ADVERTISEMENT

ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ: ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:18 IST
Last Updated 18 ಜೂನ್ 2024, 14:18 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಗ್ಯಾರಂಟಿ ಯೋಜನೆ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹ 3, ಡೀಸೆಲ್ ಬೆಲೆ ₹ 3.50 ಹೆಚ್ಚಿಸಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇವುಗಳ ಬೆಲೆ ಕಡಿಮೆಯೇ ಇದೆ. ಬೆಲೆ ಏರಿಕೆಯಾದ ತಕ್ಷಣ ಅದರ ಜವಾಬ್ದಾರಿಯನ್ನು ಗ್ಯಾರಂಟಿ ಯೋಜನೆಗಳ ತಲೆಗೆ ಕಟ್ಟುವುದು ಬಿಜೆಪಿಗೆ ಹವ್ಯಾಸವಾಗಿಬಿಟ್ಟಿದೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ಈ ಹಿಂದೆ ಅನೇಕ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದಾಗ ಬಾಯಿ ಮುಚ್ಚಿ ಕುಳಿತಿದ್ದ ಬಿಜೆಪಿ ಮುಖಂಡರು ಈಗ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರದಿಂದ ಬರಗಾಲ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರು ಪ್ರತಿಭಟನೆ ಮಾಡಲಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.