ಶಿವಮೊಗ್ಗ: ಕೋವಿಡ್ ಕಾರಣ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೆಲ ಶಾಲೆಗಳಲ್ಲಿ ಕೊಠಡಿ ಸಮಸ್ಯೆ ಎದುರಾಗಿದೆ. 168 ಸರ್ಕಾರಿ ಶಾಲೆಗಳಲ್ಲಿ 356 ಹೊಸ ಕೊಠಡಿಗಳ ಪುನರ್ ನಿರ್ಮಾಣಕ್ಕಾಗಿ ಅನುದಾನ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕೊಠಡಿ ಸಮಸ್ಯೆಯನ್ನು ಬಗೆಹರಿಸಲು ದುರಸ್ತಿಗಾಗಿ ಖಾಲಿ ಬಿಟ್ಟಿದ್ದ ಕೊಠಡಿಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಹಲವು ಶಾಲೆಯಲ್ಲಿ ಬಳಕೆಯಾಗದೇ ಇದ್ದ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಆದರೆ, ಕೆಲ ಕೊಠಡಿಗಳು ಪೂರ್ಣಪ್ರಮಾಣದಲ್ಲಿ ದುಃಸ್ಥಿತಿಯಲ್ಲಿವೆ. ಮಳೆ ಬಂದರೆ ಸೋರುತ್ತವೆ. ಇಂತಹ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 800 ಮಕ್ಕಳು ದಾಖಲಾತಿ ಪಡೆಯಲು ಅವಕಾಶವಿದೆ. ಈ ವರ್ಷ ಸಾವಿರಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ. ಒಂದು ತರಗತಿಗೆ ಎರಡು ವಿಭಾಗಗಳನ್ನು ತೆರೆಯಲಾಗಿದೆ. ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು, ಪಕ್ಕದ ಪ್ರೌಢಶಾಲೆಯ ಹೆಚ್ಚುವರಿ ಇದ್ದ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
‘ಜಿಲ್ಲೆಯಲ್ಲಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು ಸೇರಿ ಜಿಲ್ಲೆಯಲ್ಲಿ 1,841 ಸರ್ಕಾರಿ ಶಾಲೆಗಳಿವೆ. ಒಟ್ಟು ಶಾಲೆಗಳಲ್ಲಿ 8,773 ಕೊಠಡಿಗಳಿವೆ. ಒಟ್ಟು 6,454 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿವೆ. 1,161 ಕೊಠಡಿಗಳು ಭಾಗಶಃ ದುರಸ್ತಿಯ ಅಗತ್ಯವಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಂ. ರಮೇಶ್.
ಜಿಲ್ಲೆಯಲ್ಲಿ 901 ಶಿಕ್ಷಕರ ಹುದ್ದೆಗಳು ಖಾಲಿ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. 901 ಹುದ್ದೆಗಳು ಖಾಲಿ ಉಳಿದಿವೆ. ಪ್ರಾಥಮಿಕ ಶಾಲೆಗಳ 6,383 ಹುದ್ದೆಗಳಲ್ಲಿ 5,482 ಶಿಕ್ಷಕರಉ ಕಾರ್ಯ ನಿರ್ವಹಿಸುತ್ತಿದ್ದಾರೆ. 126 ಮುಖ್ಯ ಶಿಕ್ಷಕರು, 768 ಸಹ ಶಿಕ್ಷಕರು, 7 ವಿಶೇಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
659 ಅತಿಥಿ ಉಪನ್ಯಾಸಕರು: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆ ಸರಿದೂಗಿಸಲು 659 ಅತಿಥಿ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಿಸಿದೆ. ಇದರಲ್ಲಿ ಸೊರಬದಲ್ಲಿ 188, ಸಾಗರದಲ್ಲಿ 146, ಶಿಕಾರಿಪುರದಲ್ಲಿ 51, ತೀರ್ಥಹಳ್ಳಿಯಲ್ಲಿ 98, ಶಿವಮೊಗ್ಗದಲ್ಲಿ 24, ಭದ್ರಾವತಿಯಲ್ಲಿ 25, ಹೊಸನಗರ ತಾಲ್ಲೂಕಿನಲ್ಲಿ 119 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಾದ ಕಾರಣ ಶಾಲೆಗಳಲ್ಲಿ ಲಭ್ಯವಿದ್ದ ಎಲ್ಲ ಕೊಠಡಿಗಳನ್ನು ಬಳಕೆ ಮಾಡಿಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಕೆಲ ಕೊಠಡಿಗಳಲ್ಲಿ ತರಗತಿ ನಡೆಸಲು ಅಸಾಧ್ಯ ಪರಿಸ್ಥಿತಿ ಇರುವುದರಿಂದ ಅಂತಹ ಕೊಠಡಿಗಳನ್ನು ಪುನರ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಎನ್.ಎಂ. ರಮೇಶ್, ಡಿಡಿಪಿಐ
ನಾಲ್ಕು ಶಾಲೆಗಳಲ್ಲಿ ಶೂನ್ಯ ದಾಖಲಾತಿ!
ಕೊರೊನಾ ನಂತರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರು ಖಾಸಗಿ ಶಾಲೆಗಳಿಗೆ ಶುಲ್ಕ ಭರಿಸಲಾಗದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ದಾಖಲು ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳಿಲ್ಲದೆ ಸೊರಗಿದ ಶಾಲೆಗಳಲ್ಲಿ ಈಗ ಮಕ್ಕಳ ಕಲರವ ಕೇಳಿಬರುತ್ತಿದೆ. ಆದರೂ ಕೆಲ ಶಾಲೆಗಳಲ್ಲಿ ಯಾವೊಬ್ಬ ಮಕ್ಕಳೂ ದಾಖಲಾಗದಿರುವುದು ಅಚ್ಚರಿಯ ಸಂಗತಿ.
ಸಾಗರದ ಯಡಜಿಗಲೆ ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗ ತಾಲ್ಲೂಕಿನ ಸಿದ್ದಮಾಜಿ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೀರ್ಥಹಳ್ಳಿಯ ಮೇಗರವಳ್ಳಿ ಸರ್ಕಾರಿ ಕಿರಿಯ, ಮುತ್ತನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.
ಕೋವಿಡ್ ನಂತರ ಹೆಚ್ಚಾದ ಪ್ರವೇಶ
ಕೆ.ಎನ್. ಶ್ರೀಹರ್ಷ
ಭದ್ರಾವತಿ: ‘ಕೊರೊನಾ ನಂತರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಪ್ರವೇಶದ ಪ್ರಮಾಣ ಶೇ 3.50ರಷ್ಟು ಹೆಚ್ಚಳವಾಗಿದೆ’ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಹೇಳಿದರು.
ಕೊರೊನಾ ಕಾಲಘಟ್ಟದಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಸದ್ಯ ಶಾಲಾ ಆರಂಭವಾದ ನಂತರ ನಡೆದಿರುವ ಚಟುವಟಿಕೆಗಳ ಕುರಿತು ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.
‘ತಾಲ್ಲೂಕಿನ ನೆಟ್ಟಕಲ್ಲಟ್ಟಿ ಹಾಗೂ ಮಜ್ಜೀಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊರೊನಾ ಪೂರ್ವದಲ್ಲಿ ಬಾಗಿಲು ಮುಚ್ಚಲಾಗಿತ್ತು. ಆದರೆ, ಈಗ ಶಾಲೆ ನಡೆಯುತ್ತಿದೆ. ಪ್ರವೇಶ ಪ್ರಮಾಣದಲ್ಲೂ ಸಹ ಏರಿಕೆಯಾಗಿದೆ’ ಎಂದರು.
‘ಕೊರೊನಾ ಕಾಲಘಟ್ಟದಲ್ಲಿ ಈ ಎರಡು ಶಾಲೆಯಲ್ಲಿ ಯಾವುದೇ ಹೊಸ ದಾಖಲಾತಿ ಇರಲಿಲ್ಲ. ತದನಂತರದ ಬೆಳವಣಿಗೆಯಲ್ಲಿ ಸದ್ಯ ನೆಟ್ಟಕಲ್ಲಟ್ಟಿ ಶಾಲೆಯಲ್ಲಿ 20ರಿಂದ 22 ವಿದ್ಯಾರ್ಥಿಗಳು ಹಾಗೂ ಮಜ್ಜೀಗೇನಹಳ್ಳಿ ಶಾಲೆಯಲ್ಲಿ 14ರಿಂದ16 ಮಕ್ಕಳು ದಾಖಲಾಗಿದ್ದಾರೆ’ ಎಂದು ವಿವರಿಸಿದರು.
‘ಸದ್ಯ ಯಾವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿಲ್ಲ. ಕೊರೊನಾ ಕಾಲದಲ್ಲೂ ಶಾಲಾ ಶಿಕ್ಷಕರು ನಿರ್ವಹಿಸಿದ ಕೆಲಸದಿಂದ ಪ್ರೇರಿತರಾದ ಗ್ರಾಮೀಣ ಭಾಗದ ಪೋಷಕರು ಮಕ್ಕಳ ದಾಖಲಾತಿ ಹೆಚ್ಚಾಗಲೂ ನೆರವಾಗಿದ್ದಾರೆ’ ಎಂದು ಹೇಳಿದರು.
ಕೊರೊನಾ ಕಾಲದಲ್ಲೂ ಸಹ ಮಕ್ಕಳ ಆಹಾರದ ದಿನಸಿಯನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಪೋಷಕರ ಹಾಗೂ ಮಕ್ಕಳ ವಿಶ್ವಾಸ ಪಡೆಯುವಲ್ಲಿ ಯಶಸ್ಸಾಗಿದ್ದಾರೆ.
ತೀರ್ಥಹಳ್ಳಿ: 150 ಶಿಕ್ಷಕರ ಹುದ್ದೆ ಖಾಲಿ
ನಿರಂಜನ ವಿ.
ತೀರ್ಥಹಳ್ಳಿ: ಕೊವೀಡ್ ಸೋಂಕಿನ ನಂತರದ ಆರ್ಥಿಕ ಸಂಕಷ್ಟದಿಂದ ಸರ್ಕಾರಿ ಶಾಲೆ ಭರ್ತಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಯಂ ಶಿಕ್ಷಕರಿಲ್ಲದೆ ಗ್ರಾಮೀಣ ಪ್ರದೇಶದ ಶಾಲೆಗಳು ಕಳೆಗುಂದಿವೆ.
150ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆಯು 98 ಅತಿಥಿ ಉಪನ್ಯಾಸಕರನ್ನು ನೇಮಿಸಿದೆ. ತಾಲ್ಲೂಕಿನಲ್ಲಿ ಒಟ್ಟು 16,410 ವಿದ್ಯಾರ್ಥಿಗಳಲ್ಲಿ 9,599 ಸರ್ಕಾರಿ, 1,359 ಅನುದಾನಿತ, 4,970 ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಒಟ್ಟು 234 ಸರ್ಕಾರಿ ಶಾಲೆಗಳಲ್ಲಿ 91 ಕಿರಿಯ, 116 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಖಾಸಗಿ ಮತ್ತು ಅನುದಾನಿತ 4 ಪ್ರೌಢಶಾಲೆ, 2 ಹಿರಿಯ ಪ್ರಾಥಮಿಕ ಶಾಲೆ, 3 ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳಿವೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಮುಗಿಯುತ್ತಿದ್ದಂತೆ 133 ಶಿಕ್ಷಕರು ವರ್ಗಾವಣೆ ಪಡೆದಿದ್ದಾರೆ. ಕರ್ತವ್ಯದಿಂದ ಬಿಡುಗಡೆ ಪ್ರಕ್ರಿಯೆ ಆರಂಭವಾದರೆ ಶಿಕ್ಷಕರ ಕೊರತೆ ದ್ವಿಗುಣಗೊಳ್ಳಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯ ತಲೆದೋರಿದೆ.
ಶೂನ್ಯ ಶಿಕ್ಷಕರು:ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಕೂಡ 13 ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಲಾಖೆಯಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಚಂಗಾರು ಮತ್ತು ಹೊಳೆಕೊಪ್ಪ ಶಿಕ್ಷಕರ ವರ್ಗಾವಣೆಯಾಗಿದೆ. ಹಾಗಾಗಿ, 2 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗುತ್ತದೆ.
ಮಕ್ಕಳಿಲ್ಲದೆ ಶಾಲೆಗೆ ಬೀಗ: ‘ಕೋವಿಡ್ ನಂತರದಲ್ಲಿ ಮೇಗರವಳ್ಳಿ ಹಾಗೂ ಮುತ್ತಾನ ಕಿರಿಯ ಪ್ರಾಥಮಿಕ ಪಾಠ ಶಾಲೆಗಳು ಮಕ್ಕಳಿಲ್ಲದೆ ಬೀಗ ಹಾಕಲಾಗಿದೆ. ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಅಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಆ ಕಾರಣಕ್ಕೆ ಕಿರಿಯ ಪ್ರಾಥಮಿಕ ಶಾಲೆಗಳು ಬಂದ್ ಆಗಿದ್ದರೂ ಇಂಗ್ಲಿಷ್ ಮಾಧ್ಯಮ ಶಾಲೆಗೆ ದಾಖಲಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಕುಮಾರ್ ಹೇಳುತ್ತಾರೆ.
ಪ್ರೌಢಶಾಲೆಗಿಲ್ಲ ಇಂಗ್ಲಿಷ್ ಶಿಕ್ಷಕರ ಭಾಗ್ಯ: ಪ್ರೌಢಶಾಲೆಗಲ್ಲಿ 24 ಶಿಕ್ಷಕರ ಹುದ್ದೆ ಖಾಲಿ ಇದೆ. ಬಹುತೇಕ ಇಂಗ್ಲಿಷ್ ಶಿಕ್ಷಕರ ಕೊರತೆಯಿಂದ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ. 16 ಇಂಗ್ಲಿಷ್, 7 ಕನ್ನಡ, 1 ಕಲಾ ಕನ್ನಡ ಶಿಕ್ಷಕರ ಅಗತ್ಯ ಇದೆ. ಖಾಲಿ ಇರುವ ಶಿಕ್ಷಕರ ಜಾಗ ಭರ್ತಿ ಮಾಡಲು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
ಮೂಲ ಸೌಕರ್ಯ ಲೆಕ್ಕಕ್ಕಿಲ್ಲ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಲವು ಸಮಸ್ಯೆಗಳಿವೆ. ಬಹುತೇಕ ಶಾಲೆಗಲ್ಲಿ ವ್ಯವಸ್ಥಿತ ಮೈದಾನ ಇಲ್ಲ. ದಾನಿಗಳಿಂದ ಶಾಲೆಗೆ ಕಂಪ್ಯೂಟರ್, ಪೀಠೋಪಕರಣ ಕೊಡುಗೆ ನೀಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಬೇಡಿಕೆ ಇದ್ದ ಪ್ರಮಾಣ ಕ್ಷೀಣಿಸುತ್ತಿದೆ. ತಾಂತ್ರಿಕ ಶಿಕ್ಷಣ ನೀಡುವ ಶಿಕ್ಷಕರ ಸಂಖ್ಯೆ ವಿರಳವಾಗಿದೆ. ಶೌಚಾಲಯ, ಕ್ರೀಡಾ ಸಾಮಾಗ್ರಿ, ಸಾಂಸ್ಕೃತಿ ಶಿಕ್ಷಣಗಳ ಕೊರತೆ ಎದ್ದು ತೋರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.