹಳೆಯ ವಿಚಾರಗಳಲ್ಲಿಯೇ ಅವರನ್ನು ಇಡುತ್ತಿದ್ದೇವೆ.
ಪರಿಸರದ ವಿಚಾರವನ್ನು ಜೂನ್ 5ಕ್ಕೆ ಬಿಟ್ಟರೆ ಯಾವುದೇ ಸಂದರ್ಭದಲ್ಲಿ ಆ ಬಗ್ಗೆ ಚಕಾರ ಎತ್ತುವುದಿಲ್ಲ. ಎಲ್ಲದಕಕೂ ಮಾಧ್ಯಮಗಳತ್ತ ಕೈ ತೋರಿಸುತ್ತಿದ್ದೇವೆ. ಎಲ್ಲವೂ ಅಲ್ಲಿಂದಲೇ ಆಗಬೇಕೆಂದೇನೂ ಇಲ್ಲ. ಈಗ ಮಾಧ್ಯಮವೇ ನಮ್ಮ ಕೈಯಲ್ಲಿದೆ. ಅಲ್ಲಿ ನಾವು ಮಾತಾಡಬೇಕಿದೆ. ಎಲ್ಲ ಸಂಗತಿಗಳು ಚರ್ಚೆಗಳು ಆದರೆ ನಮ್ಮ ಪರಿಸರದಲ್ಲಿ ಏನಾದರೂ ಬದಲಾವಣೆ ಆಗಲಿದೆ’ ಎಂದರು.
***
ಪೃಥ್ವಿಯ ತಾಪಮಾನ ಹೆಚ್ಚಳ: ಕಳವಳ
ಪೃಥ್ವಿಯ ತಾಪಮಾನ ಈಗ 1.1 ಡಿಗ್ರಿ ಹೆಚ್ಚು ಆಗಿದೆ. ಅದನ್ನು ತಗ್ಗಿಸಲು ನಾವೇನು ಮಾಡದಿದ್ದರೆ ಇನ್ನು 10ರಿಂದ 12 ವರ್ಷಗಳಲ್ಲಿ 2.2 ಡಿಗ್ರಿಗೆ ಹೆಚ್ಚಾಗಲಿದೆ. ಆಗಲೂ ಏನೂ ಮಾಡದಿದ್ದರೆ 4 ಡಿಗ್ರಿಯಷ್ಟು ತಾಪಮಾನ ಹೆಚ್ಚಳಗೊಂಡು ಬದುಕಲು ಕಷ್ಟವಾಗುತ್ತದೆ. ಆ ಹಂತಕ್ಕೆ ಹೋಗಬಾರದು ಎಂದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವಾಯುಮಂಡಲ ಇಂದು ಪಜೀತಿ ಪಡುತ್ತಿದೆ. ತನ್ನನ್ನು ತಾನು ಸಾವರಿಸಿಕೊಂಡು ಮಾಲಿನ್ಯದಿಂದಾಗಿ ಕಾರ್ಬನ್ ಪರದೆ ಹರಡಿಕೊಂಡು ಶಾಖ ವರ್ಧಕ ಅನಿಲಗಳಿಂದಾಗಿ ಪಾರದರ್ಶಕ ವಾಯುಮಂಡಲ ಬಿಸಿಲನ್ನು ತನ್ನೊಳಗೆ ಇಟ್ಟುಕೊಳ್ಳಲಿದೆ. ಇದರಿಂದ ಭೂಮಿಯ ಬಿಸಿ ಹೆಚ್ಚಳಗೊಳ್ಳಲಿದೆ. ಅದರ ಪರಿಣಾಮ ಕಾಡಿನ ಬೆಂಕಿ, ಮಹಾಮಳೆ, ಸುಂಟರಗಾಳಿಯಂತಹ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ ಎಂದು ನಾಗೇಶ ಹೆಗಡೆ ಹೇಳಿದರು.
***
ಪರ್ಯಾಯ ಇಂಧನ ಬಳಕೆಯ ಸಾಧ್ಯತೆಗಳತ್ತ ಇಂದು ದೊಡ್ಡ ಮಟ್ಟದಲ್ಲಿ ಅವಕಾಶ ತೆರೆದುಕೊಂಡಿದೆ. ಇದು ಹೊಸ ಆರ್ಥಿಕ ವಹಿವಾಟಿಗೆ ಅವಕಾಶವಾಗಲಿದೆ. ಆರ್ಥಿಕತೆ ಹಾಗೂ ಉದ್ಯೋಗಾವಕಾಶಗಳ ವಿಚಾರದಲ್ಲಿ ಹೊಸ ಭಾಷ್ಯ ಬರೆಯಲಿದೆ.
-ನಾಗೇಶ ಹೆಗಡೆ, ಪರಿಸರವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.