ಭದ್ರಾವತಿ: ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಇರುವ ಭೂತನಗುಡಿ ಬಡಾವಣೆಗೆ ಸೇರಿದ ಚರಂಡಿಗಳು ಕಸದಿಂದ ತುಂಬಿಕೊಂಡು, ಚರಂಡಿಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ ವಿದ್ಯಮಾನ ಎಂಬಂತಾಗಿದೆ. ಇರದಿಂದ ಕ್ರಿಮಿಕೀಟಗಳು ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ ಎಂಬ ಭೀತಿಯಲ್ಲಿ ಸ್ಥಳೀಯರು ಇದ್ದಾರೆ. ಈ ವಿಷಯವಾಗಿ ನಗರಸಭೆಗೆ ದೂರು ನೀಡಿದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ.
ಭೂತನಗುಡಿ ವೃತ್ತದ ಬಳಿ ಜಂಕ್ಷನ್ ಮಾದರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಕ್‌ನಿಂದ ಚರಂಡಿ ನೀರು ಮುಂದಕ್ಕೆ ಸಾಗದೆ ಕೊಚ್ಚೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ, ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ನೀರು ಸ್ಥಗಿತಗೊಂಡು ದುರ್ವಾಸನೆ ಬೀರುತ್ತಿದೆ. ಹೆಸರಿಗೆ ಮಾತ್ರ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಲ್ಯಾಬ್‌ಗಳನ್ನು ಅಳವಡಿಸದ ಕಾರಣ, ಚರಂಡಿಗಳಲ್ಲಿ ಅಲ್ಲಲ್ಲಿ ಮಣ್ಣು, ಕಲ್ಲು, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಳ್ಳುತ್ತಿದೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಬಡಾವಣೆಯ ಇತರೆ ಭಾಗಗಳಿಂದ ಹರಿದುಬರುವ ನೀರು ಇಲ್ಲಿ ನಿಲ್ಲದೇ ಸರಾಗವಾಗಿ ಹರಿದುಹೋಗಬೇಕಿದೆ. ಚರಂಡಿ ನಿರ್ವಹಣೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರಾದ ಅರ್ಚನಾ ಮನವಿ ಮಾಡಿದರು.
ಇತ್ತೀಚೆಗೆ ಕಾಟಾಚಾರಕ್ಕೆ ಡಕ್ ಅಳವಡಿಸಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಚರಂಡಿ ನೀರು ಮುಂದಕ್ಕೆ ಹರಿಯಾದಂತಾಗಿದೆ ಎಂದು ಸ್ಥಳೀಯರಾದ ನಾಸೀರ್ ತಿಳಿಸಿದರು.
ಅವೈಜ್ಞಾನಿಕ ಕಾಮಗಾರಿ ಮತ್ತು ಚರಂಡಿಗಳಿಗೆ ಸ್ಲ್ಯಾಬ್‌ಗಳಿಲ್ಲದ ಪರಿಣಾಮ, ಹಲವು ಬಾರಿ ಚರಂಡಿಯಲ್ಲಿನ ತ್ಯಾಜ್ಯ ತೆಗೆದರೂ ಅವು ಪುನಾ ತುಂಬುಕೊಳ್ಳುತ್ತಿವೆ. ಪದೇ ಪದೇ ಚರಂಡಿ ಸ್ವಚ್ಛಗೊಳಿಸಲು ಬೇಸರವಾಗಿದೆ ಎಂದು ಪೌರಕಾರ್ಮಿಕರೊಬ್ಬರು ತಿಳಿಸಿದರು.
ಯಾರು ಏನಂದರು?
ನೂತನ ಚರಂಡಿ ಕಾಮಗಾರಿಯಲ್ಲಿ ದೋಷ ಕಂಡುಬಂದಲ್ಲಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಮುಂದಿನ ದಿನಗಳಲ್ಲಿ ಚರಂಡಿಗಳಿಗೆ ಮೇಲ್ಪದರ ಅಳವಡಿಸಲಾಗುವುದು. ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು– ಪ್ರಕಾಶ್ ಎಂ. ಚನ್ನಪ್ಪನವರ್ ನಗರಸಭೆ ಆಯುಕ್ತ
ಒಳರಸ್ತೆ ಹಾಗೂ ಒಳಚರಂಡಿಗಳ ದುರಸ್ಥಿಗಾಗಿ ನಗರೋತ್ಥಾನ ಯೋಜನೆಯಡಿ ₹21 ಕೋಟಿ ಮಂಜೂರಾಗಿದ್ದು ಮುಂದಿನ ತಿಂಗಳಲ್ಲಿ ಕಾಮಗಾರಿ ನಡೆಸಲಾಗುವುದು. ಪೌರಕಾರ್ಮಿಕರ ಕೊರತೆ ಇರುವುದರಿಂದ ದೈನಂದಿನ ಚರಂಡಿ ಸ್ವಚ್ಛತೆಗೆ ತೊಂದರೆ ಆಗುತ್ತಿದೆ – ಪ್ರಸಾದ್ ನಗರಸಭೆಯ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.