ಶಿವಮೊಗ್ಗ: ಕೃತ್ತಿಕಾ ಮಳೆ ಕಳೆದೊಂದು ವಾರದಿಂದ ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಹಲವೆಡೆ ಆರ್ಭಟಿಸಿದೆ. ಇದರೊಂದಿಗೆ ಮುಂಗಾರು ಪೂರ್ವ ಮಳೆ ಮುಂದಿನ ಮಳೆಗಾಲಕ್ಕೆ ಶುಭಸೂಚನೆಯ ಮುನ್ನುಡಿ ಬರೆದಿದೆ.
ಮಳೆಯ ಆರಂಭದಿಂದ ಜಿಲ್ಲೆಯಲ್ಲಿ ನಿಧಾನವಾಗಿ ಕೃಷಿ ಚಟುವಟಿಕೆಯೂ ಗರಿಗೆದರುತ್ತಿದೆ. ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ನೆಲ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಬೇಸಿಗೆಯಲ್ಲಿ ಬತ್ತಿ ಬೆಂಗಾಡಾಗಿದ್ದ ಹಲವು ಕೆರೆಯಂಗಳಗಳು ಈಗ ನೀರಿನ ಸಮೃದ್ಧಿಗೆ ತೆರೆದುಕೊಳ್ಳುತ್ತಿವೆ.
ಹೊಸನಗರ, ಭದ್ರಾವತಿಯಲ್ಲಿ ಮಳೆಯ ಕೊರತೆ: ಶಿವಮೊಗ್ಗ ಜಿಲ್ಲೆಯಲ್ಲಿ 2024ರ ಜನವರಿ 1ರಿಂದ ಮೇ 18ರವರೆಗೆ ವಾಡಿಕೆಯಂತೆ 85 ಮಿ.ಮೀ. ಮುಂಗಾರು ಪೂರ್ವ ಮಳೆಯಾಗಬೇಕಿದೆ. ಆದರೆ 119 ಮಿ.ಮೀ ಮಳೆ ಸುರಿದಿದೆ. ಆ ಪೈಕಿ ಭದ್ರಾವತಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 82 ಮಿ.ಮೀ ಮಳೆಯಾಗಬೇಕಿತ್ತು. ಆದರೆ 62 ಮಿ.ಮೀ ಸುರಿದಿದೆ. ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ 114 ಮಿ.ಮೀ ಆಗಬೇಕಿದ್ದ ಮಳೆ 98 ಮಿ.ಮೀ ಸುರಿದಿದ್ದು, ಶೇ 15ರಷ್ಟು ಕೊರತೆ ಆಗಿದೆ.
ನಾಲ್ಕು ತಾಲ್ಲೂಕು, ವಾಡಿಕೆಗಿಂತ ಹೆಚ್ಚು ಮಳೆ: ಸಾಗರ ತಾಲ್ಲೂಕಿನಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆ 78 ಮಿ.ಮೀ ಸುರಿಯಬೇಕಿತ್ತು. ಅಲ್ಲಿ 127 ಮಿ.ಮೀ. ಸುರಿದಿದೆ. ಶೇ 61ರಷ್ಟು ಹೆಚ್ಚಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ 107 ಮಿ.ಮೀ ಮಳೆಯಾಗಬೇಕಿತ್ತು. ಅಲ್ಲಿ 134 ಮಿ.ಮೀ ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ 25ರಷ್ಟು ಅಧಿಕವಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆಯಂತೆ 89 ಮಿ.ಮೀ ಮಳೆಯಾಗಬೇಕಿತ್ತು. 104 ಮಿ.ಮೀ ಸುರಿದು ಶೇ 17ರಷ್ಟು ಹೆಚ್ಚಾಗಿದೆ. ಸೊರಬ ತಾಲ್ಲೂಕಿನಲ್ಲಿ ವಾಡಿಕೆಯಷ್ಟೇ 80 ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 81 ಮಿ.ಮೀ ಮಳೆಯಾಗಬೇಕಿದ್ದು, ಅಲ್ಲಿ 173 ಮಿ.ಮೀ ಸುರಿದಿದೆ. ಶೇ 114ರಷ್ಟು ಹೆಚ್ಚು ಮಳೆ ಸುರಿದಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 1,23,588 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದೆ. ಇದರಲ್ಲಿ ಭತ್ತ ಅತಿಹೆಚ್ಚು ಇದ್ದು, 74,916 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಮೆಕ್ಕೆಜೋಳ 47,000 ಹೆಕ್ಟೇರ್, ಹತ್ತಿ 355, ಕಬ್ಬು 744, ಹೈಬ್ರೀಡ್ ಜೋಳ 20, ರಾಗಿ 360 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಇಪಿ, ಎನ್‌ಪಿಕೆಎಸ್ ಹಾಗೂ ಎಸ್‌ಎಸ್‌ಪಿ ರಸಗೊಬ್ಬರಗಳ ಅಗತ್ಯವಿದೆ. ಮೇ ತಿಂಗಳ ಅಂತ್ಯದವರೆಗೆ 27,181 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಜಿಲ್ಲೆಯಲ್ಲಿ 56,823 ಮೆಟ್ರಿಕ್ ಟನ್ ದಾಸ್ತಾನು ಇದೆ.
ಬಿತ್ತನೆಗೆ ಭತ್ತ, ಮುಸುಕಿನ ಜೋಳ, ತೊಗರಿ, ರಾಗಿ, ಅಲಸಂದಿ ಹಾಗೂ ಶೇಂಗಾ ಬೀಜಕ್ಕೆ ಒಟ್ಟು 24,744 ಕ್ವಿಂಟಲ್‌ಗೆ ಬೇಡಿಕೆ ಇದ್ದು, ಜಿಲ್ಲೆಯಲ್ಲಿ 35,625 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿ ಶಿವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆರೆ ಹೂಳೆತ್ತಲು ಸಣ್ಣ ನೀರಾವರಿ ಇಲಾಖೆಗೆ ಕಳೆದ ವರ್ಷ ಯಾವುದೇ ಅನುದಾನ ಬಾರದ ಕಾರಣ ಆ ಕಾಮಗಾರಿ ಕೈಗೊಂಡಿಲ್ಲ. ಈ ಬಾರಿ ಅನುದಾನ ಕೋರಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.ಪುರುಷೋತ್ತಮ ಸಣ್ಣ ನೀರಾವರಿ ಇಲಾಖೆ ಎಇಇ
ಮುಂಗಾರು ಹಂಗಾಮಿನ ಬಿತ್ತನೆಗೆ ಬೀಜ–ರಸಗೊಬ್ಬರ ಬೇಡಿಕೆಯಷ್ಟು ದಾಸ್ತಾನು ಲಭ್ಯವಿದೆ. ವಿತರಣೆ ಕೂಡ ಆರಂಭಿಸಲಾಗಿದೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು.ಪೂರ್ಣಿಮಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.