ADVERTISEMENT

ಶಿವಮೊಗ್ಗ: ಸೊಳ್ಳೆಗಳ ಉತ್ಪತ್ತಿ ತಡೆಗೆ ಗಪ್ಪಿ ಮೀನುಗಳ ಅಸ್ತ್ರ

ತೆರೆದ ಬಾವಿ, ಕೃಷಿ ಹೊಂಡ, ಕೆರೆಗಳಲ್ಲಿ ಮೀನುಗಳನ್ನು ಬಿಡುತ್ತಿರುವ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 7:32 IST
Last Updated 17 ಜೂನ್ 2024, 7:32 IST
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ದೊಣಬಘಟ್ಟ ಗ್ರಾಮದ ತೆರೆದ ಬಾವಿಯಲ್ಲಿ ಗಪ್ಪಿ ಮೀನುಗಳನ್ನು ಈಚೆಗೆ ಬಿಡಲಾಯಿತು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ದೊಣಬಘಟ್ಟ ಗ್ರಾಮದ ತೆರೆದ ಬಾವಿಯಲ್ಲಿ ಗಪ್ಪಿ ಮೀನುಗಳನ್ನು ಈಚೆಗೆ ಬಿಡಲಾಯಿತು   

ಶಿವಮೊಗ್ಗ: ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲಿಯೇ ನಿಯಂತ್ರಿಸಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯು ಸೊಳ್ಳೆಯ ಮೊಟ್ಟೆ ನಂತರದ ಹೊರಬರುವ ಲಾರ್ವಾ ತಿನ್ನುವ ಗಪ್ಪಿ ಮೀನುಗಳನ್ನು ಕೆರೆ, ತೆರೆದ ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಬಿಡುವ ಕಾರ್ಯಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 236 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಮಳೆಗಾಲ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಆರಂಭದಲ್ಲಿಯೇ ಅಂಕುಶ ಹಾಕುವ ಉದ್ದೇಶದಿಂದ ಇಲಾಖೆಯು ಗಪ್ಪಿ ಮೀನುಗಳನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.

ತೆರೆದ ಬಾವಿ, ಕೆರೆ, ಕೃಷಿ ಹೊಂಡ ಹಾಗೂ ಗುಂಡಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಇವು ಸೊಳ್ಳೆಯ ಲಾರ್ವಾ ಸೇವಿಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಾಂಕ್ರಾಮಿಕ ರೋಗ ಹರಡದಂತೆಯೂ ತಡೆಯಬಹುದು ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ. ಗಪ್ಪಿ ಮೀನುಗಳಿಗೆ ಲಾರ್ವಾಗಳೇ ಆಹಾರವಾಗಿವೆ.

ADVERTISEMENT

ಜಿಲ್ಲೆಯಲ್ಲಿ 80 ಗಪ್ಪಿ ಮೀನು ಸಾಕಾಣಿಕೆ ಕೇಂದ್ರಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,500 ಸ್ಥಳಗಳಲ್ಲಿ ಗಪ್ಪಿ ಮೀನುಗಳನ್ನು ಬಿಡುವ ಕಾರ್ಯ ಆರಂಭಿಸಲಾಗಿದೆ. ಕಳೆದ ವರ್ಷ 1,300 ಸ್ಥಳಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗಿತ್ತು. 

ಸಣ್ಣದಾಗಿರುವ ತೆರೆದ ಬಾವಿಯಲ್ಲಿ 300ರಿಂದ 400, ಕೃಷಿ ಹೊಂಡದಲ್ಲಿ 400ರಿಂದ 500, ದೊಡ್ಡ ಕೆರೆಯಲ್ಲಿ 800ರಿಂದ 1,000ದವರೆಗೆ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ.

ಮನೆಗಳಲ್ಲಿ ವಾರಕ್ಕಿಂತಲೂ ಹೆಚ್ಚು ಕಾಲ ನೀರು ಸಂಗ್ರಹ ಮಾಡಬಾರದು. ಶುದ್ಧ ನೀರಿನಲ್ಲಿಯೂ ಸೊಳ್ಳೆಗಳ ಉತ್ಪಾದನೆಯಾಗುತ್ತದೆ. ಹೀಗಾಗಿ ವಾರಕ್ಕಿಂತಲೂ ಹೆಚ್ಚು ದಿನ ನೀರು ಸಂಗ್ರಹಿಸಿ ಇಡಬಾರದು. ನೀರು ತುಂಬುವ ಪರಿಕರಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ತಿಳಿಸಿದರು. 

‘ಮನೆಯಲ್ಲಿ ನೀರು ಸಂಗ್ರಹ ಮಾಡಿರುವುದನ್ನು ಪರಿಶೀಲಿಸಲು ಹೋದಾಗ ಬಹುತೇಕ ಮನೆಗಳ ಮಾಲೀಕರು ಆರೋಗ್ಯ ಇಲಾಖೆಗೆ ಸಹಕಾರ ನೀಡುತ್ತಿಲ್ಲ. ವಾರಕ್ಕಿಂತಲೂ ಹೆಚ್ಚು ಕಾಲದಿಂದ ನೀರು ಸಂಗ್ರಹಿಸಿರುವುದು ಪತ್ತೆಯಾದಾಗ, ನೀರು ಚೆಲ್ಲುವಂತೆ ಹೇಳಿದರೂ ಚೆಲ್ಲುವುದಿಲ್ಲ. ನಾವು ಆರೋಗ್ಯವಾಗಿದ್ದೇವೆ ಎಂದು ಹೇಳಿ ಅಸಹಕಾರ ತೋರುತ್ತಾರೆ’ ಎಂದು ಇಲಾಖೆ ಸಿಬ್ಬಂದಿ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 1500 ಸ್ಥಳಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಈ ಮೂಲಕ ಸಾಂಕ್ರಾಮಿಕ ರೋಗಗಳ ತಡೆಗೆ ಜನರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
ಡಾ.ಗುಡದಪ್ಪ ಕಸಬಿ ಮಲೇರಿಯಾ ಜಿಲ್ಲಾ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.