ADVERTISEMENT

Haveri Accident: ಎಮ್ಮೇಹಟ್ಟಿಯಲ್ಲಿ ಮಡುಗಟ್ಟಿದ ಮೌನ

ಮನೆ ದೇವರ ದರ್ಶನಕ್ಕೆ ಹೋದವರು ಮರಳುವಾಗ ಜವರಾಯನ ಕರೆಗೆ ಓಗೊಟ್ಟರು

ವೆಂಕಟೇಶ ಜಿ.ಎಚ್.
Published 29 ಜೂನ್ 2024, 4:53 IST
Last Updated 29 ಜೂನ್ 2024, 4:53 IST
<div class="paragraphs"><p>ಎಮ್ಮೇಹಟ್ಟಿಯ ನಾಗೇಶ್‌ರಾವ್‌ ಮನೆ ಎದುರು ಅಳಿಯ ಸುರೇಶ್ ಅಳುತ್ತಾ ಕುಳಿತಿದ್ದರು</p></div>

ಎಮ್ಮೇಹಟ್ಟಿಯ ನಾಗೇಶ್‌ರಾವ್‌ ಮನೆ ಎದುರು ಅಳಿಯ ಸುರೇಶ್ ಅಳುತ್ತಾ ಕುಳಿತಿದ್ದರು

   

ಶಿವಮೊಗ್ಗ: ಹಾವೇರಿ ಬಳಿ ಸಂಭವಿಸಿದ ಅಪಘಾತದಲ್ಲಿತಮ್ಮೂರಿನ 13 ಜನ ಮೃತಪಟ್ಟ ಸುದ್ದಿ ತಿಳಿದು ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿ ಗ್ರಾಮದಲ್ಲಿ ಮೌನ ಆವರಿಸಿತ್ತು.

ಗ್ರಾಮದ ನಿವಾಸಿ, ನೀರಾವರಿ ಇಲಾಖೆಯಲ್ಲಿ ನೀರಗಂಟಿಯಾಗಿರುವ ನಾಗೇಶರಾವ್ ಅವರ ಪುತ್ರ ಆದರ್ಶ ಟೆಂಪೊ ಟ್ರಾವೆಲರ್‌ (ಟಿ.ಟಿ) ವಾಹನ ಖರೀದಿಸಿದ್ದು, ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೇರಿ 17 ಜನರನ್ನು ಮನೆ ದೇವರಾದ ಬೆಳಗಾವಿ ಜಿಲ್ಲೆ ಚಿಂಚಲಿಯ ಮಾಯಮ್ಮನ ದರ್ಶನಕ್ಕೆ ಕರೆದೊಯ್ದಿದ್ದರು. 

ADVERTISEMENT

ಶುಕ್ರವಾರ ಮನೆ ದೇವರಿಗೆ ಪಡಲಿಗೆ ತುಂಬಿಸಿ, ಎಡೆ ಮಾಡಿ, ಸಂಬಂಧಿಕರಿಗೆ ಹೋಳಿಗೆ ಊಟ ಹಾಕಿಸಿ ದೇವಿಯನ್ನು ಬೀಳ್ಕೊಡುವ ಧಾವಂತದಲ್ಲಿ ಊರಿಗೆ ಮರಳುತ್ತಿದ್ದವರು ದುರಂತ ಅಂತ್ಯ ಕಂಡಿದ್ದಾರೆ. ನಸುಕಿನಲ್ಲಿ ಬಂದ ಸುದ್ದಿ ಊರನ್ನೇ ದುಃಖದ ಮಡುವಾಗಿಸಿತ್ತು.

ಸೆಕೆಂಡ್‌ ಹ್ಯಾಂಡ್‌ ವಾಹನ: ನಾಗೇಶರಾವ್ ಪತ್ನಿ ವಿಶಾಲಾಕ್ಷಿ ಆಶಾ ಕಾರ್ಯಕರ್ತೆ. ಪುತ್ರ ಆದರ್ಶ ಚಾಲಕ. ಪುತ್ರಿ ಅರ್ಪಿತಾ ಅಂಗವಿಕಲೆ. ಊರಿನಲ್ಲಿ 12 ಗುಂಟೆ ಜಾಗ, ಮನೆ ಬಿಟ್ಟರೆ ಕುಟುಂಬಕ್ಕೆ ಬೇರೆ ಆಸ್ತಿ ಇಲ್ಲ. ಪುತ್ರ 20 ದಿನದ ಹಿಂದೆ ಸೆಕೆಂಡ್ ಹ್ಯಾಂಡ್ ಟಿ.ಟಿ ಖರೀದಿಸಿದ್ದ. ಆ ಸಂಭ್ರಮಕ್ಕೆ ಕುಟುಂಬದವರು ದೇವರ ದರ್ಶನಕ್ಕೆ ತೆರಳಿದ್ದರು.

‘ಅಳಿಯ ಅನುಭವಿ ಚಾಲಕ. ಏಕೆ ಅವಘಡ ಸಂಭವಿಸಿತೋ ಗೊತ್ತಾಗುತ್ತಿಲ್ಲ. ನಮ್ಮನ್ನೂ ಕರೆದಿದ್ದರು. ಪತ್ನಿಗೆ ಹುಷಾರಿಲ್ಲದ್ದರಿಂದ ನಾನು ಹೋಗಲಿಲ್ಲ. ಅಮ್ಮನನ್ನು (ಸುಭದ್ರಮ್ಮ) ಕಳಿಸಿದ್ದೆವು. ಆಕೆಯೂ ತೀರಿಕೊಂಡಿದ್ದಾಳೆ’ ಎಂದು ಆದರ್ಶನ ಸೋದರ ಮಾವ ಸುರೇಶ ಅಳುತ್ತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮನೆಯಲ್ಲಿ ಅಕ್ಕ, ಮಾವ (ವಿಶಾಲಾಕ್ಷಿ, ನಾಗೇಶರಾವ್) ಯಾರೂ ಇಲ್ಲ. ಒಳಗೆ ಹೋಗಲು ಮನಸ್ಸು ಬರುತ್ತಿಲ್ಲ. ಸೊಸೆ ಅರ್ಪಿತಾ ಅಂಗವಿಕಲೆ. ಆಕೆಗೆ ಯಾರು ದಿಕ್ಕು?’ ಎಂದು ಸುರೇಶ ಬಿಕ್ಕಳಿಸಿದರು. ‘ಊರಲ್ಲಿ ಯಾರೇ ಸತ್ತರೂ, ಕಾಯಿಲೆ–ಕಸಾಲೆಗೆ, ಹೆರಿಗೆ–ಬಾಣಂತನಕ್ಕೆ ಅತ್ತೆ (ವಿಶಾಲಮ್ಮ) ನೆರವಿಗೆ ಬರುತ್ತಿದ್ದರು. ಅವರೇ ಇಲ್ಲ ಅನ್ನೋದನ್ನು ನಂಬಿಲಾಗುತ್ತಿಲ್ಲ’ ಎಂದು ಅವರ ಅಣ್ಣನ ಮಗ ಶಂಕರ ನೊಂದು ನುಡಿದರು.

‘ಮನೆ ದೇವರಿಗೆ ಹೋಗಿಬಂದವರು ದೇವಿಯನ್ನು ವಾಪಸು ಕಳುಹಿಸುವ ಸಂಪ್ರದಾಯ ಊರಲ್ಲಿದೆ. ಶುಕ್ರವಾರ ದೇವಿಯ ದಿನ. ಬಹುಶಃ ಅದೇ ಕಾರಣಕ್ಕೆ ರಾತ್ರಿಯೇ ವಾಪಸು ಹೊರಟಿದ್ದಾರೆ’ ಎಂದು ಎಮ್ಮೇಹಟ್ಟಿಯ ದೇವಸ್ಥಾನದ ಪೂಜಾರಿ ನಾಗರಾಜ ಹೇಳಿದರು.

ಸಮೀಪದ ಡಿ.ಬಿ.ಹಳ್ಳಿ ಕಾಲೊನಿ ನಿವಾಸಿ ರಂಗಸ್ವಾಮಿ ಅವರ ಪತ್ನಿ ಮಂಜುಳಾಬಾಯಿ, ಪುತ್ರ ಅರುಣ್‌ ಕುಮಾರ್, ಮಗಳು ಅಂಜಲಿ ಆಕೆಯ ಮಕ್ಕಳಾದ ಆರ್ಯ, ನಂದನ,  ನಾಗೇಶ ರಾವ್‌ ಅವರ ತಮ್ಮ, ಪರಶುರಾಮ್–ರೂಪಾಬಾಯಿ ದಂಪತಿ ಮೃತಪಟ್ಟಿ ದ್ದಾರೆ. ಅರುಣ್‌ ಪತ್ನಿ 3 ತಿಂಗಳ ಹಿಂದಷ್ಟೇ ಗಂಡು ಶಿಶುವಿಗೆ ಜನ್ಮನೀಡಿದ್ದಾರೆ.  

ಶಾಲೆಗೆ ರಜೆ ಘೋಷಣೆ: ದುರಂತ ಸುದ್ದಿ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಸಂಜೆ ಶಾಲೆ ಮೈದಾನದಲ್ಲಿ ಶವಗಳನ್ನು ಇಡಲಾಗಿತ್ತು. ಅಲ್ಲಿಂದಲೇ ಸ್ಮಶಾನಕ್ಕೆ ಕೊಂಡೊಯ್ದು ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಮೃತ ಮಾನಸಾ ಅಂಧ ಕ್ರೀಡಾಪಟು 

ಅಪಘಾತದಲ್ಲಿ ಮೃತಪಟ್ಟಿರುವ ಎಮ್ಮೇಹಟ್ಟಿಯ ನಿವಾಸಿ ಎಸ್‌. ಮಾನಸಾ ರಾಜ್ಯ ಅಂಧರ ಫುಟ್ಬಾಲ್ ತಂಡದ ಆಟಗಾರ್ತಿ. ಗ್ರಾಮದ ಶರಣಪ್ಪ ಹಾಗೂ ಭಾಗ್ಯ ದಂಪತಿ ಪುತ್ರಿ. ಅಪಘಾತದಲ್ಲಿ ಭಾಗ್ಯ ಕೂಡಾ ಮೃತಪಟ್ಟಿದ್ದಾರೆ.

ಮಾನಸಾ ಹುಟ್ಟಿದಾಗಲೇ ದೃಷ್ಟಿ ಕಳೆದುಕೊಂಡಿದ್ದರು. ಬೆಂಗಳೂರಿನಲ್ಲಿ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದರು.

‘ಆಕೆಗೆ ಐಎಎಸ್ ಅಧಿಕಾರಿ ಆಗುವ ಕನಸಿತ್ತು. ಅಂಧರ ಫುಟ್ಬಾಲ್ ತಂಡದ ನಾಯಕಿ ಆಗಿದ್ದಳು. 2022ರಲ್ಲಿ ಕೊಚ್ಚಿಯಲ್ಲಿ ಜಪಾನ್ ವಿರುದ್ಧ ನಡೆದಿದ್ದ  ಪಂದ್ಯಲ್ಲಿ ಭಾರತ ತಂಡದಲ್ಲಿ ಆಡಿದ್ದಳು. ರಜೆಗೆ ಊರಿಗೆ ಬಂದಿದ್ದಳು. ಅಮ್ಮನ ಜೊತೆ ದೇವರ ದರ್ಶನಕ್ಕೆ ಹೋಗಿದ್ದಳು. ವಾಪಸು ಬರಲಿಲ್ಲ’ ಎಂದು ಅಕ್ಕ ಮಹಾಲಕ್ಷ್ಮಿ ನೋವು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.