ADVERTISEMENT

ಅರಲಗೋಡು: ನಾಳೆ ಜಿಲ್ಲಾಡಳಿತ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 15:18 IST
Last Updated 28 ಜನವರಿ 2019, 15:18 IST

ಶಿವಮೊಗ್ಗ: ಮಂಗನ ಕಾಯಿಲೆಗೆ ತತ್ತರಿಸಿರುವ ಸಾಗರ ತಾಲ್ಲೂಕು ಅರಲಗೋಡು ಗ್ರಾಮದಲ್ಲಿ ಜ. 30ರಂದು ಜಿಲ್ಲಾಡಳಿತ ಗ್ರಾಮವಾಸ್ತವ್ಯ ಹಮ್ಮಿಕೊಂಡಿದೆ.

ಸಹ್ಯಾದ್ರಿ ಉತ್ಸವದ ಸಂಭ್ರಮದಲ್ಲಿ ಮುಳುಗಿರುವ ಜಿಲ್ಲಾಡಳಿತ, ಅರಲಗೋಡು ಸಾವಿನ ನೋವಿಗೆ ಸ್ಪಂದಿಸಿಲ್ಲ. ಮನೋಸ್ಥೈರ್ಯ ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಿಲ್ಲ ಎಂಬ ಟೀಕೆಗೆ ಉತ್ತರ ನೀಡಲು ಇಂತಹ ದಿಟ್ಟ ನಿರ್ಧಾರ ಕೈಗೊಂಡಿದೆ.

ಅಂದು ಸಂಜೆ 6ಕ್ಕೆ ಆಯ್ದ ಅಧಿಕಾರಿಗಳ ಜತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆಳಲಿರುವ ಜಿಲ್ಲಾಧಿಕಾರಿ ಜೆ.ಎ. ದಯಾನಂದ ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಲಗುತ್ತಿದ್ದಾರೆ. ಅರಣ್ಯ, ಆರೋಗ್ಯ, ಶಿಕ್ಷಣ, ಪಶುಪಾಲನಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಬ್ಬಂದಿ ತೆರಳುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಡಿಸೆಂಬರ್ ಆರಂಭದಲ್ಲೇ ಕಾಣಿಸಿಕೊಂಡಿದ್ದ ಮಂಗನಕಾಯಿಲೆ ಅರಲಗೋಡು, ಇಟ್ಟಿಗೆ, ಸಂಪ, ನಂದೋಡಿ, ಬಣ್ಣುಮನೆ, ವಾಟೆಹಕ್ಲು, ಕಂಚಿಕೈ, ಮಂಡಳ್ಳಿ, ಹೊಟ್ಟೆಸರ, ಮರಬೀಡು, ಅಳಗೋಡು ಸುತ್ತ ದಾಳಿ ಇಟ್ಟಿತ್ತು. ಅರಲಗೋಡು ಪಂಚಾಯಿತಿ ವ್ಯಾಪ್ತಿಯಲ್ಲೇ 8 ಜನರು ಅಧಿಕೃತವಾಗಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಸಾಗರ ತಾಲ್ಲೂಕಿನಲ್ಲೇ 92 ಜನರಿಗೆ ಕಾಯಿಲೆ ಸೋಂಕು ತಗುಲಿತ್ತು.

ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಮೊದಲ ಬಾರಿ ಸಾಗರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಅರಲಗೋಡಿಗೆ ಹೋಗಲು ಹಿಂದೇಟು ಹಾಕಿದ್ದರು. ಗಣರಾಜ್ಯೋತ್ಸವಕ್ಕೆ ಬಂದವರು ಅಲ್ಲಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಈಗ ಜಿಲ್ಲಾಡಳಿತ ಅದೇ ಗ್ರಾಮ ಆಯ್ಕೆ ಮಾಡಿಕೊಳ್ಳುವ ಮೂಲಕ ಸ್ಥಳೀಯಲ್ಲಿ ಭರವಸೆ ಮೂಡಿಸಿದೆ.

‘ಅಗತ್ಯ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಬರುತ್ತಿದ್ದಾರೆ. ಅರಲಗೋಡು ಬಿಟ್ಟು ಬೇರೆ ಯಾವ ಕಾರ್ಯಕ್ರಮಗಳನ್ನೂ ಇಟ್ಟುಕೊಂಡಿಲ್ಲ. ಅಲ್ಲೇ ಇದ್ದು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತೇವೆ. ಕಾಯಿಲೆ ನಿಯಂತ್ರಣಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.