ಆನವಟ್ಟಿ: ಈಚೆಗೆ ಸುರಿದ ವರ್ಷಧಾರೆ, ರೈತರ ಬದುಕಿಗೆ ಹರ್ಷಧಾರೆ ಆಗುವ ಬದಲು ಕಣ್ಣೀರಧಾರೆ ಆಗಿದ್ದೇ ಹೆಚ್ಚು. ಇಂತಹ ವಾತಾವರಣದಲ್ಲೂ ಅರ್ಧ ಎಕರೆಯಲ್ಲಿ ಬೆಳೆದ ಚಂಡು ಹೂ ಯುವ ರೈತರೊಬ್ಬರ ಕೈಹಿಡಿದಿದೆ.
ಕನ್ನಡ ಎಂ.ಎ. ಪದವಿ ಮುಗಿಸಿರುವ ಆನವಟ್ಟಿಯ ಅಜಾದ್ ಬೀದಿಯ ಇರ್ಫಾನ್ ಕೋಟೆ ಅವರೇ 6 ವರ್ಷ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ, ನಂತರ ಕೃಷಿ ಕಡೆಗೆ ಆಸಕ್ತಿ ಹೆಚ್ಚಿಸಿಕೊಂಡರು. ಕೋಡಿಹಳ್ಳಿಯಲ್ಲಿ ಇರುವ ಜಮೀನಲ್ಲಿ ಆರು ವರ್ಷದಿಂದ ಕೃಷಿ ಮಾಡುತ್ತಾ, ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.
ಮೊದಲು ಮೆಕ್ಕಜೋಳ ಬೆಳೆದು ಯಶಸ್ಸು ಕಂಡ ನಂತರ ಕೊಳವೆ ಬಾವಿ ಕೊರೆಯಿಸಿ, ಎರಡು ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಅಡಿಕೆ ಈಗ ಫಲ ನೀಡಲು ಆರಂಭವಾಗಿದೆ. ನಂತರ ಕಲ್ಲಂಗಡಿ ಬೆಳೆದಾಗ ಉತ್ತಮ ಆದಾಯ ಕೈಸೇರಿತು. ಈ ವರ್ಷ ಎರಡು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ನಿರಂತರ ಮಳೆಗೆ ಹಾಳಾಯಿತು. ಅರ್ಧ ಎಕರೆಯಲ್ಲಿ ಹಾಕಿದ್ದ ಮೆಣಸು ಸಂಪೂರ್ಣ ಹಾಳಾಯಿತು. ಆದರೆ ಇನ್ನರ್ಧ ಎಕರೆಯಲ್ಲಿ ಬೆಳೆದ ಚಂಡು ಹೂ ಇರ್ಫಾನ್ ಅವರ ಕೈಹಿಡಿದಿದೆ.
ದಸರಾ ಹಬ್ಬಕ್ಕೆ ಚಂಡು ಹೂ ಕೆ.ಜಿ.ಗೆ ತಲಾ ₹ 70 ದರ ಸಿಕ್ಕಿದೆ. ಮೊದಲ ಕಟ್ಟಿಂಗ್‌ನಲ್ಲಿ 800 ಕೆ.ಜಿ ಮಾರಾಟ ಆಗಿದ್ದು, ₹ 56,000 ಆದಾಯ ದೊರೆತಿದೆ. ನಂತರ 10 ದಿವಸಕ್ಕೆ 10 ಕ್ವಿಂಟಲ್ ಬೆಳೆ ಬಂದಿದೆ. ಕೆ.ಜಿಗೆ ₹ 9 ರಂತೆ ಫ್ಯಾಕ್ಟರಿಗೆ ನೀಡಲಾಗಿದೆ ಅದರಿಂದ 9,000 ಆದಾಯ ಸಿಕ್ಕಿದೆ. ದೀಪಾವಳಿ ಹಬ್ಬಕ್ಕೆ ಕೆ.ಜಿಗೆ ₹ 40 ದರ ಸಿಕ್ಕಿದ್ದು, 18 ಕ್ವಿಂಟಲ್ ಮಾರಾಟವಾಗಿದೆ. ₹ 72,000 ಆದಾಯ ಸಿಕ್ಕಿದೆ. ಇನ್ನೊಂದು ಕಟಿಂಗ್ ತುಳಸಿ ಹಬ್ಬಕ್ಕೆ ಸಿಗುತ್ತದೆ. ಆಗ ಅಂದಾಜು 7 ಕ್ವಿಂಟಲ್ ಸಿಗಬಹುದು. ಕೆ.ಜಿಗೆ ₹ 50 ಸಿಕ್ಕರೂ ₹35,000 ಆದಾಯ ಸಿಗುವ ನಿರೀಕ್ಷೆಯಿದೆ. ಅರ್ಧ ಎಕರೆಯಲ್ಲೇ ₹ 1.72 ಲಕ್ಷ ಒಟ್ಟು ಆದಾಯ ಸಿಕ್ಕಿದ್ದು, ₹ 42,000 ಖರ್ಚು ತೆಗೆದರೂ ₹ 1.30 ಲಕ್ಷ ಆದಾಯ ಸಿಗುತ್ತದೆ ಎಂದು ಇರ್ಫಾನ್ ಹೇಳುತ್ತಾರೆ.
ಹೂ ಬೆಳೆಗೆ ಅನುಸರಿಸಿದ ಕ್ರಮ: ಮಳೆ ನೀರು ನಿಲ್ಲದಂತೆ ಸಾಲುಗಳನ್ನು ಮಾಡಿಕೊಳ್ಳಬೇಕು. ಗಿಡ ಹಚ್ಚಿ ವಾರದ ನಂತರ ಮಣ್ಣು ಏರಿಸಬೇಕು. ಕಳೆ ತೆಗೆಯಲು ಸಾಲುಗಳ ಮಧ್ಯೆ ಕುಂಟೆ ಹೊಡೆಯಬೇಕು. ಸಸಿ ನೆಟ್ಟು 15 ಹಾಗೂ 30 ದಿನಕ್ಕೆ ರಸಗೊಬ್ಬರ ಕೊಡಬೇಕು. ಅವಶ್ಯ ಅನ್ನಿಸಿದಾಗ ಗಿಡಕ್ಕೆ ಮಣ್ಣು ಏರಿಸುತ್ತಲೇ ಇರಬೇಕು. ಇದರಿಂದ ಹೆಚ್ಚು ಇಳುವರಿ ಸಾಧ್ಯ ಎಂದು ಇರ್ಫಾನ್ ಸಲಹೆ ನೀಡುತ್ತಾರೆ.
ಈ ವರ್ಷ ಸತತ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಬಹುತೇಕ ಬೆಳೆ ನಾಶವಾಗಿವೆ. ಆನವಟ್ಟಿ ಅರೆಮಲೆನಾಡು ಭಾಗವಾದರೂ, ಮಳೆಯ ರಭಸಕ್ಕೆ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ವಿವಿಧ ರೋಗಕ್ಕೆ ಬೆಳೆಗಳು ತುತ್ತಾಗಿವೆ. ಇಂತಹ ಸನ್ನಿವೇಶದಲ್ಲಿ ಇರ್ಫಾನ್ ಬೆಳೆದ ಚಂಡು ಹೂ ಧಾರಾಕಾರ ಮಳೆಯನ್ನು ತಡೆದುಕೊಂಡು ಫಸಲು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.