ಶಿವಮೊಗ್ಗ: ‘ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್‌ಎಲ್) ಪುನಶ್ಚೇತನದ ವಿಚಾರವಾಗಿ ಕಾರ್ಖಾನೆಗೆ ಭೇಟಿ ನೀಡಿ ಸಾಧಕ–ಬಾಧಕಗಳನ್ನು ಪರಿಶೀಲಿಸಿರುವೆ. ಅಧಿಕಾರಿಗಳಿಂದ ಮಾಹಿತಿಯನ್ನೂ ಕಲೆಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಐಎಸ್‌ಎಲ್‌ಗೆ ಭಾನುವಾರ ಭೇಟಿ ನೀಡಿ ಮೂರು ಗಂಟೆಗಳ ಕಾಲ ಕಾರ್ಖಾನೆಯ ಅಧಿಕಾರಿ ವರ್ಗ, ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರೊಂದಿಗೆ ಸಭೆ ನಡೆಸಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಏಳು ಬೀಳುಗಳ ನಡುವೆಯೂ ಕಾರ್ಖಾನೆ ಇನ್ನೂ ಸ್ವಲ್ಪ ಉಸಿರು ಇಟ್ಟುಕೊಂಡಿದೆ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಇರುವ ಅದನ್ನು ಉಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ’ ಎಂದರು.
‘ಕಾರ್ಖಾನೆಗೆ ಬಜೆಟ್‌ನಲ್ಲಿ ನೆರವು ಕೊಡುವಂತಹದ್ದು ಏನೂ ಇಲ್ಲ. ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) 2030ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿದೆ. ಆ ಗುರಿ ಮುಟ್ಟಲು ನಡೆಸಿರುವ ಸಿದ್ಧತೆಯಲ್ಲಿ ಈ ಕಾರ್ಖಾನೆಯ ಹಿತವೂ ಅಡಗಿದೆ. ಈಗ ಲೋಕಸಭಾ ಅಧಿವೇಶನ ನಡೆಯುತ್ತಿರುವುದರಿಂದ ವಿಐಎಸ್‌ಎಲ್‌ನ ಭವಿಷ್ಯ ಒಳಗೊಂಡಂತೆ ಕೆಲವು ನಿರ್ಧಾರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ’ ಎಂದು ತಿಳಿಸಿದರು.
ಕಾರ್ಮಿಕರೊಂದಿಗೆ ಸಭೆ ನಡೆಸುವ ಮುನ್ನ ಕಾರ್ಖಾನೆಯ ಬೇರೆ ಬೇರೆ ಉತ್ಪಾದನಾ ಘಟಕಗಳಿಗೆ (ಪ್ಲಾಂಟ್) ಭೇಟಿ ನೀಡಿದ ಕುಮಾರಸ್ವಾಮಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೇಂದು ಪ್ರಕಾಶ್, ಶಾಸಕರಾದ ಬಿ.ಕೆ.ಸಂಗಮೇಶ್ವರ, ಶಾರದಾ ಪೂರ್ಯಾನಾಯ್ಕ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಜೊತೆಗಿದ್ದರು.
ವಿಐಎಸ್‌ಎಲ್‌ನಿಂದ ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಗೆ ತೆರಳಿದ ಎಚ್.ಡಿ.ಕುಮಾರಸ್ವಾಮಿ, ಹಾವೇರಿ ಬಳಿ ಶುಕ್ರವಾರ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ವಿಐಎಸ್‌ಎಲ್ ಪುನಶ್ಚೇತನದ ದೃಷ್ಟಿಯಿಂದ ಕಾರ್ಖಾನೆಗೆ ಕಚ್ಚಾವಸ್ತು ಒದಗಿಸಲು ರಮಣದುರ್ಗದಲ್ಲಿ ಗಣಿಗಾರಿಕೆ ನಡೆಸುವುದೂ ಸೇರಿದಂತೆ ಇತರ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿರುವೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ.– ಎಚ್.ಡಿ.ಕುಮಾರಸ್ವಾಮಿ, ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.