ಶಿವಮೊಗ್ಗ: ‘ಪಂಚರತ್ನ ರಥಯಾತ್ರೆಯ ಬಗ್ಗೆ ಗೇಲಿ ಮಾಡುವವರಿಗೆ ಬಡವರ ಅಳಲು ತಿಳಿಯುವುದಿಲ್ಲ. ಅವರಿಗೆ ಭ್ರಷ್ಟಾಚಾರ ನಡೆಸಿ, ಲೂಟಿ ಮಾಡುವುದು ಮಾತ್ರ ಗೊತ್ತು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
‘ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಾಂಗ್ರೆಸ್ ಮುಖಂಡರು ಪಂಚರತ್ನ ಯಾತ್ರೆ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಯಾತ್ರೆಯ ಉದ್ದೇಶ ಬಡವರ ಕಲ್ಯಾಣವೇ ಹೊರತು ಅಧಿಕಾರದ ಗದ್ದಿಗೆ ಮೇಲೆ ಕೂತು ಮೆರೆಯುವುದಕ್ಕಲ್ಲ. ಯಾತ್ರೆಯ ಮೂಲಕ ಐದು ಯೋಜನೆಗಳನ್ನು ಪ್ರತಿ ಗ್ರಾಮಮಟ್ಟದಲ್ಲಿ ರೂಪಿಸುವುದಾಗಿ ಭರವಸೆ ನೀಡಿದ್ದೇನೆ. ಅದಕ್ಕೆ ಕಾರಣ ಬೇರೆಯೇ ಇದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪ್ರತಿ ದಿನ ನನ್ನ ಬಳಿ ಹತ್ತಾರು ಜನರು ತಮ್ಮ ಕಷ್ಟ ಹೇಳಿಕೊಂಡು ಬರುತ್ತಾರೆ. ಕೆಲವರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ ಎಲ್ಲಾ ರೀತಿಯಿಂದಲೂ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಅದಕ್ಕಂತಲೇ ಪ್ರತಿ ದಿನ ಲಕ್ಷಾಂತರ ರೂಪಾಯಿ ಹಣ ಬೇಕು. ಆ ಹಣವನ್ನು ನಾನು ಎಲ್ಲಿಂದ ತರಲಿ. ಅದೇ ಉದ್ದೇಶಕ್ಕೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದು, ಈ ಯೋಜನೆಗಳನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.
‘ರಾಜ್ಯದಲ್ಲಿ ಪಂಚರತ್ನ ಯಾತ್ರೆ ಮೂಲಕ 72 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದೇನೆ. ಪ್ರತಿ ದಿನ 40 ಹಳ್ಳಿಗಳನ್ನು ಕ್ರಮಿಸಿ ಅವರ ಕಷ್ಟವನ್ನು ಅರಿತಿದ್ದೇನೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಯ ಬಗ್ಗೆ ಆಲಿಸಿದ್ದೇನೆ. ಸರ್ಕಾರದ ಜಲ ಜೀವನ್ ವಿಷನ್ ಯೋಜನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅದು ಎಲ್ಲಿಯೂ ಸಮರ್ಪಕವಾಗಿಲ್ಲ. ಸ್ವಚ್ಛ ಭಾರತ ಯೋಜನೆ ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಗುಣ ಮಟ್ಟದಲ್ಲಿ ರೂಪುಗೊಂಡಿಲ್ಲ. ಅಲ್ಲಿಯ ಮಹಿಳೆಯರು ಬಹಿರ್ದೆಸೆಗೆ ಹೋಗಲು ಕೂಡ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಬೇಸರಿಸಿದರು.
‘ದೇವೆಗೌಡರ ಕುಟುಂಬದ ಸಾಧನೆಯ ಬಗ್ಗೆ ಆಡಳಿತ ಪಕ್ಷದವರು ಅಣಕಿಸುತ್ತಾರೆ. ನಮ್ಮ ಕುಟುಂಬ ಸಮಾಜಕ್ಕೆ ಕೊಟ್ಟ ಕೊಡುಗೆ ಬಗ್ಗೆ ಅವರಿಗೆ ಏನು ಗೊತ್ತು? ರಾಜ್ಯದಲ್ಲಿ ಕೆಎಂಎಫ್ ಹಾಗೂ ಜಯದೇವ ಆಸ್ಪತ್ರೆ ಉದ್ಧಾರಕ್ಕೆ ಎಚ್.ಡಿ. ರೇವಣ್ಣ ಹಾಗೂ ದೇವೆಗೌಡರ ಕೊಡುಗೆ ಅಪಾರ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿ ಬಿಡಲು ಇವರಿಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರ ಸೋಗಾನೆ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಮೊದಲು ನ್ಯಾಯ ದೊರಕಿಸಿ
ಕೊಡಲಿ. ಪೂರ್ಣ ಬಹುಮತದೊಂದಿಗೆ ರಾಜ್ಯದ 125 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಹೀಗಾಗಿ ಮೂರು ತಿಂಗಳ ಮೊದಲೇ ಸಂಘಟನೆ ಮಾಡುತ್ತಿದ್ದೇನೆ’ ಎಂದು ಹೇಳಿದರು.
ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಕಚ್ಚಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದ ಹಾಗೂ ಆ ಸ್ಥಾನದ ಮರ್ಯಾದೆಯನ್ನು ಅಧಿಕಾರಿಗಳು ತೆಗೆಯುತ್ತಿದ್ದಾರೆ. ಅವರನ್ನು ಅಮಾನತು ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವುದು ಬಿಟ್ಟು ದೇವಮಾನವರಂತೆ ಗೃಹ ಸಚಿವರು ನೋಡುತ್ತಿದ್ದಾರೆ. ಇದು ಆಡಳಿತದ ದುರಂತ’ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ‍್ಯಾನಾಯ್ಕ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ಕಾಂತರಾಜ್, ನರಸಿಂಹ ಗಂಧದ ಮನೆ, ಕಡಿದಾಳ್ ಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.