ADVERTISEMENT

ನೋಡುಗರ ಸೆಳೆಯುತ್ತಿದೆ ಮಲೆನಾಡಿನ ‘ಗೌರಿ ಹೂವು’

ಸುಕುಮಾರ್ ಮುನಿಯಾಲ್
Published 15 ಸೆಪ್ಟೆಂಬರ್ 2023, 6:39 IST
Last Updated 15 ಸೆಪ್ಟೆಂಬರ್ 2023, 6:39 IST
ತುಮರಿಯ ಶರಾವತಿ ಕಣಿವೆಯಲ್ಲಿ ಸಮೃದ್ಧವಾಗಿ ಬೆಳೆದು ನೋಡುಗರನ್ನು ಆಕರ್ಷಿಸುತ್ತಿರುವ ಗೌರಿ ಹೂವು  – ಪ್ರಜಾವಾಣಿ ಚಿತ್ರ/ ಸುಕುಮಾರ ಎಂ.
ತುಮರಿಯ ಶರಾವತಿ ಕಣಿವೆಯಲ್ಲಿ ಸಮೃದ್ಧವಾಗಿ ಬೆಳೆದು ನೋಡುಗರನ್ನು ಆಕರ್ಷಿಸುತ್ತಿರುವ ಗೌರಿ ಹೂವು  – ಪ್ರಜಾವಾಣಿ ಚಿತ್ರ/ ಸುಕುಮಾರ ಎಂ.   

ತುಮರಿ: ಶರಾವತಿ ಹಿನ್ನೀರು ಪ್ರದೇಶದಲ್ಲಿ ಗಣೇಶ ಚತುರ್ಥಿ ವೇಳೆಗೆ ವರ್ಷಕೊಮ್ಮೆ ಅರಳುವ ‘ಗೌರಿ ಹೂವು’ ನೋಡುಗರ ಕಣ್ಮನ ಸೆಳೆಯುತ್ತಿದೆ.

ಪಶ್ಚಿಮ ಘಟ್ಟದ ದಟ್ಟ ಕಾನನದ ಪೊದೆಯಲ್ಲಿ ವ್ಯಾಪಕವಾಗಿ ಅರಳಿರುವ ಕಡು ಕೇಸರಿ ಬಣ್ಣ ಹಾಗೂ ವಿಶೇಷ ಆಕಾರದ ‘ಗೌರಿ ಹೂವು’ ಚೌತಿಯ ಮಂಗಳ ಗೌರಿಯ ಮುಡಿಗೇರಲು ಸಜ್ಜಾಗಿದೆ.

ಮಲೆನಾಡಿನಲ್ಲಿ ದೀವರ ಸಮುದಾಯದ ಸಂಸ್ಕೃತಿಯಲ್ಲಿ ಗೌರಿ ಪೂಜೆಗೆ ಈ ಹೂವು ಇರಲೇಬೇಕು. ಚೌತಿ ಹಬ್ಬದಲ್ಲಿ ಗಣೇಶನಿಗಿಂತ ಮುಂಚಿತವಾಗಿ ಗೌರಿ ಪೂಜೆ ಮಾಡುವುದು ಸಂಪ್ರದಾಯ. ಹೆಣ್ಣುಮಕ್ಕಳು ಗೌರಿಯನ್ನು ಕಳಶ, ಮೂರ್ತಿ ರೂಪದಲ್ಲಿ ಆರಾಧಿಸುತ್ತಾರೆ. ಗಣೇಶನ ಹಬ್ಬದಲ್ಲಿ ಎಲ್ಲೆಲ್ಲೂ ಫಲಗಳ ರಾಶಿ. ಆದರೆ, ಶರಾವತಿ ಹಿನ್ನೀರಿನ ಜನರ ಕಣ್ಣು ಮಾತ್ರ ಗೌರಿ ಹೂವನ್ನು ಹುಡುಕುತ್ತದೆ.

ADVERTISEMENT

ಕುಟುಂಬದ ಮಹಿಳೆಯರಿಗೆ ತರಕಾರಿಗಳನ್ನು ಸಂಗ್ರಹಿಸುವ ಕಾರ್ಯ ವಹಿಸಲಾಗುತ್ತದೆ. ಆದರೆ, ಅಡವಿಯಲ್ಲಿ ಬೆಳೆಯುವ ಗೌರಿ ಹೂವನ್ನು ಮಾತ್ರ ಹಿರಿಯರೇ ಸಂಗ್ರಹಿಸುತ್ತಾರೆ. ಅದು ಎತ್ತರಕ್ಕೆ ಬೆಳೆಯುವ ಬಳ್ಳಿಯ ಗಿಡವಾಗಿದ್ದು, ಸುಲಭದಲ್ಲಿ ಸಿಗುವುದಿಲ್ಲ. ಭೂಮಿಯ ಆಳದಲ್ಲಿ ಗೆಡ್ಡೆಯ ರೂಪದಲ್ಲಿ ಸುದೀರ್ಘಕಾಲ ಜೀವ ಹಿಡಿದುಕೊಂಡ ಈ ಅಪರೂಪದ ಸಸ್ಯ ಪ್ರಬೇಧವು, ಬಾದ್ರಪದ ಮಾಡದಲ್ಲಿ ಬಳ್ಳಿಯಂತೆ ಹಬ್ಬಿ ಸುಂದರ ಹೂಗಳನ್ನು ಮುಡಿಗೇರಿಸಿಕೊಳ್ಳುತ್ತದೆ.

10ರಿಂದ 20 ಅಡಿಗಳಷ್ಟು ಎತ್ತರಕ್ಕೆ ಬೆಳೆದು, ಮುಳ್ಳು ಪೊದೆಗಳಲ್ಲಿ ಹಬ್ಬಿ ತನ್ನ ರಕ್ಷಣೆ ಮಾಡಿಕೊಳ್ಳುತ್ತದೆ. 2ರಿಂದ 3 ಅಂಗುಲದ ಮೊನಚಾದ, ಭರ್ಜಿಯಾಕಾರದ ಎಲೆಗಳನ್ನು ಹೊಂದಿದೆ. ಎಲೆಗಳ ಬುಡದಲ್ಲಿ ಟಿಸಿಲು ಒಡೆದು ಆರು ದಳಗಳ ಸುಂದರ ಹೂ ಅರಳುತ್ತದೆ. ಆರು ವಕ್ರ ದಳಗಳ ಪುಷ್ಪವು ನೋಡುಗರನ್ನು ಸೆಳೆಯುತ್ತದೆ. ಪುಷ್ಪ ದಳದ ತಳಭಾಗದಲ್ಲಿ ಎಸಳುಗಳು ಒಂದರಂತೆ ಮೂಡುವ ಸಲಾಕೆಗಳು ಹೂವಿನ ಅಂದ ಹೆಚ್ಚಿಸುತ್ತದೆ. ಪ್ರಾರಂಭದಲ್ಲಿ ಮೊಗ್ಗು ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಪೂರ್ಣವಾಗಿ ಅರಳಿದ ಹೂವು ಕಡು ಕೇಸರಿ ಬಣ್ಣಕ್ಕೆ ತಿರುಗುತ್ತದೆ.

ತುಮರಿಯ ಶರಾವತಿ ಕಣಿವೆಯಲ್ಲಿ ಸಮೃದ್ಧವಾಗಿ ಬೆಳೆದು ನೋಡುಗರನ್ನು ಆಕರ್ಷಿಸುತ್ತಿರುವ ಗೌರಿ ಹೂವು

ಗೌರಿ ಹೂವಿನ ವೈಜ್ಞಾನಿಕ ಹೆಸರು ‘ಗ್ಲೋರಿಯಸ್ ಸುಪರ್ಬಾ’. ಈ ಹೂವಿನ ದಳಗಳು ಗಾಳಿಯಲ್ಲಿ ತೊಯ್ದಾಡುವ ಬೆಂಕಿಯ ಕೆನ್ನಾಲಗೆಯಂತೆ ಕಾಣುವುದರಿಂದ ಇದಕ್ಕೆ ‘ಅಗ್ನಿಶಿಖೆ’ ಎಂಬ ಹೆಸರೂ ಇದೆ. ಹುಲಿಯ ಉಗುರುಗಳನ್ನು ಹೋಲುವುದರಿಂದ ‘ಹುಲಿಪಂಜ’ ಎಂದೂ ಕರೆಯಲಾಗುತ್ತದೆ.

ಆಯುರ್ವೇದ ಪದ್ಧತಿಯಲ್ಲಿ ಗೌರಿ ಹೂವಿಗೆ ವಿಶೇಷ ಸ್ಥಾನವಿದೆ. ಇದರ ಬಳ್ಳಿ, ಗೆಡ್ಡೆಯಿಂದ ಚರ್ಮವ್ಯಾದಿ, ಬಾವು, ಹುಣ್ಣು, ಮೂಲವ್ಯಾಸಿ, ಕಫ ಸಂಬಂಧಿ ಕಾಯಿಲೆಗಳಿಗೆ ಮನೆಯಲ್ಲೇ ಔಷಧ ತಯಾರಿಸಲಾಗುತ್ತದೆ.

ತುಮರಿಯ ಶರಾವತಿ ಕಣಿವೆಯಲ್ಲಿ ಸಮೃದ್ಧವಾಗಿ ಬೆಳೆದು ನೋಡುಗರನ್ನು ಆಕರ್ಷಿಸುತ್ತಿರುವ ಗೌರಿ ಹೂವು

‘ನಾವು ಬಾಲ್ಯದಲ್ಲಿ ಕಾಡಿಗೆ ತೆರಳಿ ಬುಟ್ಟಿ ತುಂಬಾ ಗೌರಿ ಹೂವು ಕೊಯ್ದುಕೊಂಡು ಬರುತ್ತಿದ್ದೆವು. ನಮ್ಮ ಪೂರ್ವಜರು ಕೆಮ್ಮು, ಚರ್ಮರೋಗಗಳಿಗೆ ಔಷಧವಾಗಿ ಗೌರಿ ಹೂವಿನ ಗಿಡವನ್ನು ಬಳಸುತ್ತಿದ್ದರು. ಆದರೆ, ಇಂದು ಇಂತಹ ವಾತಾವರಣ ಇಲ್ಲ. ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪ, ಗಣಿಗಾರಿಕೆ, ಕಾಳ್ಗಿಚ್ಚಿನಿಂದ ಗೌರಿ ಹೂವಿನಂತ ಅನೇಕ ಸಸ್ಯ ಪ್ರಬೇಧಗಳು ನಶಿಸಿಹೊಗುತ್ತಿದ್ದು, ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ. ಯುವ ಪೀಳೀಗೆ ಇದರ ರಕ್ಷಣೆಗೆ ಮುಂದಾಗಬೇಕು’ ಎಂದು ಕಿರುವಾಸೆ ಗ್ರಾಮದ ಹಿರಿಯರಾದ ಪುಟ್ಟಮ್ಮ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.